ಬ್ರಾಹ್ಮಣ ಬಿರುಗಾಳಿ; ನಾನು ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ
ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬ್ರಾಹ್ಮಣ ಸಮುದಾಯದ ಬಗ್ಗೆ ಹೇಳಿಕೆ ನೀಡಿದ್ದ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ. 06: ನಿನ್ನೆಯಿಂದ ರಾಜ್ಯ ಬಿಜೆಪಿ ನಾಯಕರು, ಬ್ರಾಹ್ಮಣ ಸಮುದಾಯ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲವಾಗಿದೆ. ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಈಗ ರಾಜ್ಯದಲ್ಲಿ ಭಾರಿ ಟೀಕೆಗೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬ್ರಾಹ್ಮಣ ಹೇಳಿಕೆ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜ್ಯದ ಬ್ರಾಹ್ಮಣ ಸಮುದಾಯಕ್ಕೆ ಅಗೌರವ ತೋರಿಲ್ಲ, ಮರಾಠಿ ಪೇಶ್ವೆ ಸಮುದಾಯದ ಡಿಎನ್‌ಎ ಇರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಹೊರಟಿದೆ ಎಂದು ಹೇಳಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿರುವ ಎಚ್‌ಡಿಕೆ, "ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನ ಮಾಡಲಾಗುತ್ತಿದೆ. ನಾನು ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿಲ್ಲ. ನಾನು ಯಾವುದೇ ಸಮುದಾಯವನ್ನು ಅವಮಾನಿಸುವುದು, ಅಗೌರವ ತೋರಿಸುವುದು ಇಲ್ಲ" ಎಂದು ಹೇಳಿದ್ದಾರೆ.
"ಆರ್‌ಎಸ್‌ಎಸ್ ಮತ್ತು ಬಿಜೆಪಿ ರಾಜ್ಯಕ್ಕೆ ಮರಾಠಿ ಪೇಶ್ವೆಗಳ ಡಿ.ಎನ್‌ಎ ಇರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಹೊರಟಿದೆ ಎಂದು ಹೇಳಿದೆ. ಈ ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಅದನ್ನು ತಿರುಚಿ ಬ್ರಾಹ್ಮಣ ಸಮುದಾಯಕ್ಕೆ ಅಗೌರವ ಎನ್ನುತ್ತಿದ್ದಾರೆ. ನಾನು ಎತ್ತಿದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ" ಎಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಸಂಘ ನಿರ್ಧರಿಸಿದೆ. ಬಾಕಿ 8 ಮಂದಿ ಉಪಮುಖ್ಯಮಂತ್ರಿ ಆಗಲಿದ್ದಾರೆ. ಪ್ರಲ್ಹಾದ್ ಜೋಶಿ ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದವರು ಎಂದು ಕುಮಾರಸ್ವಾಮಿ ಹೇಳಿದ್ದರು.
"ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿ ಅವರನ್ನು ಸಿಎಂ ಮಾಡಲು ಸಂಘ ಪರಿವಾರ ನಿರ್ಧರಿಸಿದೆ. ಜೋಶಿ ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ, ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ಶೃಂಗೇರಿ ಮಠವನ್ನು ಕೆಡವಿದ ಪೇಶ್ವೆಗಳ ಬ್ರಾಹ್ಮಣ ವರ್ಗ ಪ್ರಲ್ಹಾದ್ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರ ವರ್ಗದವರು ಇವರು. ಇವರು ನಮ್ಮ ಭಾಗದ ಹಳೆಯ ಬ್ರಾಹ್ಮಣರಂತೆ ಅಲ್ಲ, ಇವರು ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದವರು" ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಇದು ಭಾರಿ ವಿರೋಧಕ್ಕೆ ಕಾರಣವಾಗಿದೆ. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಬಿಜೆಪಿ ನಾಯಕರು ಎಚ್‌ಡಿಕೆ ವಿರುದ್ಧ ಕಿಡಿಕಾರಿದ್ದಾರೆ.
ಕಂದಾಯ ಸಚಿವ ಆರ್ ಅಶೋಕ್ , ಎಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಬ್ರಾಹ್ಮಣರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ರೀತಿ ಯಾವುದೇ ಜಾತಿಯನ್ನು ಕೀಳಾಗಿ ತೋರಿಸಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಗೆ ಕೀರ್ತಿ ತರುವುದಿಲ್ಲ ಎಂದಿದ್ದಾರೆ.












Click it and Unblock the Notifications