ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರುವ ಪ್ರಮುಖ 10 ಅಂಶಗಳು ಇವು
ಬೆಂಗಳೂರು, ಮಾರ್ಚ್. 30: ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಚುನಾವಣಾ ಆಯೋಗ ಬುಧವಾರ ದಿನಾಂಕ ಬಿಡುಗಡೆ ಮಾಡಿದೆ. ಆದರೆ ರಾಜ್ಯದಲ್ಲಿ ಚುನಾವಣೆ ಮೇಳೆ ಪ್ರಭಾವ ಬೀರುವ ಪ್ರಮುಖ ಅಂಶಗಳು ಇಲ್ಲಿವೆ.
1. *ಭ್ರಷ್ಟಾಚಾರ*: ಇತ್ತೀಚೆಗೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ತನ್ನ ಪ್ರಚಾರದ ಕೇಂದ್ರ ವಿಷಯವಾಗಿ ಭ್ರಷ್ಟಾಚಾರವನ್ನು ತೆಗೆದುಕೊಂಡಿದೆ. ವಿವಿಧ ಹಗರಣಗಳು ಮತ್ತು ಗುತ್ತಿಗೆದಾರರ ಸಂಸ್ಥೆಯಿಂದ ಶೇಕಡಾ 40 ರಷ್ಟು ಕಮಿಷನ್ ಶುಲ್ಕ ಪಡೆಯುವ ಆರೋಪವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.

ಬಿಜೆಪಿ ಕೂಡ ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಎತ್ತಿ ತೋರಿಸುವುದರ ಮೂಲಕ ಪ್ರಚಾರ ಆರಂಭಿಸಿದೆ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಸರ್ಕಾರದ ಅವಧಿಯ ಡಿನೋಟಿಫಿಕೇಶನ್ ಹಗರಣವನ್ನು ಪ್ರಮುಖ ಅಂಶವನ್ನಾಗಿಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
2. *ಮೀಸಲಾತಿ*: ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿಯಲ್ಲಿ ಮುಸ್ಲಿಮರಿಗೆ 4 ಪ್ರತಿಶತ ಮೀಸಲಾತಿಯನ್ನು ರದ್ದುಪಡಿಸುವ ಮತ್ತು ಅದನ್ನು ಪ್ರಬಲವಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಸಮಾನವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವಿಭಾಗ (EWS) ವರ್ಗದ ಅಡಿಯಲ್ಲಿ ಸೇರಿಸಿದೆ.
ಇದರ ಜೊತೆಗೆ ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗದ ಅಡಿಯಲ್ಲಿ ವಿವಿಧ ದಲಿತ ಸಮುದಾಯಗಳಿಗೆ ಒಳಮೀಸಲಾತಿಯನ್ನು ನೀಡಿರುವುದು ಕೂಡ ಚುನಾವಣೆಯ ತಂತ್ರ. ಈಗಾಗಲೇ ರಾಜ್ಯದಲ್ಲಿ ಇದು ಕಾವು ಪಡೆದುಕೊಂಡಿದ್ದು, ಬಂಜಾರ ಸಮುದಾಯ ಬಿಜೆಪಿ ವಿರುದ್ಧ ಪ್ರತಿಭಟನೆ ಆರಂಭಿಸಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
3. *ಅಭಿವೃದ್ಧಿ* : ಬಿಜೆಪಿಯು ಮೋದಿ ಸರ್ಕಾರವು ಕೈಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳ ಮೇಲೆ ತನ್ನ ಪ್ರಚಾರವನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿ (ಎಸ್) ಅವರು ಅಧಿಕಾರದಲ್ಲಿದ್ದಾಗ ತಾವು ಮಾಡಿರುವ ಕೆಲಸಗಳು ಮತ್ತು ಜಾರಿಗೆ ತಂದ ಯೋಜನೆಗಳ ಬಗ್ಗೆ ಜನರಿಗೆ ವಿವರಣೆ ನೀಡುತ್ತಿದೆ.
4. *ಬೆಲೆ ಏರಿಕೆ*: ಕಾಂಗ್ರೆಸ್ ಮತ್ತು ಜೆಡಿಎಸ್ ಬೆಲೆ ಏರಿಕೆಯನ್ನು ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡಿವೆ. ವಿಶೇಷವಾಗಿ ಅಡುಗೆ ಅನಿಲ ಮತ್ತು ಇಂಧನ ಬೆಲೆ ಏರಿಕೆಗಳು. ಕೋವಿಡ್ ಸಾಂಕ್ರಾಮಿಕದ ಸರ್ಕಾರದ ನಿರ್ವಹಣೆ, ಮೋದಿ ಸರ್ಕಾರದ ಅಡಿಯಲ್ಲಿ ಆರ್ಥಿಕ ಪ್ರಗತಿ ಮತ್ತು ಉದಯೋನ್ಮುಖ ಭಾರತ ಹೇಗೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂಬುದನ್ನು ಬಿಜೆಪಿ ಪ್ರಚಾರದ ಸಾಮಗ್ರು ಮಾಡಿಕೊಂಡಿವೆ.

5. *ಚುನಾವಣಾ ಭರವಸೆಗಳು*: ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿ (ಎಸ್) ನೀಡಿದ ಚುನಾವಣಾ ಭರವಸೆಗಳ ಸಾಧಕ - ಬಾಧಕಗಳು ನಿಕಟ ಪರಿಶೀಲನೆಗೆ ಒಳಪಡುತ್ತವೆ. ಕಾಂಗ್ರೆಸ್ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂದು ಬಿಜೆಪಿ ಈಗಾಗಲೇ ಆರೋಪಿಸಿದೆ. ಆದರೆ ದೇಶದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯ ಕೊರತೆಯನ್ನು ಸರಿ ಮಾಡಿಲ್ಲ ಎಂದು ಕಾಂಗ್ರೆಸ್ ಆಡಳಿತ ಪಕ್ಷದ ಮೇಲೆ ದಾಳಿ ಮಾಡುತ್ತಿದೆ.
6. *ಸ್ಪಷ್ಟ ಜನಾದೇಶ*: ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳು ಸ್ಪಷ್ಟ ಜನಾದೇಶವನ್ನು ಹೊಂದುವ ಅಗತ್ಯತೆಯ ಬಗ್ಗೆ ಮಾತನಾಡುತ್ತಿವೆ. ಕಳೆದೆರಡು ಬಾರಿಯ ಸಮ್ಮಿಶ್ರ ಸರ್ಕಾರಗಳ ಪ್ರವೃತ್ತಿಯನ್ನು ನಿಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡುತ್ತಿವೆ. ಒಂದೇ ಪಕ್ಷ ಅಧಿಖಾರಕ್ಕೆ ಬರುವ ಅಗತ್ಯತೆಯನ್ನು ಪದೇ ಪದೇ ಹೇಳುತ್ತಿವೆ.
7. *ಜಾತಿ ರಾಜಕೀಯ* : ಪಕ್ಷಗಳು ವಿವಿಧ ಜಾತಿಗಳನ್ನು ಗೆಲ್ಲಲು ತಮ್ಮ ಹೊಸ ಹೊಸ ಮಾರ್ಗಗಗಳನ್ನು ಹುಡುಕುತ್ತಿವೆ. ಪ್ರಬಲ ಸಮುದಾಯದ ಮತಗಳನ್ನು ಮತ್ತು ತಮ್ಮ ಸಾಂಪ್ರದಾಯಿಕ ಮತಗಳನ್ನು ಕ್ರೋಢೀಕರಿಸುವುದು ಪಕ್ಷಗಳ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಬೆಂಬಲ ಪಡೆಯುವತ್ತ ಬಿಜೆಪಿ ಗಮನಹರಿಸಿದ್ದರೆ, ಲಿಂಗಾಯತ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಮತಬ್ಯಾಂಕ್ ಸುಧಾರಿಸಲು ಬಯಸಿದೆ.
8. *ಕೋಮುವಾದ ಮತ್ತು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ*: ಹಿಜಾಬ್, ಹಲಾಲ್, ಅಜಾನ್ ಮತ್ತು ಟಿಪ್ಪು ಸುಲ್ತಾನ್‌ನಂತಹ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಒಡೆದು ಆಳುವ ನೀತಿ ಜಾರಿಗೆ ತರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಬಿಜೆಪಿಯು ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದೆ. ಪ್ರಚಾರದ ವೇಳೆ ಉಭಯ ಪಕ್ಷಗಳ ನಡುವಿನ ಜಟಾಪಟಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
9. *ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅಂಶಗಳು* : ಅದಾನಿ ವಿವಾದ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಮತ್ತು ನಿರಂಕುಶಾಧಿಕಾರದಂತಹ ವಿವಿಧ ವಿಷಯಗಳಲ್ಲಿ ಕಾಂಗ್ರೆಸ್ ಪ್ರಧಾನಿಯನ್ನು ಗುರಿಯಾಗಿಸಿ ಪ್ರಚಾರ ನಡೆಸುತ್ತಿದೆ. ರಾಹುಲ್ ಗಾಂಧಿ ವಿದೇಶಗಳಲ್ಲಿ ಭಾರತ ವಿರೋಧಿ ಹೇಳಿಕೆಗಳು, ಹಿಂದುತ್ವದ ಐಕಾನ್ ವಿಡಿ ಸಾವರ್ಕರ್ ವಿರುದ್ಧ ಅವರು ಆಡಳಿತ ಪಕ್ಷವನ್ನು ಗುರಿಯಾಗಿಸಿಕೊಂಡು ಮಾಡಿದ ಟೀಕೆಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ.
10. *ಕುಟುಂಬ ರಾಜಕಾರಣ* : ಬಿಜೆಪಿಯು ಕುಟುಂಬ ರಾಜಕಾರಣ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.











Click it and Unblock the Notifications