ಬೆಂಗಳೂರು ಅಭಿವೃದ್ಧಿ; 3661 ಕೋಟಿ ಅನುದಾನ ಬಿಡುಗಡೆ
ಬೆಂಗಳೂರು, ಮಾರ್ಚ್ 04: ಕರ್ನಾಟಕ ಸರ್ಕಾರ ಬೆಂಗಳೂರು ನಗರದ ಮೂಲ ಸೌಕರ್ಯ ಅಭಿವೃದ್ಧಿಗಾಗಿ 3,661 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಬಿಜೆಪಿ ಶಾಸಕರು ಇರುವ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಕ್ಕಿದೆ.
ಬಜೆಟ್ ಮಂಡನೆಗೂ ಮುನ್ನವೇ ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿನ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿದೆ. ರಸ್ತೆ, ಗ್ರೇಡ್ ಸಪರೇಟರ್, ರಾಜಾ ಕಾಲುವೆ, ಉದ್ಯಾನವನ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ.
15 ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ 2,718 ಕೋಟಿ ರೂ. ಮತ್ತು 12 ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ 833 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಈ ಅನುದಾನ ಸಹಾಯಕವಾಗಲಿದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ನಗರದ ಅಭಿವೃದ್ಧಿಗೆ 6 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಅವರು ಘೋಷಣೆ ಮಾಡಿದ್ದರು. ಇದರಲ್ಲಿ 3,661 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
2021ರ ಆಗಸ್ಟ್ ತಿಂಗಳಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ಮೊದಲ ಹಂತದಲ್ಲಿ ಬಿಜೆಪಿ ಶಾಸಕರು ಮಾತ್ರ ಪ್ರತಿನಿಧಿಸುವ 15 ವಿಧಾನಸಭಾ ಕ್ಷೇತ್ರಗಳಿಗೆ 2,718 ಕೋಟಿ ಅನುದಾನ ಬಿಡುಡಗಡೆ ಮಾಡಲಾಗಿತ್ತು.
ಬಳಿಕ 13 ವಿಧಾನಸಭಾ ಕ್ಷೇತ್ರಗಳಿಗೆ 943 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳೇ ಇದರಲ್ಲಿ ಹೆಚ್ಚಿದ್ದವು. ಈ ವರ್ಷದ ಫೆಬ್ರವರಿ 25ರಂದು ಸರ್ಕಾರ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ವಿಶೇಷ ಅನುದಾನ ನಿಗದಿ ಮಾಡಿತ್ತು.
ಯಾವ ಕ್ಷೇತ್ರಕ್ಕೆ ಎಷ್ಟು?; ಈಗ ಬಿಡುಗಡೆಯಾಗಿರುವ ಅನುದಾನದಲ್ಲಿ ಮಹದೇವಪುರ 208 ಕೋಟಿ, ಆರ್. ಆರ್. ನಗರ 208 ಕೋಟಿ, ಬೊಮ್ಮನಹಳ್ಳಿ 207 ಕೋಟಿ, ಕೆ. ಆರ್. ಪುರ 207 ಕೋಟಿ, ಬೆಂಗಳೂರು ದಕ್ಷಿಣ 206 ಕೋಟಿ, ಯಶವಂತಪುರ 202 ಕೋಟಿ ಅನುದಾನ ಹಂಚಿಕೆಯಾಗಿದೆ.
ಗೋವಿಂದರಾಜನಗರ, ಪದ್ಮನಾಭ ನಗರ, ಯಲಹಂಕ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ, ಸಿ. ವಿ. ರಾಮನ್ ನಗರ ಕ್ಷೇತ್ರಗಳಿಗೆ 150 ರಿಂದ 200 ಕೋಟಿ ರೂ. ತನಕ ಅನುದಾನ ನೀಡಲಾಗಿದೆ.
ನಗರಾಭಿವೃದ್ಧಿ ಇಲಾಖೆ 15 ದಿನದಲ್ಲಿ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ನಕ್ಷೆ ತಯಾರು ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಿದೆ. ಈ ಯೋಜನೆ ಅಂತಿಮಗೊಳಿಸುವ ಮುನ್ನ ಸ್ಥಳೀಯ ಶಾಸಕರ ಒಪ್ಪಿಗೆಯನ್ನು ಸಹ ಪಡೆಯಲಾಗುತ್ತದೆ.
ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಇತ್ತೀಚೆಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನ್ನ ಕ್ಷೇತ್ರಕ್ಕೆ ಕೇವಲ 75 ಕೋಟಿ ಅನುದಾನ ನೀಡಲಾಗಿದೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಇದಕ್ಕಿಂತ ಮೂರುಪಟ್ಟು ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಆರೋಪಿಸಿದ್ದರು.
ಜೆಡಿಎಸ್ ಶಾಸಕರು ಇರುವ ದಾಸರಹಳ್ಳಿ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ 50 ರಿಂದ 100 ಕೋಟಿ ರೂ. ತನಕ ಅನುದಾನ ನೀಡಲಾಗಿದೆ.
ಶಿವಾಜಿನಗರ 80 ಕೋಟಿ, ಪುಲಕೇಶಿ ನಗರ 70 ಕೋಟಿ, ಶಾಂತಿ ನಗರ 70 ಕೋಟಿ, ಜಯನಗರ 60 ಕೋಟಿ, ವಿಜಯನಗರ 60 ಕೋಟಿ, ಆನೇಕಲ್ 8 ಕೋಟಿ, ಗಾಂಧಿ ನಗರ 80 ಕೋಟಿ, ಚಾಮರಾಜಪೇಟೆ 80 ಕೋಟಿ, ಬಿಟಿಎಂ ಲೇಔಟ್ 80 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.












Click it and Unblock the Notifications