Namma Metro: ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗ ನಿರ್ಮಾಣ: 37 ಕಿಲೋ ಮೀಟರ್, 15000 ಕೋಟಿ ವೆಚ್ಚ
ಬೆಂಗಳೂರಿನ ಸಾರಿಗೆ ಮೂಲಸೌಕರ್ಯದ ಪ್ರಮುಖ ಬೆಳವಣಿಗೆಯಲ್ಲಿ, ಹೆಬ್ಬಾಳ ಮತ್ತು ಸರ್ಜಾಪುರವನ್ನು ಸಂಪರ್ಕಿಸುವ ಹೊಚ್ಚ ಹೊಸ 37 ಕಿಮೀ ಮೆಟ್ರೋ ಮಾರ್ಗವನ್ನು ನಿರ್ಮಿಸುವ ಪ್ರಸ್ತಾಪವನ್ನು ಕರ್ನಾಟಕ ಸರ್ಕಾರ ಮುಂದಿಟ್ಟಿದೆ.
ದಿ ಹಿಂದೂ ಈ ಬಗ್ಗೆ ವರದಿ ಮಾಡಿದ್ದು ಮಹತ್ವಾಕಾಂಕ್ಷೆಯ ಯೋಜನೆಗೆ ಅಂದಾಜು 15,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಲಾಗಿದೆ. ಈ ಯೋಜನೆಯು ಬೆಂಗಳೂರಿನ ನಮ್ಮ ಮೆಟ್ರೋವನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ, ಪ್ರಸ್ತುತ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಲಿದೆ, ಸದ್ಯ 70 ಕಿಮೀ ಸೇವೆಯನ್ನು ಹೊಂದಿದ್ದು ಪ್ರತಿದಿನ 5.7 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮೆಟ್ರೋ ಮಾರ್ಗಗಳನ್ನು 100 ಕಿ.ಮೀ ವಿಸ್ತರಿಸುವ ಯೋಜನೆಗಳನ್ನು ಬಜೆಟ್‌ನಲ್ಲಿ ವಿವರಿಸಲಾಗಿದೆ.
ಬೈಯ್ಯಪ್ಪನಹಳ್ಳಿಯಿಂದ ಕೃಷ್ಣರಾಜಪುರ, ಕೆಂಗೇರಿಯಿಂದ ಚಲ್ಲಘಟ್ಟ, ನಾಗಸಂದ್ರದಿಂದ ಮಾದವಾರ, ಮತ್ತು ಆರ್.ವಿ. ಬೊಮ್ಮಸಂದ್ರದ ರಸ್ತೆ ನಡುವಿನ ಒಟ್ಟು 27 ಕಿ.ಮೀ ಹೊಸ ಮಾರ್ಗಗಳು 2024ರ ಅಂತ್ಯದ ವೇಳೆಗೆ ಸೇರ್ಪಡೆಯಾಗಲಿವೆ. 70 ಕಿಲೋ ಮೀಟರ್ ಇರುವ ಬೆಂಗಳೂರು ಮೆಟ್ರೋ ಜಾಲವನ್ನು ಮುಂದಿನ ಮೂರು ವರ್ಷಗಳಲ್ಲಿ 176 ಕಿಲೋ ಮೀಟರ್ ಗೆ ಹೆಚ್ಚಿಸಲು ಯೋಜಿಸಲಾಗಿದೆ.
ಮೂರು ವರ್ಷಗಳಲ್ಲಿ 2.5 ಪಟ್ಟು ಹೆಚ್ಚಳ
"ಮುಂದಿನ ಮೂರು ವರ್ಷಗಳಲ್ಲಿ, ಮೆಟ್ರೋ ನೆಟ್‌ವರ್ಕ್ ಅನ್ನು 70 ಕಿಮೀಯಿಂದ 176 ಕಿಮೀಗೆ ಹೆಚ್ಚಿಸಲಾಗುವುದು, ಅಂದರೆ, ಪ್ರಸ್ತುತ ನೆಟ್‌ವರ್ಕ್ ವ್ಯಾಪ್ತಿಯ 2.5 ಪಟ್ಟು. ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದ ಚಾಲ್ತಿಯಲ್ಲಿರುವ ಕಾಮಗಾರಿಯನ್ನು ಕೂಡ ತ್ವರಿತವಾಗಿ ಪೂರ್ಣಗೊಳಿಸಲಾಗುವುದು, 2026 ರ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಜೆಟ್ ಘೋಷಣೆಯಂತೆ 16,328 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಹಂತ-3ಕ್ಕೆ ಅನುಮೋದನೆ ಕೋರಿ ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗಿದೆ. ಈ ನಿರ್ದಿಷ್ಟ ಯೋಜನೆಯು ಕೆಂಪಾಪುರದಿಂದ ಜೆಪಿ ನಗರ 4 ನೇ ಹಂತದವರೆಗೆ ಮತ್ತು ಪಶ್ಚಿಮ ಹೊರವರ್ತುಲ ರಸ್ತೆ ಮಾರ್ಗ ಸೇರಿದಂತೆ ಹೊಸಹಳ್ಳಿಯಿಂದ ಕಡಬಗೆರೆವರೆಗೆ 45 ಕಿ.ಮೀ ದೂರವನ್ನು ವ್ಯಾಪಿಸಿದೆ.
30,000 ಕೋಟಿ ಅಂದಾಜು ವೆಚ್ಚದಲ್ಲಿ ನಮ್ಮ ಮೆಟ್ರೋ ಮತ್ತು ಬೆಂಗಳೂರು ಉಪನಗರ ರೈಲ್ವೆ ಯೋಜನೆಯಲ್ಲಿ ವಿವಿಧ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಈ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 5 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ 1,000 ಕೋಟಿ ರೂಪಾಯಿ ನೀಡಿದೆ. ಕೇಂದ್ರ 3,242 ಕೋಟಿ ರೂ. ನೀಡಿದ್ದು, ಬಾಹ್ಯ ಮೂಲಗಳಿಂದ 7,438 ಕೋಟಿ ರೂ.ಗಳ ಸಾಲವನ್ನಾಗಿ ಪಡೆಯಲಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಇದುವರೆಗೂ 500 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 660 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಪ್ರಸಕ್ತ ವರ್ಷ ರಾಜ್ಯ ಸರ್ಕಾರ 1000 ಕೋಟಿ ರೂಪಾಯಿ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications