Kichcha Sudeep: ನಟ ಸುದೀಪ್‌ರನ್ನು ರಾಜಕೀಯಕ್ಕೆ ಎಳೆತರಲು ಕಾಂಗ್ರೆಸ್ ಪ್ಲ್ಯಾನ್, ಪಕ್ಷಕ್ಕಾಗುವ ಲಾಭಗಳೇನು?
ನಟ ಕಿಚ್ಚ ಸುದೀಪ್ ಅವರ ರಾಜಕೀಯ ಎಂಟ್ರಿ ಬಗ್ಗೆ ಸಕತ್ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸುದೀಪ್ ಅವರನ್ನು ಭೇಟಿ ಮಾಡುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ. 15: ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೇರೆ ಪಕ್ಷಗಳಲ್ಲಿನ ಗೆಲ್ಲುವ ಅಭ್ಯರ್ಥಿಗಳನ್ನು ತಮ್ಮ ಪಕ್ಷಕ್ಕೆ ಸೆಳೆಯುವುದು, ಸಿನಿಮಾ ರಂಗದಲ್ಲಿರುವ ಕಲಾವಿದರನ್ನು ಪ್ರಚಾರಕ್ಕೆ ಕರೆಯುವುದು ನಡೆಯುತ್ತದೆ. ಆದರೆ, ಕಾಂಗ್ರೆಸ್ ಪ್ರಚಾರಕ್ಕೆ ಬೇಡ, ಅಭ್ಯರ್ಥಿಯಾಗಿಯೇ ಬನ್ನಿ ಎಂದು ಕಿಚ್ಚ ಸುದೀಪ್‌ಗೆ ಆಹ್ವಾನ ನೀಡಿದೆ.
ಹೌದು, ಕನ್ನಡ ಅಲ್ಲದೇ ಬೇರೆ ಭಾಷೆಗಳಲ್ಲೂ ನಟಿಸಿ ತಮ್ಮ ಅಭಿನಯದಿಂದ ಸೈ ಎನಿಸಿಕೊಂಡಿರುವ ನಟ ಕಿಚ್ಚ ಸುದೀಪ್‌ಗೆ ಹಲವು ರಾಜಕೀಯ ನಾಯಕರು ಸ್ನೇಹಿತರು. ಹಾಗಾಗಿ ಭೇಟಿಯಾಗುವುದು ನಡೆಯುತ್ತಿರುತ್ತದೆ. ಆದರೆ, ಇತ್ತೀಚಿನ ಭೇಟಿಗಳು ರಾಜಕೀಯ ರಂಗದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.
ಕಳೆದ ಕೆಲವು ತಿಂಗಳುಗಳಿಂದ ನಟ ಕಿಚ್ಚ ಸುದೀಪ್ ಅವರ ರಾಜಕೀಯ ಎಂಟ್ರಿ ಬಗ್ಗೆ ಸಕತ್ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸುದೀಪ್ ಅವರನ್ನು ಭೇಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸುದೀಪ್ ಅವರಿಗೆ ಬಲೆ ಹಾಕಿದ್ದು, ರಾಜಕೀಯಕ್ಕೆ ಎಳೆ ತರಲು ರಣತಂತ್ರ ಹೂಡುತ್ತಿದೆ. ಕಾಂಗ್ರೆಸ್ ಹಳೆಯ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರಲು ಪ್ರಯತ್ನಿಸುತ್ತಿದೆ.

ರಾಜ್ಯದ ಪ್ರಮುಖ ಸಮುದಾಯದ ಮತಗಳೇ ಟಾರ್ಗೆಟ್!
ನಟ ಸುದೀಪ್ ರಾಜಕೀಯಕ್ಕೆ ಎಂಟ್ರಿಯಾಗಿ ಕಾಂಗ್ರೆಸ್ ಸೇರ್ಪಡೆಯಾಗಗಬೇಕು ಎಂಬುದು ದೇಶದ ಹಳೆಯ ಪಕ್ಷದ ಪ್ರಮುಖ ನಾಯಕರ ಒತ್ತಾಯ. ಇದು ಸುಖಾ ಸುಮ್ಮನೆ ಬಂದಿರುವ ಆಲೋಚನೆಯಲ್ಲ. ಸುದೀಪ್ ಕಾಂಗ್ರೆಸ್ ಸೇರಿದರೇ ಪಕ್ಷಕ್ಕಾಗುವ ಪ್ರಯೋಜನಗಳ ಪಟ್ಟಿ ತೀರಾ ದೊಡ್ಡದು.
ಸುದೀಪ್ ಜಾತಿಯಿಂದ ಗುರುತಿಸಿಕೊಳ್ಳದಿದ್ದರೂ ಜಾತಿ ಅವರನ್ನು ಬಿಟ್ಟಿಲ್ಲ. ರಾಜ್ಯದ ಪ್ರಮುಖ ಮತದಾರರಾಗಿರುವ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯ ಸುದೀಪ್ ಬೆನ್ನಿಗಿದೆ. ಇದನ್ನೇ ಬಳಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ. ಪ್ರಬಲ ಎಸ್‌ಟಿ ಸಮುದಾಯಕ್ಕೆ ಸೇರಿರುವ ಸುದೀಪ್, ವಾಲ್ಮೀಕಿ ಸಮುದಾಯದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಎಸ್‌ಟಿ ಸಮುದಾಯದ ಮತಗಳ ಮೇಲೆ ಕಾಂಗ್ರೆಸ್ ಕಣ್ಣು
ನಟ ಸುದೀಪ್ ವಾಲ್ಮಿಕಿ ಸಮುದಾಯದ ಎಲ್ಲಾ ಕಾರ್ಯಕ್ರಮಗಳಿಗೆ ಪ್ರಮುಖ ಅತಿಥಿ. ಮೊನ್ನೆ ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ಗುರುಪೀಠದ ವಾಕ್ಮೀಕಿ ಜಾತ್ರೆಯಲ್ಲಿ ಅವರಿರಲಿಲ್ಲ ಎಂಬುದು ದೊಡ್ಡ ಗಲಾಟೆಯಾಗಿದ್ದು ಇನ್ನು ಹಚ್ಚಹಸಿರು.
ವಿಧಾನಸಭಾ ಚುನಾವಣೆಯ ತಯಾರಿಯಲ್ಲಿರುವ ರಾಜ್ಯದ ಸುಮಾರು 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎಸ್‌ಟಿ ಸಮುದಾಯ ಅದರಲ್ಲೂ ವಾಲ್ಮೀಕಿ ಸಮುದಾಯ ಪ್ರಬಲವಾಗಿದೆ. ಸುದೀಪ್ ಕಾಂಗ್ರೆಸ್ ಸೇರ್ಪಡೆಯಿಂದ ಎಸ್.ಟಿ ಸಮುದಾಯದ ದೊಡ್ಡ ಮತ ಬ್ಯಾಂಕ್ ಕಾಂಗ್ರೆಸ್ ಪಕ್ಷದತ್ತ ಬರಬಹುದು ಎಂಬ ಲೆಕ್ಕಾಚಾರ ಪಕ್ಷದ್ದು.
ಸುದೀಪ್ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಸ್ಟಾರ್ ವ್ಯಾಲ್ಯೂ!
ಕಾಂಗ್ರೆಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಹಿರಿಯ ತಲೆಗಳೆ. ಇನ್ನು ಸ್ಟಾರ್ ನಟರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಸುದೀಪ್ ಪಕ್ಷಕ್ಕೆ ಸೇರ್ಪಡೆಯಾದರೆ ಕಾಂಗ್ರೆಸ್‌ಗೆ ಸ್ಟಾರ್ ವ್ಯಾಲ್ಯೂ ಬರಬಹುದು ಎಂಬ ನಿರೀಕ್ಷೆಯಿದೆ.
ಯುವ ಮತದಾರರು ಕಾಂಗ್ರೆಸ್ ಕಡೆಗೆ ಬರಬಹುದು ಎಂಬ ವಿಶ್ವಾಸ ಕಾಂಗ್ರೆಸ್‌ಗೆ ಇದ್ದು, ಸುದೀಪದ ಅವರ ಬೆನ್ನು ಹತ್ತಿದೆ. ಇದರ ಜೊತೆಗೆ ಸ್ಟಾರ್ ನಟರೊಬ್ಬರು ಪಕ್ಷಕ್ಕೆ ಸೇರ್ಪಡೆಯಾದರೆ, ಪಕ್ಷಗಳ ಆಚೆಗೆ ಚಿಂತನೆ ನಡೆಸುವ ಮತದಾರರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್‌ಗಿದೆ.

ಹೊಸ ಚರ್ಚೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ-ಸುದೀಪ್ ಭೇಟಿ ಕಾರಣ
ಇತ್ತ, ಸುದೀಪ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನದಲ್ಲಿ ನಟಿ ರಮ್ಯಾ ಭಾಗಿಯಾಗಿದ್ದಾ ಎಂದು ತಿಳಿದು ಬಂದಿದೆ. ನಟಿ ರಮ್ಯಾ ಸುದೀಪ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ನಟಿ ರಮ್ಯಾ ಮತ್ತು ನಟ ಸುದೀಪ್ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನಟ ಸುದೀಪ್ ಭೇಟಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಜೆಪಿ ನಗರದಲ್ಲಿರುವ ಕಿಚ್ಚ ಸುದೀಪ್ ಮನೆಗೆ ತೆರಳಿ ಮಾತುಕತೆ ನಡೆಸಿ, ಜೊತೆಗೆ ಊಟ ಮಾಡಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಡಿಕೆ ಶಿವಕುಮಾರ್, 'ನಾನಾ ಚಿತ್ರರಂಗಗಳಲ್ಲಿ ಛಾಪು ಮೂಡಿಸಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ ನಟ ಶ್ರೀ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದೆ. ಈ ವೇಳೆ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದೆವು. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ರೂಪಿಸುತ್ತಿರುವ ವಿಶೇಷ ಪ್ರಣಾಳಿಕೆಗೆ ಅವರ ಸಲಹೆಗಳನ್ನು ಪಡೆದೆ' ಎಂದು ಹೇಳಿದ್ದರು.
ಇದರ ಜೊತೆಗೆ ಬಿಜೆಪಿ ಕೂಡ ಕಿಚ್ಚ ಸುದೀಪ್ ಕಡೆ ಒಲವು ತೋರಿಸುತ್ತಿದೆ. ಹಲವು ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲ್ಲಾ ಉತ್ಸವಕ್ಕೂ ಅವರೇ ಅತಿಥಿಯಾಗಿದ್ದರು. ಪುಣ್ಯಕೋಟಿ ದತ್ತು ಯೋಜನೆಯಲ್ಲೂ ಅವರ ಪಾತ್ರ ದೊಡ್ಡದು.
ಒಟ್ಟಾರೆ, ಅಭಿಮಾನಿಗಳ ಹೃದಯದಲ್ಲಿ ಬಾದ್‌ಶಾ ಆಗಿ ಮೆರೆಯುತ್ತಿರುವ ಕಿಚ್ಚ ಸುದೀಪ್ ರಾಜಕೀಯ ರಂಗಕ್ಕೆ ಧುಮುಕುತ್ತಾರೋ, ಕಾಂಗ್ರೆಸ್ ಕೈ ಹಿಡಿಯುತ್ತಾರೋ ಅಥವಾ ಕಮಲ ಅರಳಿಸುತ್ತಾರೋ ಕೆಲವೇ ದಿನಗಳಲ್ಲಿ ತಿಳಿಯಲಿದೆ.












Click it and Unblock the Notifications