Industry: ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಪ್ರಮುಖ 350 ಸಾಧನ ಕರ್ನಾಟಕದಲ್ಲೇ ತಯಾರು
ಬೆಂಗಳೂರು, ಮಾರ್ಚ್ 21: ನವೋದ್ಯಮ ಕ್ಷೇತ್ರದಲ್ಲಿ ವೈದ್ಯಕೀಯ ಮತ್ತು ಔಷಧ ತಯಾರಿಕೆ ವಲಯದ ನೂರಾರು ಕಂಪನಿಗಳು ಕರ್ನಾಟಕದಲ್ಲಿ ನೆಲೆಯೂರಿವೆ. ಚರ್ಮಶಾಸ್ತ್ರ ಮತ್ತು ಸೌಂದರ್ಯ ವರ್ಧಕ ವೈದ್ಯಕೀಯ ಚಿಕಿತ್ಸಾ ವಲಯದ ಹೂಡಿಕೆದಾರರಿಗೆ ಕ್ವಿನ್ ಸಿಟಿ ಯೋಜನೆ ಸೇರಿದಂತೆ ಹಲವೆಡೆ ಹೇರಳ ಅವಕಾಶಗಳಿವೆ. ಉದ್ಯಮಿಗಳು ನಮ್ಮಲ್ಲಿ ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಸಂಪೂರ್ಣ ಸಹಕಾರ ಸರ್ಕಾರ ನೀಡಲಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ಬೆಂಗಳೂರಿನ ಹೊರವಲಯದ ವೈಟ್ ಫೀಲ್ಡ್‌ನಲ್ಲಿ ನಡೆದ ಅಖಿಲ ಭಾರತ ಲೇಸರ್ ಚಿಕಿತ್ಸೆ ಮತ್ತು ಸರ್ಜರಿ ಸಮಾವೇಶವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವಂತಹ 350 ಸಾಧನಗಳು ರಾಜ್ಯದಲ್ಲೇ ತಯಾರಾಗುತ್ತಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಲೇಸರ್ ಮೆಡಿಸಿನ್ ವಲಯದ ಹೂಡಿಕೆಗೆ ರಾಜ್ಯ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ಕೊಟ್ಟರು.

ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆಗಳಲ್ಲಿ ಲೇಸರ್ ಮೆಡಿಸಿನ್ ಮಹತ್ತ್ವದ ಪಾತ್ರ ವಹಿಸುತ್ತಿದೆ. ಮೆಡ್-ಟೆಕ್ ಕ್ಷೇತ್ರದಲ್ಲಿ ಕರ್ನಾಟಕವು ಅತ್ಯುತ್ತಮ ಕಾರ್ಯಪರಿಸರ ಹೊಂದಿದೆ. ಕ್ಷಿಪ್ರ ಬೆಳವಣಿಗೆ ಕಾಣುತ್ತಿದೆ. ದೇಶದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಗತ್ಯವಾಗಿರುವ ಸಾಧನಗಳ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇಕಡ 25ರಷ್ಟಿದೆ. ಇದರ ಜತೆಗೆ ದೇಶದ ಬಯೋಟೆಕ್ ಕಂಪನಿಗಳಲ್ಲಿ ಶೇಕಡ 60 ನಮ್ಮಲ್ಲೇ ಇದೆ. ದೇಶದ ಔಷಧ ರಫ್ತು ವಹಿವಾಟಿನಲ್ಲಿ ನಮ್ಮ ಪಾಲು ಶೇಕಡ 40ರಷ್ಟಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ಪಿಸಿಆರ್ ಯಂತ್ರ, ಸ್ಟಂಟ್ ಇತರ ಉತ್ಪಾದನೆ
ಮೆಡಿಕಲ್ ಐಟಿ, ಪಿಸಿಆರ್ ಯಂತ್ರಗಳು, ಹೃದಯದ ಚಿಕಿತ್ಸೆಗೆ ಬೇಕಾಗುವ ಸ್ಟೆಂಟ್, ಇನ್ಸುಲಿನ್ ಪೆನ್ ಮುಂತಾದವುಗಳ ತಯಾರಿಕೆಯಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ವೈದ್ಯಕೀಯ ಸಾಧನಗಳು, ಡಿಜಿಟಲ್ ಆರೋಗ್ಯ, ರೋಗ ಪತ್ತೆ ಮುಂತಾದವು ಹೊಸ ದಾರಿ ತುಳಿಯಲಿವೆ. ಅಂತಹ ತಂತ್ರಜ್ಞಾನವು ರಾಜ್ಯದಲ್ಲಿರುವ ಕಂಪನಿಗಳಿಂದ ಅಭಿವೃದ್ಧಿಯಾಗುತ್ತಿದೆ. ಲೇಸರ್ ಚಿಕಿತ್ಸೆ ವಲಯದಲ್ಲಿರುವವರು ಇದನ್ನು ಗಮನಿಸಬೇಕು ಎಂದು ಸಲಹೆ ನಿಡಿದರು.
ದೇಶದ ಆರೋಗ್ಯ ಸೇವೆ ಮತ್ತು ಹೂಡಿಕೆ ಎರಡರಲ್ಲೂ ರಾಜ್ಯವು ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಜಾಲವೇ ಇದ್ದು, ಇವುಗಳನ್ನು ನಾವು ಜನರ ಸಬಲೀಕರಣಕ್ಕೆ ಬಳಸಿಕೊಳ್ಳಬೇಕು. ಕೈಗೆಟುಕುವ ದರದಲ್ಲಿ ಮತ್ತು ಕ್ಷಿಪ್ರ ಗತಿಯಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತರೆ ಮಾತ್ರ ವಿಶ್ವಾಸಾರ್ಹತೆ ಬೆಳೆಯುತ್ತದೆ. ಇವುಗಳ ಜತೆಗೆ ಸಂಶೋಧನೆ ಮತ್ತು ನಾವೀನ್ಯತೆ ಹಾಗೂ ಅವುಗಳ ವಾಣಿಜ್ಯ ಬಳಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು ಎಂದರು.

ಆಭರಣ ಉದ್ಯಮಿಗಳಿಗೆ ವಿಫುಲ ಅವಕಾಶ
ಈ ಕಾರ್ಯಕ್ರಮಕ್ಕೂ ಮೊದಲು ಅವರು ಬೆಂಗಳೂರಿನಲ್ಲಿ ಇಂದಿನಿಂದ ನಾಲ್ಕು ದಿನ ಆಯೋಜಿಸಿರುವ ಆಭರಣ ಮೇಳಕ್ಕೆ ಚಾಲನೆ ನೀಡಿದರು. ಆಭರಣ ಉದ್ಯಮಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ವಿಫುಲ ಅವಕಾಶಗಳು ಇವೆ. ಬೆಂಗಳೂರು ಏರ್‌ಪೋರ್ಟ್ ಬಳಿಕ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಉದ್ಯಮಿಗಳು ಮುಂದಾಗುವಂತೆ ಕೈಗಾರಿಕೆ ಸಚಿವರು ಕರೆ ನೀಡಿದ್ದಾರೆ.












Click it and Unblock the Notifications