ನಂದಿನಿ ಬದಲು ಅಮೂಲ್‌ಗೆ ಅವಕಾಶ ಕೊಟ್ಟ ಕರ್ನಾಟಕ ಸರ್ಕಾರ ?!
ಕರ್ನಾಟಕದ ಮನೆ ಮನೆ ಮಾತಾಗಿರುವ ಹಾಗೂ ಹೈನುಗಾರಿಕೆಗೆ ಜೀವನಾಡಿ ಆಗಿರುವ ನಂದಿನಿ ಹಾಲು ಮತ್ತು ನಂದಿನ ಉತ್ಪನ್ನಗಳನ್ನು ಕರ್ನಾಟಕ ಸರ್ಕಾರವೇ ಕಡೆಗಣಿಸುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಬೆಂಗಳೂರಿನ ಮೆಟ್ರೋದಲ್ಲಿ ಅಮೂಲ್ ಉತ್ಪನ್ನಗಳ ಮಳಿಗೆ ಪ್ರಾರಂಭಿಸುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು. ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ನಂದಿನಿ ಅಭಿಯಾನವನ್ನೇ ನಡೆಸಿದ್ದರು. ಅಮೂಲ್ ಉತ್ಪನ್ನಗಳಿಗೆ ಕರ್ನಾಟಕದಲ್ಲಿ ಅವಕಾಶ ನೀಡುವುದನ್ನು ವಿರೋಧಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತ್ತು. ಆದರೆ, ಇದೀಗ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಮೂಲ್‌ಗೆ ಮಣೆ ಹಾಕಿದೆ ಎಂದು ವರದಿಯಾಗಿದೆ. ಈಚೆಗೆ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟು ವಿಚಾರದಲ್ಲೂ ಸರ್ಕಾರದ ವಿರುದ್ಧ ಇದೇ ಆರೋಪ ಕೇಳಿ ಬಂದಿತ್ತು. ಇದೀಗ ನಂದಿನಿ ಉತ್ಪನ್ನಗಳನ್ನು ಕಡೆಗಣಿಸಿರುವ ಆರೋಪ ಕೇಳಿ ಬಂದಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ನಂದಿನಿ ಹಾಗೂ ನಂದಿನಿ ಉತ್ಪನ್ನಗಳ ಅಸ್ಮಿತೆ ವಿಚಾರದಲ್ಲಿ ಹೋರಾಟ ಮಾಡಿದ್ದ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಬಂದ ಮೇಲೆ ನಂದಿನಿಯ ಬಗ್ಗೆ ಇರಿಸಿಕೊಂಡಿದ್ದ ಅಭಿಮಾನ ಹಾಗೂ ಕಾಳಜಿ ಈಗ ಇಲ್ಲವೇ ಎನ್ನುವ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ಗಳನ್ನು ಪ್ರಾರಂಭಿಸುವುದಕ್ಕೆ ಅವಕಾಶ ನೀಡಿರುವುದು. ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ಗಳನ್ನು ಸ್ಥಾಪಿಸುವುದಕ್ಕೆ ಬಿಎಂಆರ್‌ಸಿಎಲ್ ಹಾಗೂ ಅಮೂಲ್ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ.

ಯಾವ ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಕಿಯೋಸ್ಕ್!
* ಪಟ್ಟಂದೂರು ಅಗ್ರಹಾರ ಇಂದಿರಾನಗರ
* ಬೆನ್ನಿಗಾನಹಳ್ಳಿ
* ಬೈಯಪ್ಪನಹಳ್ಳಿ
* ಟ್ರಿನಿಟಿ,
* ಸರ್ ಎಂ ವಿಶ್ವೇಶ್ವರಯ್ಯ
* ನಾಡಪ್ರಭು ಕೆಂಪೇಗೌಡ ಸ್ಟೇಷನ್ ಮೆಜೆಸ್ಟಿಕ್
* ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿ ಮೆಟ್ರೋ ನಿಲ್ದಾಣಗಳು.
ಯಾವೆಲ್ಲ ಉತ್ಪನ್ನಗಳು ಇವೆ: ಈ ಕಿಯೋಸ್ಕ್‌ಗಳಲ್ಲಿ ಅಮುಲ್‌ನ ಡೈರಿ ಉತ್ಪನ್ನಗಳು, ಚಾಕೊಲೇಟ್, ಆಲೂಗಡ್ಡೆ ಆಧಾರಿತ ತಿಂಡಿಗಳು, ಸಾವಯವ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಮೆಟ್ರೋ ಪ್ರಯಾಣಿಕರು ಹಾಲು, ಚಾಕೊಲೇಟ್‌ಗಳು, ಐಸ್ ಕ್ರೀಮ್ ಹಾಗೂ ರೆಡಿಮೇಡ್ ಆಹಾರ ಉತ್ಪನ್ನಗಳು ಹಾಗೂ ತಿಂಡಿಗಳನ್ನು ಖರೀದಿಸಬಹುದು ಎಂದು ಅಮೂಲ್ ಹೇಳಿದೆ. ಈ ಪೋಸ್ಟ್‌ಗೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ.
ಈ ಹಿಂದೆ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ, ನಮ್ಮ ಸ್ವಾಭಿಮಾನ ಅಡವಿಡಲು ಸಿದ್ಧರಿಲ್ಲ ನಂದಿನಿ ಕನ್ನಡಿಗರ ನಾಡಿ ಮಿಡಿತ ಬಿಜೆಪಿಯ ಕೊನೆಗಾಲ ಸನ್ನಿಹಿತ
#SaveNandini ಅಂತ ಡಿ.ಕೆ ಶಿವಕುಮಾರ್ ಅವರು ಹೇಳಿದ್ದರು. ಇದೇ ಪೋಸ್ಟ್ ಅನ್ನು ಜೆಡಿಎಸ್ ಈಗ ಹಂಚಿಕೊಂಡಿದೆ.
ಜೆಡಿಎಸ್ ಹೇಳಿದ್ದೇನು: ಕಮಿಷನ್ ಆಸೆಗೆ ಸ್ವಾಭಿಮಾನ ಮಾರಿಕೊಂಡ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಂದಿರು ಕರ್ನಾಟಕ ಜೆಡಿಎಸ್. ಡೂಪ್ಲಿಕೇಟ್ ಸಿಎಂ ಡಿಕೆಶಿಯ ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ. ಚುನಾವಣೆಗೂ ಮುಂಚೆ #SaveNandini , ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಪುಂಗೀ ಬಿಡುತ್ತಿದ್ದ ಡಿಕೆಶಿ, ಕಮಿಷನ್ ಆಸೆಗೆ ಇಂದು ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ.
ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಗೆ ಅವಕಾಶ ನೀಡಲಾಗಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ ಅನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ ಕರ್ನಾಟಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಮರೆತು, ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ರತ್ನ ಕಂಬಳಿ ಹಾಸಿದೆ. ನಂದಿನಿ ಹಾಲಿನ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿ ಮಾರುಕಟ್ಟೆ ಸೃಷ್ಟಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಕನ್ನಡಿಗರ ಹೆಮ್ಮೆಯ ಬ್ರಾಂಡ್ "ನಂದಿನಿ"ಯ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದೆ.
ಕನ್ನಡಿಗರ ಆಕ್ರೋಶ: ಚುನಾವಣೆಗೆ ಮುಂಚೆ ಒಂದು ಚುನಾವಣೆಯಾಗಿ ಅಧಿಕಾರಕ್ಕೆ ಬಂದ ಮೇಲೆ ಒಂದು ನೀತಿಯನ್ನು ಕರ್ನಾಟಕ ಕಾಂಗ್ರೆಸ್ ಪಕ್ಷವು ಅನುಸರಿಸುತ್ತಿದೆ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಅಧಿಕಾರಕ್ಕೆ ಬರುವ ಮುಂಚೆ ಸೇವ್ ನಂದಿನಿ ಅಭಿಯಾನವನ್ನು ಪ್ರಾರಂಭಿಸಿದ್ದ ಕಾಂಗ್ರೆಸ್ ಇದೀಗ ಅದೇ ಅಮೂಲ್‌ಗೆ ಮಣೆಯಾಕಿದೆ ಅಂತ ಹೇಳಲಾಗುತ್ತಿದೆ.












Click it and Unblock the Notifications