ಬೆಂಗಳೂರಲ್ಲಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನಾ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಒಪ್ಪಿಗೆ
ಬೆಂಗಳೂರು, ಜನವರಿ 02: ಬೆಂಗಳೂರಿನ ಹೊರವಲಯದ ಬಿಬಿಎಂಪಿ ವ್ಯಾಪ್ತಿಯ ಜಾಗದಲ್ಲಿ ಸಂಕುಚಿತ ಜೈವಿಕ ಅನಿಲ (ಸಿಎನ್‌ಜಿ) ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಒಟ್ಟು ಸುಮಾರು 18 ಎಕರೆ ಪ್ರದೇಶದಲ್ಲಿ ಈ ಅನಿಲ ಘಟಕ ತಲೆ ಎತ್ತಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನಿತ್ಯ ನಗರದಲ್ಲಿ 4,500 ಟನ್ ತ್ಯಾಜ್ಯದಲ್ಲಿ ಶೇ.50 ಕ್ಕಿಂತ ಕಡಿಮೆ ತ್ಯಾಜ್ಯ ಸಂಸ್ಕರಿಸಲಾಗುತ್ತಿದೆ. ಉಳಿದ ತ್ಯಾಜ್ಯವನ್ನು ಸುರಿಯುವ ಬದಲು ವೈಜ್ಞಾನಿಕವಾಗಿ ಸಂಸ್ಕರಿಸುವ ಶೇಕಡಾವಾರು ಜೈವಿಕ ಅನಿಲ ಹೆಚ್ಚಿಸಬಹುದಾಗಿದೆ. ಈ ಕಾರಣದಿಂದಲೇ ಬಿಬಿಎಂಪಿಯು ಘಟಕ ಸ್ಥಾಪನೆಗೆ ಅನುಮತಿ ಪಡೆದ ಗೈಲ್ (GAIL) ಗ್ಯಾಸ್ ಲಿಮಿಟೆಡ್ ಕಂಪನಿಗೆ ಪ್ರತಿದಿನ 300 ಟನ್ ಹಸಿ ತ್ಯಾಜ್ಯವನ್ನು ಪೂರೈಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ರಾಜ್ಯ ಸರ್ಕಾರದ ನಿರ್ದೇಶನ ಮೇರೆಗೆ ಬಿಬಿಎಂಪಿಯು 18 ಎಕರೆ ಭೂಮಿಯನ್ನು 25 ವರ್ಷಗಳ ಅವಧಿಗೆ ಕಂಪನಿಗೆ ಹಸ್ತಾಂತರಿಸಿದೆ. ಸಾವಯವ ಹಸಿ ತ್ಯಾಜ್ಯವನ್ನು ಪೂರೈಸಲಿದೆ. ಈ ಘಟಕವು ದಿನಕ್ಕೆ 10.7 ಟನ್ ಸಂಕುಚಿತ ಜೈವಿಕ ಅನಿಲ, ಸುಮಾರು 31.39 ಮೆಟ್ರಿಕ್ ಟನ್ ಗೊಬ್ಬರ ಮತ್ತು 180 ಮಿ.ಟನ್ ಹುದುಗಿಸಿದ ಸಾವಯವ ಗೊಬ್ಬರವನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಘಟಕ ಸ್ಥಾಪನೆಗೆ ಒಟ್ಟು 65.11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಪೈಕಿ ಶೇ.40ರಷ್ಟು ಹಣವನ್ನು ಕಂಪನಿ ಭರಿಸಿದರೆ, ಬಾಕಿ ಶೇ.60ರಷ್ಟು ಬ್ಯಾಂಕ್ ಸಾಲದ ಮೂಲಕ ಮತ್ತು ಕೇಂದ್ರ ಸರ್ಕಾರ ಕಾರ್ಯಕ್ರಮಗಳ ಸಹಾಯಧನದ ಮೂಲಕ ಪಡೆಯಲಾಗುತ್ತದೆ.
ಪರಿಸರ ಸ್ನೇಹಿ ಮತ್ತು ಹಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಶುದ್ಧ ನೈಸರ್ಗಿಕ ಅನಿಲವನ್ನು ಉತ್ಪಾದಿಸುತ್ತದೆ. ಭವಿಷ್ಯದಲ್ಲಿ ಹಸಿ ತ್ಯಾಜ್ಯವನ್ನು 500 ಟನ್‌ಗಳಿಗೆ ವಿಸ್ತರಿಸಲು ಬಿಬಿಎಂಪಿ ಯೋಜಿಸಿದೆ. ಈ ಮೂಲಕ ನಗರದಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯ ಸಮಸ್ಯೆ ನಿವಾರಿಸಲು ನಾಗರಿಕ ಸಂಸ್ಥೆ ಮುಂದಾಗಿದೆ. ಈ ನಿಟ್ಟಿನಲ್ಲಿ ಘಟಕ ಸ್ಥಾಪಿಸಲಿರುವ ಕಂಪನಿಗೆ ಬಿಬಿಎಂಪಿ ಕೆಲವು ಷರತ್ತುಗಳುನ್ನು ವಿಧಿಸಿದೆ.

ಷರತ್ತಿನ ಅಂಶಗಳು ಹೀಗಿವೆ
* ಗೈಲ್ ಲಿಮಿಟೆಡ್ ಕಂಪನಿಗೆ ಸ್ಕರಣಾ ಶುಲ್ಕ, ಟಿಪ್ಪಿಂಗ್ ಶುಲ್ಕ/ಸಾಲವನ್ನು ಬಿಬಿಎಂಪಿ ಪಾವತಿಸುವುದಿಲ್ಲ.
* ಕಂಪನಿಯು ಉತ್ಪನ್ನ ಮಾರಾಟದಿಂದ ಬಂದ ಆದಾಯ ಹಂಚಿಕೆ ಮಾಡಿಕೊಳ್ಳಬೇಕು.
* ಸಂಸ್ಥೆಯು ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಸರ ಅನುಮತಿಯನ್ನೂ ಪಡೆಯಬೇಕು
* 25 ವರ್ಷಗಳ ನಂತರ ಭೂಮಿಯನ್ನು ಬಿಬಿಎಂಪಿಗೆ ಹಿಂತಿರುಗಿಸಬೇಕು.
* ಒಂದು ವೇಳೆ ಕಂಪನಿಯು ಪ್ರದೇಶವನ್ನು ಇತರ ಉದ್ದೇಶಕ್ಕೆ ಬಳಸಿದರೆ ಒಪ್ಪಂದ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications