ಬೆಂಗಳೂರಲ್ಲಿ ಶನಿವಾರ ಒಂದೇ ದಿನ 3773 ಗೌಪ್ಯ ಮತದಾನ ಆಗಿದೆ
ಬೆಂಗಳೂರು, ಏಪ್ರಿಲ್ 29: ಕರ್ನಾಟಕ ಸಾರ್ವತ್ರಿಕ ಚುನಾವಣೆ ಮೇ 10ರಂದು ಡನೆಯಲಿದೆ. 80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ವಿಶೇಷ ಚೇತನರಿಗೆ ಏಪ್ರಿಲ್ 29 ರಿಂದ ಮೇ 6 ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ 3773 ಮಂದಿ ಗೌಪ್ತ ಮತದಾನ ಮಾಡಿದ್ದಾರೆ.
ಹೌದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದ ಅಧಿಕೃತ ಮಾಹಿತಿ ಪ್ರಕಾರ, ಶನಿವಾರ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೆತನರು ಸೇರಿದಂತೆ ಒಟ್ಟು 3773 ಮಂದಿ ಮತದಾನ ಹಕ್ಕು ಚಲಾಯಿಸಿದ್ದಾರೆ. ಈ ಪ್ರಕ್ರಿಯೆ.

ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ನಗರದದಲ್ಲಿ 80 ವರ್ಷ ಮೇಲ್ಪಟ್ಟವರು 2,35,140 ಮತದಾರರಿದ್ದಾರೆ. 9,152 ಮಂದಿ ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಜೊತೆಗೆ ವಿಶೇಷ ಚೇತನರು 26,058 ಮತದಾರರಿದ್ದು, 119 ಮಂದಿ ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ದಿನಾಂಕ: 29-04-2023 ರಂದು 3727 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ 46 ಮಂದಿ ವಿಶೇಷ ಚೇತನರು ಸೇರಿದಂತೆ ಒಟ್ಟು 3773 ಮಂದಿ ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ವಿಶೇಷ ಚೇತನರಿಗೆ ಏಪ್ರಿಲ್ 29 ರಿಂದ ಮೇ 6 ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವೀಡಿಯೋಗ್ರಾಫರ್ ಒಳಗೊಂಡಿರುವ ಮತಗಟ್ಟೆ ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲಿಸಲಾಗುತ್ತದೆ.
ಅಂಚೆ ಮತಪತ್ರದ ಮುಖೇನ ಹಕ್ಕು ಚಲಾವಣೆ
ಈ ಪ್ರಕ್ರಿಯೆ ಮುಗಿದ ಬಳಿಕ ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ವೀಡಿಯೋಗ್ರಫಿ ಮೂಲಕ ಸೆರೆ ಯಿಡಿಯಲಾಗುತ್ತದೆ.

ಮತಗಟ್ಟೆ ಸಿಬ್ಬಂದಿಯು ಮತಪತ್ರ ಹಾಗೂ ಮತಪೆಟ್ಟಿಗೆಗಳೊಂದಿಗೆ ಪ್ರತೀ ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡುತ್ತಾರೆ. ಮುಂಚಿತವಾಗಿ ಮಾಹಿತಿ ನೀಡಿದ ಬಳಿಕವೇ ಮತಗಟ್ಟೆ ಸಿಬ್ಬಂದಿ ಭೇಟಿ ನೀಡುವರು. ಮೊದಲ ಬಾರಿ ಮತದಾರರು ಮನೆಯಲ್ಲಿರದಿದ್ದರೆ, ಎರಡನೇ ಬಾರಿ ಹೋಗುತ್ತಾರೆ. ಆ ಬಳಿಕ ಮತದಾನಕ್ಕೆ ಅವಕಾಶವಿರುವುದಿಲ್ಲ.
ಮನೆಯಿಂದ ಮತದಾನಕ್ಕೆ 12ಡಿ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವವರಿಗೆ ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ ಎಂದು ನಿಯಮ ರೂಪಿಸಲಾಗಿದೆ. ಯಾವುದೇ ತೊಂದರೆಯಿಲ್ಲದೆ/ಅಡೆತಡೆಗಳಲ್ಲಿದೆ ಎಲ್ಲಾ ಕಡೆ ಸುಸೂತ್ರವಾಗಿ, ನಿಯಮಬದ್ಧವಾಗಿ, ಯಶಸ್ವಿಯಾಗಿ ಮನೆ ಮನೆಗೆ ತೆರಳಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೆತನರ ಮತದಾನವನ್ನು ನಡೆಸಲಾಗಿದೆ. ಇದು ಮೇ 6ರವರೆಗೂ ಮುಂದುವರಿಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications