ಸಂವಿಧಾನದ ಆಶಯದಡಿ ದೀನ ದುರ್ಬಲರ ಏಳಿಗೆಗೆ ಸರ್ಕಾರ ಕ್ರಮ: ಸಿಎಂ
ಬೆಂಗಳೂರು, ಡಿಸೆಂಬರ್ 06: ರಾಜ್ಯ ಸರ್ಕಾರ ಸಂವಿಧಾನದ ಆಶ್ರಯದಲ್ಲಿ ಇಂದಿನ ಸನ್ನಿವೇಶಗಳಲ್ಲಿ ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲಿದೆ. ಈ ನಿಟ್ಟಿನಲ್ಲಿ ಮಾಡುತ್ತಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 66 ನೇ ಮಹಾಪರಿನಿರ್ವಾಣ ಹಾಗೂ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಮಂಗಳವಾರ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿದರು. ಸಂವಿಧಾನದ ಜೀವಂತಿಕೆಗೆ ಬದಲಾದ ಕಾಲದ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಲು, ಸಂವಿಧಾನದಲ್ಲಿ ತಿದ್ದುಪಡಿ ಆಯಾಮಕ್ಕೆ ಸ್ಪಂದಿಸಬೇಕಿದೆ. ಹಲವಾರು ಭಾಷೆ, ಜಾತಿ, ಪ್ರಾಂತ್ಯಗಳಿಂದ ಕೂಡಿದ ಭಾರತದಲ್ಲಿ ಸಂವಿಧಾನದಿಂದ ಎಲ್ಲವನ್ನು ಒಂದುಗೂಡಿಸಿ ಎಲ್ಲರ ಭಾವನೆ ಹೆಣೆಯಲಾಗಿದೆ. ಅಖಂಡ ಭಾರತ ದೇಶವನ್ನು ರೂಪಿಸುವ ಜೊತೆಗೆ ದೀರ್ಘಕಾಲ ಪ್ರಜಾಪ್ರಭುತ್ವದ ಜೀವಂತಿಕೆಗೆ ಅಂಬೇಡ್ಕರ್ ನಾಂದಿ ಹಾಡಿದ್ದಾರೆ ಎಂದು ತಿಳಿಸಿದರು.
ಮಹಾಪರಿನಿರ್ವಾಣ ದಿವಸ್: ಡಾ. ಭೀಮ್ ರಾವ್ ಅಂಬೇಡ್ಕರ್ ಪುಣ್ಯತಿಥಿ ಬಗ್ಗೆ ತಿಳಿಯಿರಿ
ದೇಶದಲ್ಲಿ ಸಂವಿಧಾನ ಇಲ್ಲದಿದ್ದಿದ್ದರೆ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ಹಲವಾರು ದೇಶಗಳು ಪ್ರಜಾಪ್ರಭುತ್ವದ ಪ್ರಯೋಗದಲ್ಲಿ ಎಲ್ಲಿ ಯಶಸ್ವಿಯಾಗಿಲ್ಲವೋ, ಅಲ್ಲೇ ಭಾರತ ಯಶಸ್ವಿಯಾಗಿದೆ. ಅದಕ್ಕೆ ಬಿ.ಆರ್. ಅಂಬೇಡ್ಕರ್ ಅವರು ಕಾರಣ. ನಿಜವಾದ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಬೊಮ್ಮಾಯಿ ಬಣ್ಣಿಸಿದರು.
ಶಿಕ್ಷಣ, ಸಂಘಟನೆ, ಹೋರಾಟ ಎಂಬ ಘೋಷವಾಕ್ಯದಿಂದ ಜನರ ಜಾಗೃತಿ , ಬುದ್ದಿವಂತರನ್ನಾಗಿಸುವುದು ಹಾಗು ಹೋರಾಟದ ಕಲ್ಪನೆ ನೀಡಿದ್ದಾರೆ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಈಡೇರಿಸಲು ಆಡಳಿತ, ಆಡಳಿತ ವರ್ಗ, ಸಮಾಜ ಸೇರಿದಂತೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಅಂಬೇಡ್ಕರ್ ಆಶಯ ಭಾಷಣದ ಸರಕಾಗಬಾರದು
ಸಮಾನತೆ, ಸಾಮಾಜಿಕ ನ್ಯಾಯ ಕೇವಲ ಮಾತಿನಿಂದ ಆಗುವುದಿಲ್ಲ. ಇವುಗಳೆಲ್ಲ ಭಾಷಣಗಳ ಸರಕಾಗಬಾರದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾನತೆ, ಸಾಮಾಜಿಕ ನ್ಯಾಯವನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಸಾಮಾಜಿಕ ಸಮಾನತೆ ಜಾರಿಗೆ ತರಲು, ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ಎಲ್ಲಾ ಆಯಾಮಗಳಲ್ಲಿ ಮುಕ್ತ ಅವಕಾಶ ನೀಡಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಮೀಸಲಾತಿ ಹೆಚ್ಚಳ ಕ್ರಾಂತಿಕಾರಿ ನಿರ್ಧಾರ
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ಕ್ರಾಂತಿಕಾರಿ ನಿರ್ಧಾರ ಮಾಡಿದ್ದೇವೆ. ಭವಿಷ್ಯದಲ್ಲಿ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದಲ್ಲಿ ಶಕ್ತಿಯನ್ನು ತುಂಬುವ ಕೆಲಸ ಆಗುತ್ತಿದೆ. 29 ಸಾವಿರ ಕೋಟಿ ರೂ. ಎಸ್‌ಸಿ, ಎಸ್‌ಪಿ/ ಟಿಎಸ್‌ಪಿ ಅನುದಾನದಲ್ಲಿ ಮೀಸಲಿಟಿದ್ದೇವೆ. ಶಿಕ್ಷಣಕ್ಕೆ ಒಟ್ಟು ನೂರು ಅಂಬೇಡ್ಕರ್ ಹಾಸ್ಟೆಲ್, 55 ಕನಕದಾಸ ಹಾಸ್ಟೆಲ್ ಹಾಗೂ 5 ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಮೈಸೂರು, ಧಾರವಾಡ, ಮಂಗಳೂರು, ಬೆಂಗಳೂರು, ಕಲಬುರಗಿಯಲ್ಲಿ ಮೆಗಾ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದರು.

ಅಂಬೇಡ್ಕರ್ ಭೇಟಿ ನೀಡಿದ ಸ್ಥಳ ಅಭಿವೃದ್ಧಿ
ಉದ್ಯೋಗದಲ್ಲಿರುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್, 75 ಯೂನಿಟ್ ವರೆಗೂ ಉಚಿತ ವಿದ್ಯುತ್ ಸರಬರಾಜು, ಗೃಹ ನಿರ್ಮಾಣ ಕ್ಕೆ 2 ಲಕ್ಷ ರೂಗಳ ಸಹಾಯಧನ, ಭೂ ಒಡೆತನ ಯೋಜನೆಯಡಿ 15 ಲಕ್ಷದಿಂದ 20 ಲಕ್ಷಕ್ಕೆ ಅನುದಾನ ಹೆಚ್ಚಿಸಲಾಗಿದೆ. ಅಂಬೇಡ್ಕರ್ ಭೇಟಿ ನೀಡಿದ ಕರ್ನಾಟಕದ 10 ಸ್ಥಳಗಳ ಅಭಿವೃದ್ಧಿಗೆ 10 ಕೋಟಿ ರೂ. ಒದಗಿಸಲಾಗುತ್ತಿದೆ. ವಿಕಾಸಸೌಧದ ಮುಂಭಾಗ ಡಾ. ಬಿ.ಆರ್.ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ 50ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದರು.

ಸಾಗಿ ಬಂದ ಬಗ್ಗೆ ಆತ್ಮಾವಲೋಕನ ಅಗತ್ಯ
ಇಂದು ಆತ್ಮಾವಲೋಕನ ಮಾಡಿಕೊಂಡು ನಡೆದುಬಂದ ದಾರಿಯ ಬಗ್ಗೆ ವಿಚಾರ ಮಾಡುವ ದಿನ ಪರಿವರ್ತನೆ ನಮ್ಮಿಂದಲೇ ಪ್ರಾರಂಭವಾಗಬೇಕು. ಬಡಜನರಿಗೆ, ದೀನ ದಲಿತರಿಗಾಗಿ ಯಾವ ರೀತಿಯ ಕೆಲಸ ಮಾಡಬೇಕು, ಆಗಿರುವ ಕೆಲಸಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ದಲಿತರಿಗೆ ಜನಕ್ಕೆ ನ್ಯಾಯ ನೀಡಲು ಸರ್ಕಾರ ಅನೇಕ ಕೆಲಸಗಳನ್ನು ಮಾಡಲಿದೆ ಎಂದು ಬೊಮ್ಮಾಯಿ ಭರವಸೆ ನೀಡಿದರು.