Karnataka Session: ''ರಾಜ್ಯಪಾಲರ ಅಧಿಕಾರ ಕಿತ್ತುಕೊಂಡು ಸುಳ್ಳು ಹೇಳಿಸಿತಾ ಕಾಂಗ್ರೆಸ್ ಸರ್ಕಾರ?''
ಬೆಂಗಳೂರು, ಮಾರ್ಚ್ 03: ಮುಡಾ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಘರ್ಷಣೆ ಉಂಟಾಗಿತ್ತು. ಕಾಯ್ದೆಗಳು ವಾಪಾಸ್ ಕಳುಹಿಸಲಾಗಿತ್ತು. ರಾಜ್ಯಪಾಲ ಮೇಲೆ ಕಾಂಗ್ರೆಸ್ ನಾಯಕರು ಅಸಮಧಾನ ಹೊರ ಹಾಕಿದ್ದರು. ಇದೀಗ ರಾಜ್ಯಪಾಲರಿಂದಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕರ್ನಾಟಕ ಬಜೆಟ್ ಅಧಿಕವೇಶನದಲ್ಲಿ ಮಾತನಾಡಿದ ರಾಜ್ಯಪಾಲರ ಭಾಷಣದ ಬಳಿಕ ಇಂಥದ್ದೊಂದು ಮಾತುಗಳು ಕೇಳಿ ಬಂದಿವೆ.
ಸೋಮವಾರದಿಂದ (ಫೆ.3) ಕರ್ನಾಟಕ ಬಜೆಟ್ ಕುರಿತು ಜಂಟಿ ಅಧಿವೇಶನ ಶುರುವಾಗಿದೆ. ಮೊದಲ ದಿನ ಅಧಿವೇಶನ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣ ಮಾಡಿದ್ದಾರೆ. ಇದಾದ ಬಳಿಕ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಮುಗಿಬಿದ್ದ ಘಟನೆ ನಡೆಯಿತು. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟಿಸಿದರು.

ರಾಜ್ಯಪಾಲಯ ಭಾಷಣ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಆರ್.ಅಶೋಕ್ ಅವರು, ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಶೂನ್ಯ ಸಾಧನೆ ತೋರಿದ್ದರೂ, ನಾವು ಚಾಂಪಿಯನ್ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿದೆ. ರಾಜ್ಯಪಾಲರ ಅಧಿಕಾರಗಳನ್ನು ಕಿತ್ತುಕೊಂಡು ಈಗ ಅವರ ಮೂಲಕವೇ ಸಾಧನೆ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡಿದೆ. ಅಭಿವೃದ್ಧಿಯೂ ಆಗಿಲ್ಲ, ವಿಕಾಸವೂ ಆಗಿಲ್ಲ, ಕಾಂಗ್ರೆಸ್ ನಾಯಕರ ಜೇಬು ಮಾತ್ರ ತುಂಬಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಕಾಂಗ್ರೆಸ್ ನಾಯಕರ ಜೇಬು, ಅವರ ಮನೆ ತುಂಬಿದೆಯೇ ಹೊರತು ರಾಜ್ಯದ ಅಭಿವೃದ್ಧಿ ಆಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ರಾಜ್ಯಪಾಲರನ್ನು ಹೀಯಾಳಿಸುವ ಮಾತಾಡಿ, ಅವರ ಅಧಿಕಾರಗಳನ್ನು ಕಿತ್ತುಕೊಂಡು, ಈಗ ಅವರ ಕೈಯಲ್ಲೇ ನಾವೇ ನಂ.1 ಎಂಬ ರೀತಿಯಲ್ಲಿ ಹೇಳಿಸಲಾಗಿದೆ ಎಂದು ಪುನರುಚ್ಚರಿಸಿದರು.

ಆರೋಗ್ಯ ಕೈಗೆಟುಕುತ್ತಿದೆ ಎನ್ನಲಾಗಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿದ್ದಾರೆ. ಆದರೆ ಮಕ್ಕಳನ್ನು ಕಾಪಾಡಲು ಕಟಿಬದ್ಧ ಎನ್ನಲಾಗಿದೆ. ಪರಿಶಿಷ್ಟ ಜಾತಿ, ವರ್ಗದವರ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎನ್ನುತ್ತಾರೆ. ಇತ್ತ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಮಾಡಲಾಗಿದೆ.
ದಲಿತರಿಗೆ ಮೀಸಲಾದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿವೆ. ಕಸದ ರಾಶಿ ಕಂಡುಬಂದಿದೆ. ಇಂತಹ ಸಮಯದಲ್ಲಿ ಹೊಸ ರಸ್ತೆಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಇ-ಖಾತಾ ಮಾಡಿಸಿಕೊಡಲು ಹಣ ಕೊಡಿ ಎಂದು ಜಾಹೀರಾತು ನೀಡಲಾಗುತ್ತಿದೆ. ನೀರಾವರಿಗೆ ಆದ್ಯತೆ ಎಂದಿದ್ದಾರೆ. ಈವರೆಗೆ ಎಷ್ಟು ಯೋಜನೆ ತರಲಾಗಿದೆ? ಗುದ್ದಲಿ ಪೂಜೆ ಮಾಡಲಾಗಿದೆ? ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸುವಂತೆ ಸವಾಲು ಹಾಕಿದರು.
ಕಾನೂನು ಉಲ್ಲಂಘನೆ ಆಗಿಲ್ಲವೇ?
ರಾಜ್ಯದಲ್ಲಿ 19 ತಿಂಗಳಲ್ಲಿ ಗಂಭೀರ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ. ಅತ್ಯಾಚಾರಗಳು, ಬ್ಯಾಂಕ್ ದರೋಡೆ, ಮೈಸೂರಿನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಸೇರಿದಂತೆ ಅನೇಕ ಘಟನೆಗಳು ನಡೆದಿವೆ. ಆದರೂ ಸರ್ಕಾರದ ಪ್ರಕಾರ ಇವೆಲ್ಲ ಗಂಭೀರ ಘಟನೆಗಳಲ್ಲ. ಮೈಕ್ರೋ ಫೈನಾನ್ಸ್‌ನಿಂದ ಜನರು ಸಾಯುತ್ತಿದ್ದರೂ ಅದು ಸರ್ಕಾರಕ್ಕೆ ಗಂಭೀರವಾಗಿ ಕಂಡಿಲ್ಲ. ಲೂಟಿ ಮಾಡುತ್ತಿದ್ದರೂ ಪಾರದರ್ಶಕ ಆಡಳಿತ ಎಂದು ಸುಳ್ಳು ಹೇಳಿಸಿದ್ದಾರೆ.
ಹಾಲಿನ ಪ್ರೋತ್ಸಾಹಧನವನ್ನೇ ಬಿಡುಗಡೆ ಮಾಡದೆ ಅದರ ಬಗ್ಗೆಯೇ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಶೇ.30 ರಷ್ಟು ಕಡಿತವಾಗಿದೆ. ಕಲಾವಿದರಿಗೆ ಮಾಸಾಶಾನ ನೀಡಿಲ್ಲ. ನಿಗಮಗಳಲ್ಲಿ ಹಣವಿಲ್ಲ. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿಲ್ಲ.
ಸರ್ಕಾರದ ಮುನ್ನೋಟವೇ ಇಲ್ಲದ ಭಾಷಣ
ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಆದರೆ ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ, ಮುಂದೆ ಏನನ್ನಾದರೂ ಮಾಡಲು ಯಾವ ದೂರದೃಷ್ಟಿಯೂ ಹೊಂದಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ. ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿ, ಅವರ ದಾರಿ ತಪ್ಪಿಸಿದ್ದಲ್ಲದೆ ನಾಡಿನ ಜನರ ದಿಕ್ಕನ್ನೂ ತಪ್ಪಿಸಿದೆ ಎಂದು ಅವರು ವಿವರಿಸಿದರು.
ಬಿಜೆಪಿ ಯೋಜನೆಗಳನ್ನೇ ತನ್ನವು ಎಂದಿದೆ
ರಾಜ್ಯಪಾಲರ ಭಾಷಣ ಕೇಳಿದರೆ ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಯಿಲ್ಲ ಎಂಬುದು ಸ್ಪಷ್ಟ. ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿರುವುದರ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಲ್‌ಜೀವನ್ ಮಿಷನ್, ಆವಾಸ್ ವಸತಿ, ಸ್ವಾಮಿತ್ವ ಸೇರಿದಂತೆ ಕೆಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ದೂರಿದರು.












Click it and Unblock the Notifications