ಮೋದಿ ಬೆಂಗಳೂರು ಸಮಾವೇಶಕ್ಕೆ ಅ.30ರಿಂದ ನೋಂದಣಿ
ಬೆಂಗಳೂರು, ಅ, 28 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನ.17ರ ಬೆಂಗಳೂರು ಸಮಾವೇಶಕ್ಕೆ ಬಿಜೆಪಿ ಅಗತ್ಯ ತಯಾರಿ ಆರಂಭಿಸಿದೆ. ಸಮಾವೇಶದಲ್ಲಿ ಭಾಗವಹಿಸಲು ಅಗತ್ಯವಾದ ಪಾಸ್ ಗಳನ್ನು ಅ.30ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಮಾವೇಶದ ಉಸ್ತುವಾರಿ ವಹಿಸಿರುವ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸುವವರಿಂದ ತಲಾ 10 ರೂ. ಪ್ರತಿನಿಧಿ ಶುಲ್ಕ ಸಂಗ್ರಹಿಸಲಾಗುವುದು ಅ.30ರಂದು ಇದಕ್ಕೆ ಸಂಬಂಧಿಸಿದ ಪಾಸ್‌ಗಳನ್ನು ಬಿಡುಗಡೆ ಮಾಡಲಾಗುವುದು. ಅ.30 ಮತ್ತು 31 ರಂದು ರಾಜ್ಯಾದ್ಯಂತ ನೋಂದಣಿ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಪಾಸ್ ಗಳನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಏಕ ಕಾಲದಲ್ಲಿ ಸಮಾವೇಶಕ್ಕಾಗಿ ನೋಂದಣಿ ಕಾರ್ಯ ಆರಂಭಿಸಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿ ಆರಂಭವಾಗುವ ನೋಂದಣಿ ಅಭಿಯಾನ ಎರಡು ದಿನಗಳ ಕಾಲ ತಾಲೂಕು, ಮಂಡಲ ಮತ್ತು ಬೂತ್ ಮಟ್ಟಕ್ಕೂ ವಿಸ್ತರಣೆಯಾಗುತ್ತದೆ ಎಂದು ಅಶೋಕ್ ಮಾಹಿತಿ ನೀಡಿದರು.
ಆನ್‌ಲೈನ್ ನೋಂದಣಿ : ನರೇಂದ್ರ ಮೋದಿ ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವವರು ಆನ್ ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಅಶೋಕ್ ಹೇಳಿದರು. 10 ರೂ ಪ್ರತಿನಿಧಿ ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಪ್ರಿಂಟೌಟ್ ಮೂಲಕವೇ ಪಾಸ್‌ಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಕನಿಷ್ಠ 5 ಲಕ್ಷ ಜನರನ್ನು ಸೇರಿಸಬೇಕು ಎಂದು ಬಿಜೆಪಿ ಉದ್ದೇಶಿಸಿದೆ. ಜನರಿಂದ ಸಂಗ್ರಹಿಸಿದ ಪ್ರತಿನಿಧಿ ಶುಲ್ಕವನ್ನು ಸಮಾವೇಶದ ವೆಚ್ಚ ಸೇರಿದಂತೆ ಪಕ್ಷದ ಸಂಘಟನೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ನರೇಂದ್ರ ಮೋದಿ ಸಮಾವೇಶಕ್ಕೆ ಪ್ರತ್ಯೇಕ ಹೆಸರು ಇಡಲು ತೀರ್ಮಾನಿಸಿದ್ದು, ಎರಡು ದಿನದಲ್ಲಿ ಹೆಸರು ಘೋಷಿಸಲಾಗುವುದು ಎಂದರು.
ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದ ಸ್ಥಳದಲ್ಲಿ ಸಾಧ್ಯವಾದಷ್ಟು ಮಂದಿಗೆ ಕುರ್ಚಿ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಪ್ರಧಾನ ಕಾರ್ಯಕ್ರಮ ನಡೆಯುವ ಮೈದಾನದ ಸುತ್ತ ಇರುವ ಮೈದಾನಗಳಲ್ಲೂ ಬೃಹತ್ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿ ಭಾಷಣ ಕೇಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.











Click it and Unblock the Notifications