ಸಚಿವ ಸಂಪುಟ ವಿಸ್ತರಣೆ: ಕುತೂಹಲ ಮೂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ
ಬೆಂಗಳೂರು, ಫೆಬ್ರವರಿ 7: ಅಧಿಕೃತ ಕಾರ್ಯಕ್ರಮದ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ದೆಹಲಿಗೆ ತೆರಳಲಿದ್ದು, ಸಚಿವ ಸಂಪುಟ ಸರ್ಕಸ್ ಮತ್ತಷ್ಟು ಕುತೂಹಲ ಮೂಡಿಸಿದೆ. ಅವಕಾಶ ಸಿಕ್ಕರೆ ಈ ಕುರಿತು ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ.
ಸೋಮವಾರದಂದು ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ಈ ವೇಳೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎನ್ನಲಾಗುತ್ತಿದೆ. ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಭೇಟಿಗೆ ಅವಕಾಶ ಸಿಕ್ಕರೆ ಚರ್ಚೆ ನಡೆಸುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇತ್ತ ರಾಜ್ಯದಲ್ಲಿ ಸಚಿವಾಕಾಂಕ್ಷಿ ಶಾಸಕರ ಲಾಬಿ ಮುಂದುವರಿದಿದ್ದು, ಸಚಿವ ಸ್ಥಾನ ಮೇಲೆ ನನಗೆ ಆಸೆ ಇಲ್ಲ. ಆದರೆ 13 ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಪರೋಕ್ಷವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದರು.

ಇನ್ನು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ಬಗ್ಗೆ ಕೇಂದ್ರ ನಾಯಕರು ನಿರ್ಣಯ ಮಾಡುತ್ತಾರೆ. ಇತ್ತ ಸಿಡಿ ಕೇಸ್‌ನಲ್ಲಿ ಕ್ಲೀನ್‌ಚಿಟ್ ಪಡೆದ ರಮೇಶ್ ಜಾರಕಿಹೊಳಿ ಬಿಜೆಪಿ ಪ್ರಬಲ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಪಕ್ಷದ ವರಿಷ್ಠಜೊತೆಗಿನ ಚರ್ಚೆಯ ಬಳಿಕ ಸಂಪುಟ ವಿಸ್ತರಣೆಯೇ ಅಥವಾ ಪುನಾರಚನೆಯೇ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಸದ್ಯ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಗಂಭೀರವಾಗಿ ತೊಡಗಿಸಿಕೊಂಡಿರುವುದರಿಂದ ಸಂಪುಟದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತಕ್ಷಣಕ್ಕೆ ಆಗುವುದು ಅನುಮಾನ ಎನ್ನಲಾಗುತ್ತಿದೆ.
ರಾಜ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಎಲ್ಲ ಮಾಹಿತಿಯನ್ನೂ ವರಿಷ್ಠರ ಮುಂದಿಡಲು ಮುಖ್ಯಮಂತ್ರಿಗಳು ಬಯಸಿದ್ದಾರೆ. ಒಟ್ಟಾರೆ, ಸಂಪುಟದ ಬಗ್ಗೆ ವರಿಷ್ಠರೇ ಸೂಕ್ತ ನಿರ್ಣಯ ಕೈಗೊಳ್ಳಲಿ ಎಂಬ ನಿಲವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದಿದ್ದಾರೆ ಎನ್ನಲಾಗಿದೆ.

Recommended Video
ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಸಿಎಂ ಬೊಮ್ಮಾಯಿಗೆ ದುಂಬಾಲು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ತೆರಳುವುದು ನಿಗದಿಯಾದ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಿದೆ. ಶುಕ್ರವಾರ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಂಎಲ್‌ಸಿ ಆರ್.ಶಂಕರ್, ಆನಂದ್ ಮಾಮನಿ ಮತ್ತಿತರ ಕೆಲವು ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆದಲ್ಲಿ ತಮಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಗಳು ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಸಂಸದರೊಂದಿಗೆ ಹಾಗೂ ಅಂತಾರಾಜ್ಯ ಜಲ ವಿವಾದಗಳ ಕುರಿತಂತೆ ಕಾನೂನು ತಜ್ಞರೊಂದಿಗೆ ಸಭೆ ನಡೆಸುವ ಉದ್ದೇಶದೊಂದಿಗೆ ದೆಹಲಿಗೆ ತೆರಳುತ್ತಿದ್ದಾರೆ. ಈ ವೇಳೆ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ನಡೆಸಲು ಪಕ್ಷದ ವರಿಷ್ಠರು ಲಭಿಸುವ ಸಾಧ್ಯತೆ ತೀರಾ ಕಡಮೆ ಎನ್ನಲಾಗುತ್ತಿದೆ. ಆದರೂ ಮುಖ್ಯಮಂತ್ರಿಗಳ ಮೇಲೆ ಶಾಸಕರು ತಮ್ಮ ಒತ್ತಡ ಮುಂದುವರೆಸಿದ್ದಾರೆ.












Click it and Unblock the Notifications