BBMP: ಬಿಬಿಎಂಪಿ ಕಾಮಗಾರಿಗಳ ಹಣ ಬಿಡುಗಡೆಗೆ ಸರ್ಕಾರದ ಗ್ರೀನ್ ಸಿಗ್ನಲ್
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ನಂತರ ಸಿಕ್ಕಾಪಟ್ಟೆ ಸದ್ದು ಮಾಡಿ, ಸುದ್ದಿಯಾಗಿದ್ದು ಗುತ್ತಿಗೆದಾರರ ವಿಷಯ. ಅದ್ರಲ್ಲೂ ಬಿಬಿಎಂಪಿ ಚುನಾವಣೆ ವಿಚಾರಕ್ಕಿಂತ ಗುತ್ತಿಗೆದಾರರ ಬಿಲ್ ಪಾವತಿ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಾಗೇ ಸರ್ಕಾರ & ಗುತ್ತಿಗೆದಾರರ ಮಧ್ಯೆ ಕಿತ್ತಾಟ ಕೂಡ ನಡೆದಿತ್ತು. ಇದೀಗ ಎಲ್ಲದಕ್ಕೂ ಅಂತಿಮ ಮುದ್ರೆ ಬೀಳುತ್ತಿದ್ದು, ಕಾಮಗಾರಿಗಳ ಹಣ ಬಿಡುಗಡೆಗೆ ಸರ್ಕಾರ ನಿರ್ಧರಿಸಿದೆ.
ಹೌದು, ಪೂರ್ಣಗೊಂಡ ಬಿಬಿಎಂಪಿ ಕಾಮಗಾರಿಗಳ ಶೇ.50 ರಷ್ಟು ಹಣ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಸಿಎಂ ಗೃಹಕಚೇರಿ ಕೃಷ್ಣಾ ಬಳಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಪೂರ್ಣಗೊಂಡಿರುವ ಕೆಲಸಗಳಿಗೆ ಆದ್ಯತೆ ಮೇರೆಗೆ ಶೇಕಡಾ 50ರಷ್ಟು ಹಣ ಬಿಡುಗಡೆ ಮಾಡಿ, ಬಾಕಿ ಹಣ ಸಮಿತಿಯ ವರದಿ ಬಂದ ನಂತರ ಬಿಡುಗಡೆ ಮಾಡಲು ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ. ಈ ಮೂಲಕ ಗುತ್ತಿಗೆದಾರರು ಹಾಗೂ ಸರ್ಕಾರದ ನಡುವಿನ ತಿಕ್ಕಾಟ ಒಂದು ಹಂತಕ್ಕೆ ಬಂದಂತೆ ಕಾಣುತ್ತಿದೆ.

ರಾಮನಗರದಲ್ಲಿ ಸಿಎಂ ಸಿದ್ದರಾಮಯ್ಯ
ಹಾಗೇ ಇದೇ ಸಂದರ್ಭದಲ್ಲಿ ಭಾರತ್ ಜೋಡೊ ಯಾತ್ರೆ ಬಗ್ಗೆ ಡಿಸಿಎಂ ಮಾತನಾಡಿದರು. ಸೆಪ್ಟೆಂಬರ್ 7ಕ್ಕೆ ಭಾರತ್ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದರ ನೆನಪಿಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 1 ಗಂಟೆ ಕಾಲ ಪಾದಯಾತ್ರೆ ಹಮ್ಮಿಕೊಳ್ಳಬೇಕು ಎಂದು ನಿರ್ಧಾರ ಕೈಗೊಂಡಿದ್ದೇವೆ. ಸಂಜೆ 5ರಿಂದ 6 ಗಂಟೆ ತನಕ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಅವರು ಹೆಜ್ಜೆ ಹಾಕಲಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ಹಾಗೇ, ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎಂದು ಯೋಚನೆ ಇತ್ತು. ನಾಗರಿಕರಿಗೆ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು ಕೈಬಿಡಲಾಯಿತು. ಸೆ.7 ರಂದು ಕ್ಯಾಬಿನೆಟ್ ಸಭೆ ಇರುವ ಕಾರಣ ಜಿಲ್ಲಾ ಮಂತ್ರಿಗಳು ಆಯಾಯ ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗಡಿನಾಡ ಜಿಲ್ಲೆ ವಿಭಜನೆ ಆಗುತ್ತಾ?
ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು ಎಂದು ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆಯೇ ಎನ್ನುವ ಪ್ರಶ್ನೆಗೆ, ಪ್ರಸ್ತಾವನೆ ಸಲ್ಲಿಸಿದ್ದಾರೆ. ಆ ವಿಚಾರವಾಗಿ ಯಾವುದೇ ತೀರ್ಮಾನ ಸದ್ಯಕ್ಕಿಲ್ಲ, ಆಡಳಿತ ದೃಷ್ಟಿಯಿಂದ ಸುಲಭ ಆಗುತ್ತದೆ ಎಂದು ಮನವಿ ನೀಡಿದ್ದಾರೆ. ರಾಮನಗರ, ಗದಗ, ಚಾಮರಾಜನಗರ 4 ಮತ್ತು ಕೊಡಗು ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿವೆ. ಯಾರೂ ಗಾಬರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಸಮಾಲೋಚನೆ ನಡೆಸಿಯೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ.
ರಾಜಕೀಯ ಚರ್ಚೆ ನಡೆದಿಲ್ಲ!
ಇನ್ನು ತೇಜಸ್ವಿನಿ ಅನಂತಕುಮಾರ್ ಅವರ ಭೇಟಿ ರಾಜಕೀಯ ವಿಚಾರಕ್ಕೆ ಆಗಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಸಾಧ್ಯವೇ ಇಲ್ಲ ನಮ್ಮ ನಡುವೆ ಯಾವುದೇ ರಾಜಕೀಯ ವಿಚಾರ ಚರ್ಚೆಗೆ ಬಂದಿಲ್ಲ. ರಾಜಕೀಯ ವಿಚಾರ ಮಾತನಾಡಿದ್ದೇವೆ ಎಂದು ಯಾರಾದರೂ ಹೇಳಿದ್ದರೆ ಅದು ಸುಳ್ಳು. ತೇಜಸ್ವಿನಿ ಅವರು ಅನಂತ್‌ಕುಮಾರ್ ಅವರ ಜನ್ಮದಿನ, ಅನ್ನಭಾಗ್ಯ ವಿಚಾರದ ಬಗ್ಗೆ ನನ್ನ ಜತೆ ಚರ್ಚೆ ಮಾಡಿದರು. ರಾಜಕೀಯ ವಿಚಾರ ಚರ್ಚೆ ಮಾಡಲಾಯಿತು ಎಂಬುದು ಸುಳ್ಳು ಸುದ್ದಿ ಎಂದಿದ್ದಾರೆ.
ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ ಎನ್ನುವ ಬಿಜೆಪಿ ನಾಯಕರ ಆರೋಪಕ್ಕೆ ಇದೇ ವೇಳೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, ಕೇವಲ ಆರೋಪ ಮಾಡುವುದಷ್ಟೇ ಅವರ ಕೆಲಸ, ಮಾಡಲಿ ಬಿಡಿ. ಅವರು ಇರುವುದೇ ಆರೋಪ ಮಾಡಲು. ನಾವು ಕುಡಿವ ನೀರಿನ ವಿಚಾರದಲ್ಲಿ ಬೆಂಗಳೂರಿಗೆ ಮೊದಲ ಆದ್ಯತೆ ನೀಡಿದ್ದೇವೆ. ಜೊತೆಗೆ ಇತರೆಡೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ, ಎಲ್ಲೆಲ್ಲಿ ತೊಂದರೆ ಉಂಟಾಗಿದೆಯೋ ಅಲ್ಲೆಲ್ಲಾ ತುರ್ತಾಗಿ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications