ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಗೆ ಕೊವಿಡ್-19 ಪಾಸಿಟಿವ್
ಬೆಂಗಳೂರು, ಆಗಸ್ಟ್.30: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ತಮಗೆ ಕೊವಿಡ್-19 ಸೋಂಕು ತಗುಲಿರುವ ಬಗ್ಗೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ತಿಳಿಸಿದ್ದಾರೆ.
"ನಾನು #COVID19 ಪರೀಕ್ಷೆಗೆ ಒಳಗಾಗಿದ್ದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ರೋಗಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿಮ್ಮ ಶುಭಾಶಯಗಳು ಮತ್ತು ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಹಿಂತಿರುಗುವ ವಿಶ್ವಾಸವಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಜಾಗರೂಕರಾಗಿರಿ ಎಂದು ಮನವಿ ಮಾಡುತ್ತೇನೆ" ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಗಣ್ಯಾತಿಗಣ್ಯರಿಗೆ ಕೊವಿಡ್-19 ಸೋಂಕು:
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ಶ್ರೀರಾಮುಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ್, ಹೆಚ್.ಡಿ.ರೇವಣ್ಣ, ಮಾಜಿ ಸಚಿವ ಜನಾರ್ಧನ್ ರೆಡ್ಡಿ ಸೇರಿದಂತೆ ಹಲವು ನಾಯಕರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು.












Click it and Unblock the Notifications