ಈಜಿಪುರ ಫ್ಲೈ ಓವರ್ ಕಾಮಗಾರಿ ಟೆಂಡರ್ ರದ್ದು
ಬೆಂಗಳೂರು, ಮಾರ್ಚ್ 09: ಹಲವಾರು ನೋಟಿಸ್, ಎಚ್ಚರಿಕೆಗಳು, ಪ್ರತಿಭಟನೆ ಯಾವುದೂ ಸಹ ಬೆಂಗಳೂರು ನಗರದ 2ನೇ ಅತಿ ದೊಡ್ಡ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ವೇಗ ನೀಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸರ್ಕಾರ ಕಾಮಗಾರಿಯ ಟೆಂಡರ್ ರದ್ದುಗೊಳಿಸಿದೆ. ಇದರಿಂದಾಗಿ ಯೋಜನೆ ಪೂರ್ಣಗೊಳ್ಳುವುದುದ ಮತ್ತಷ್ಟು ವಿಳಂಬವಾಗಲಿದೆ.
ಈಜಿಪುರ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ನೀಡಿದ್ದ ಟೆಂಡರ್ ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. 2017ರಲ್ಲಿ ಆರಂಭವಾದ ಕಾಮಗಾರಿ ನಿಗದಿಯಂತೆ 2019ರ ಮೇ ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ 2022ರ ಮಾರ್ಚ್ ತಿಂಗಳಿನಲ್ಲಿ ಶೇ 45ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಕೋರಮಂಗಲ 100 ಅಡಿ ಮುಖ್ಯ ರಸ್ತೆಯಿಂದ ಈಜಿಪುರ ಮುಖ್ಯ ರಸ್ತೆ-ಒಳವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರಿಯ ಸದನ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. 2.4 ಕಿ. ಮೀ. ಮೇಲ್ಸೇತುವೆ ಯೋಜನೆಗೆ ಕುಟುಂತ್ತಾ ಸಾಗಿದ್ದು, ಈಗ ಟೆಂಡರ್ ಸಹ ರದ್ದುಗೊಂಡಿದೆ. ಇದರಿಂದಾಗಿ ಯೋಜನೆಗೆ ಮತ್ತೆ ಗ್ರಹಣ ಹಿಡಿದಿದೆ.
ಬೆಂಗಳೂರು ನಗರದ ಅತಿ ದೊಡ್ಡ ಫ್ಲೈ ಓವರ್ ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈ ಓವರ್ 2.65 ಕಿ. ಮೀ. ಉದ್ದವಿದೆ. ಅದನ್ನು ಹೊರತುಪಡಿಸಿದರೆ ಈಜಿಪುರ ಫ್ಲೈ ಓವರ್ 2.4 ಕಿ. ಮೀ. ಎರಡನೇ ಅತಿದೊಡ್ಡ ಫ್ಲೈ ಓವರ್ ಆಗಿತ್ತು. ಆದರೆ ಈ ಯೋಜನೆ ಪೂರ್ಣಗೊಳ್ಳುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಸಿದ್ದರಾಮಯ್ಯ ಶಂಕು ಸ್ಥಾಪನೆ ಮಾಡಿದ್ದರು
ನಗರೋತ್ಥಾನ ಯೋಜನೆಯಡಿ 2.4 ಕಿ. ಮೀ. ಉದ್ದದ ಈಜಿಪುರ ಫ್ಲೈ ಓವರ್ ಕಾಮಗಾರಿಯನ್ನು 203.20 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. 2017ರ ಜು. 24ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಸಿಂಪೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ಗೆ ಕಂಪನಿಗೆ 2017ರ ಆಗಸ್ಟ್ 6ರಂದು ಕಾರ್ಯಾದೇಶ ನೀಡಲಾಯಿತು. ಟೆಂಡರ್ ನೀಡುವಾಗ 2019ರ ನವೆಂಬರ್‌ಗೆ ಯೋಜನೆ ಪೂರ್ಣಗೊಳಿಸಬೇಕು ಎಂದು ಷರತ್ತು ಹಾಕಲಾಗಿತ್ತು. ಆದರೆ 2022ರ ಮಾರ್ಚ್ ಬಂದರೂ ಸಹ ಶೇ 45ರಷ್ಟು ಕಾಮಗಾರಿ ಮಾತ್ರ ಆಗಿದೆ.

ಎಷ್ಟು ಹಣ ಪಾವತಿ ಮಾಡಲಾಗಿದೆ?
ಯೋಜನೆ ಕಾಮಗಾರಿ ಕೈಗೊಂಡ ಕಂಪನಿಗೆ 2021ರ ಸೆಪ್ಟೆಂಬರ್ ತನಕ 75.11 ಕೋಟಿ ರೂ. ಪಾವತಿ ಮಾಡಲಾಗಿದೆ. ಕಾಮಗಾರಿ ವಿಳಂಬ ಕುರಿತು ಹಲವು ಬಾರಿ ನೋಟಿಸ್ ನೀಡಲಾಯಿತು. ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ ಕಾಮಗಾರಿ ವೇಗ ಹೆಚ್ಚಿಸಿ ಎಂದು ಸೂಚನೆ ನೀಡಿದರು. ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಯೋಜನೆ ವಿಳಂಬ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಆದರೆ ಈಜಿಪುರ ಫ್ಲೈ ಓವರ್ ಕಾಮಗಾರಿ ಆಮೆಗತಿಯಲ್ಲೇ ಸಾಗುತ್ತಿದೆ.

ನಾಲ್ಕು ಪಥದ ಫ್ಲೈ ಓವರ್ ಆಗಿದೆ
ನಾಲ್ಕು ಪಥದ ಫ್ಲೈ ಓವರ್. 2.50 ಮೀಟರ್ ಅಗಲದ ಪಾದಚಾರಿ ಮಾರ್ಗ, 5.50 ಮೀಟರ್ ಅಗಲದ ಸರ್ವೀಸ್ ರಸ್ತೆ, ಫ್ಲೈ ಓವರ್ ಎರಡೂ ಕಡೆ 2 ಮೀಟರ್ ಅಗಲದ ಸೈಕಲ್ ಪಥ ಹೀಗೆ ಅಚ್ಚುಕಟ್ಟಾಗಿ ಯೋಜನೆ ರೂಪಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಯೋಜನೆ ಕಾಮಗಾರಿಯೇ ಈಗ ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ಕಾಮಗಾರಿಯೂ ಪೂರ್ಣಗೊಳ್ಳದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನೂ ಒಂದು ವರ್ಷ ಬೇಕು
ಈಜಿಪುರ ಫ್ಲೈ ಓವರ್ ಕಾಮಗಾರಿ ಈಗ ಶೇ 45ರಷ್ಟು ಪೂರ್ಣಗೊಂಡಿದೆ. ಮರು ಟೆಂಡರ್ ಕರೆದು ಕಾಮಗಾರಿ ಕೈಗೊಂಡರೂ ಅದನ್ನು ಪೂರ್ಣಗೊಳಿಸಲು ಸುಮಾರು 1 ವರ್ಷಗಳು ಬೇಕು ಎಂಬುದು ಬಿಬಿಎಂಪಿ ಅಧಿಕಾರಿಗಳ ಅಂದಾಜು. ಅಲ್ಲದೇ ಕಾಮಗಾರಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಜನೆ ಕಾಮಗಾರಿ ಕೈಗೊಳ್ಳುವಾಗ ಸ್ಥಳೀಯರ ಅಹವಾಲು ಸ್ವೀಕಾರ ಮಾಡಿಯೇ ಇಲ್ಲ ಎಂಬುದು ದೂರಾಗಿದೆ. ಕೋವಿಡ್ ಕಾರಣದಿಂದ ನಿಂತು ಹೋಗಿದ್ದ ಕಾಮಗಾರಿ ಪುನಃ ಆರಂಭವಾಗಿತ್ತು. ಆದರೆ ಮೂರು ತಿಂಗಳ ಬಳಿಕ ಕಾಮಗಾರಿ ಪೂರ್ಣವಾಗಿ ನಿಂತು ಹೋಯಿತು. ಈಗ ಸರ್ಕಾರವೇ ಟೆಂಟರ್ ರದ್ದುಗೊಳಿಸಿದೆ.












Click it and Unblock the Notifications