ಮನರಂಜನಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವವರಿಗೆ ಜನರ ಬವಣೆಗಳು ಹೇಗೆ ಅರ್ಥವಾಗುತ್ತವೆ?
ಸಿನಿಮಾಗಳ ಪ್ರಚಾರ ಕಾರ್ಯ, ಉದ್ಘಾಟನೆ, ಉತ್ಸವ ಬರೀ ಇಂತಹ ಮನರಂಜನಾ ಕಾರ್ಯಗಳಲ್ಲಿ ಭಾಗಿಯಾಗಲು ಪುರುಸೊತ್ತಿಲ್ಲದ ತಮಗೆ, ಜನರ ಬವಣೆಗಳು ಹೇಗೆ ಅರ್ಥವಾಗುತ್ತವೆ..? ಎಂದು ಸಚಿವ ಸುಧಾಕರ್ ವಿರುದ್ಧ ಜೆಡಿಎಸ್ ವಾಗ್ದಾಳಿ.
ಬೆಂಗಳೂರು, ಫೆಬ್ರವರಿ. 07: ರಾಜ್ಯದ ಆರೋಗ್ಯ ಇಲಾಖೆಯ ಕೆಲಸಗಳು ಸರಿಯಾಗಿ ನಡೆಯದ ಕಾರಣ ರಾಜ್ಯದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜನ ಪರದಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಬಾಕಿ ಹಣ ಪಾವತಿಸದ ಕಾರಣ 14 ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಾ ಡಯಗ್ನಾಸ್ಟಿಕ್ಸ್ ಕಂಪನಿಯು ತನ್ನ ಕಾರ್ಯ ನಿಲ್ಲಿಸಿದ್ದು, ಜನರನ್ನು ತೊಂದರೆಗೆ ನೂಕಿದೆ ಎಂದು ಕನ್ನಡ ದೈನಿಕವೊಂದು ವರದಿ ಮಾಡಿದೆ. ಇದೇ ವರದಿಯನ್ನು ಇಟ್ಟುಕೊಂಡು ಸುಧಾಕರ್ ವಿರುದ್ಧ ಜೆಡಿಎಸ್ ಟೀಕಾಸ್ತ್ರ ಪ್ರಯೋಗಿಸಿದೆ.
"ರಾಜ್ಯ ಬಿಜೆಪಿ ಸರ್ಕಾರವು ಬಾಕಿ ಹಣ ಪಾವತಿಸದ ಕಾರಣ ರಾಜ್ಯದ 14 ಜಿಲ್ಲೆಗಳಲ್ಲಿ ತಪಾಸಣೆ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾ ಡಯಗ್ನಾಸ್ಟಿಕ್ಸ್ ಕಂಪನಿಯು ಸಿ. ಟಿ. ಸ್ಕ್ಯಾನ್ ಮತ್ತು ಎಂಆರ್ ಐ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದೆ. ಆರೋಗ್ಯ ಸಚಿವ ಕೆ.ಸುಧಾಕರ್ ಅವರೇ, ಆಡಳಿತ ಮಾಡಲು ಬದ್ಧತೆ, ಪ್ರಾಮಾಣಿಕತೆ ಬೇಕು" ಎಂದು ಹೇಳಿದೆ.

'ಸಿನಿಮಾಗಳ ಪ್ರಚಾರ ಕಾರ್ಯ, ಉದ್ಘಾಟನೆ, ಉತ್ಸವ ಬರೀ ಇಂತಹ ಮನರಂಜನಾ ಕಾರ್ಯಗಳಲ್ಲಿ ಭಾಗಿಯಾಗಲು ಪುರುಸೊತ್ತಿಲ್ಲದ ತಮಗೆ, ಜನರ ಬವಣೆಗಳು ಹೇಗೆ ಅರ್ಥವಾಗುತ್ತವೆ..? ಕೆ.ಸುಧಾಕರ್ ಅವರೇ, ಆರೋಗ್ಯ ಇಲಾಖೆಯು ಮೋಜು-ಮಸ್ತಿಯ ತಾಣವಲ್ಲ. ಕೋಟ್ಯಂತರ ಜನರ ಜೀವದ ಪ್ರಶ್ನೆ ಈ ಇಲಾಖೆಯ ಆಡಳಿತದ ಮೇಲೆ ನಿಂತಿರುತ್ತದೆ" ಎಂದು ವ್ಯಂಗ್ಯವಾಡಿದೆ.
"ಅನ್ಯ ಕೆಲಸಗಳ ಬಗ್ಗೆ ಆಸಕ್ತಿ ತೋರಿದಂತೆ, ನಿಮ್ಮ ಇಲಾಖೆಯ ಕೆಲಸಗಳ ಬಗ್ಗೆ ಮುತುವರ್ಜಿ ವಹಿಸಿದ್ದರೆ ಸಿ.ಟಿ.ಸ್ಕ್ಯಾನ್, ಎಂಆರ್ ಐ ಪರೀಕ್ಷೆಗಳಿಲ್ಲದೆ ರಾಜ್ಯದ ಜನರು ಪರದಾಡಬೇಕಿರಲಿಲ್ಲ. ಈ ಪರೀಕ್ಷೆಗಳನ್ನು ನಡೆಸುವ ಕಂಪನಿಗೆ ಇನ್ನೂ 40 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ ಸರ್ಕಾರ. ಈ ಸಂಬಂಧ ಕಂಪನಿಯು ಸರ್ಕಾರಕ್ಕೆ ಪತ್ರ ಬರೆದಿತ್ತು" ಎಂದು ರಾಜ್ಯದ ಜನರ ಕಷ್ಟವನ್ನು ಉಲ್ಲೇಖಿಸಿದೆ.
ಮುಂದುವರಿದು, "ಇನ್ನೊಂದು ಕಡೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಸಹಾಯಕರು ತಂಗಲು ಸರಿಯಾದ ವ್ಯವಸ್ಥೆ ಕಲ್ಪಿಸದೇ ಇರುವುದು ಸೇರಿದಂತೆ ಇನ್ನೂ ಹಲವು ಅವ್ಯವಸ್ಥೆಗಳ ಕುರಿತು ಲೋಕಾಯುಕ್ತವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಆರೋಗ್ಯ ಇಲಾಖೆಯ ಆಡಳಿತ ಹಳಿ ತಪ್ಪಿರುವುದಂತೂ ದಿಟ" ಎಂದಿದೆ.

"ಸಚಿವ ಕೆ.ಸುಧಾಕರ್ ಅವರೇ, ನಿಮಗಂತೂ ಜನರ ಕಷ್ಟಗಳ ಅರಿವಿಲ್ಲ. ಮಹತ್ವದ ಇಲಾಖೆಯನ್ನು ಕೆಟ್ಟದಾಗಿ ನಿರ್ವಹಿಸಿ, ಜನರಿಗೆ ಹಿಂಸೆ ಕೊಡುವುದು ವಿಕೃತ ನಡೆ. ಈ ಕ್ಷಣವೇ ಕಂಪನಿಯ ಬಾಕಿ ಹಣ ಪಾವತಿಸಿ, ಆರೋಗ್ಯ ಸೇವೆಗಳು ಮುಂದುವರಿಯುವಂತೆ ನೋಡಿಕೊಳ್ಳಿ. ಬಡವರು, ಮಧ್ಯಮವರ್ಗದವರು ಚಿಕಿತ್ಸೆ ಪಡೆಯಲು ಅನುಕೂಲ ಕಲ್ಪಿಸಿ" ಎಂದು ಆಗ್ರಹಿಸಿದೆ.












Click it and Unblock the Notifications