ಮತ್ತೆ ರಾಜ್ಯಕ್ಕೆ ಅಮಿತ್ ಶಾ: ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಹಠ ತೊಟ್ಟಿದೆ ಬಿಜೆಪಿ!
ಮಾರ್ಚ್ 24 ಮತ್ತು 26 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಮಾರ್ಚ್ 25 ರಂದು ಪ್ರಧಾನಿ ಮೋದಿ ಬರಲಿದ್ದಾರೆ
ಬೆಂಗಳೂರು, ಮಾರ್ಚ್. 22 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಬಿಜೆಪಿ ಪಣ ತೊಟ್ಟಿರುವುದಕ್ಕೆ ರಾಷ್ಟ್ರೀಯ ನಾಯಕರ ಭೇಟಿಯೇ ಸಾಕ್ಷಿಯಾಗಿದೆ. ಬಿಜೆಪಿ ಪ್ರಚಾರಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ.
ಮೂಲಗಳ ಪ್ರಕಾರ ಗೃಹ ಸಚಿವ ಅಮಿತ್ ಶಾ ಮುಂದಿನ ನಾಲ್ಕು ದಿನಗಳಲ್ಲಿ ಎರಡು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಅವರ ಮಾತಿನಲ್ಲಿ ಹೇಳುವುದಾದರೆ, ದಕ್ಷಿಣಕ್ಕೆ ಬಿಜೆಪಿಯ ಹೆಬ್ಬಾಗಿಲು ಕರ್ನಾಟಕ. ರಾಜ್ಯದಲ್ಲಿ ಈ ವರ್ಷದ ಏಪ್ರಿಲ್ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳ ಜೊತೆಗೆ ಈಗಾಗಲೇ ಚುನಾವಣಾ ಅಧಿಕಾರಿಗಳು ತಮ್ಮ ಸಿದ್ಧತೆ ಆರಂಭಿಸಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಗೂ ಮುನ್ನ ಅವರು ಮಾರ್ಚ್ 24 ಮತ್ತು 26 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ' ಎಂದು ಮೂಲಗಳು ತಿಳಿಸಿವೆ. ಭೇಟಿಯ ಸಂದರ್ಭದಲ್ಲಿ ಅಮಿತ್ ಶಾ ಅವರು ಮಾರ್ಚ್ 24 ರಂದು ವಿಧಾನಸೌಧದ ಮುಂಭಾಗದಲ್ಲಿ ಕೆಂಪೇಗೌಡ ಮತ್ತು ಬಸವೇಶ್ವರರ ಪ್ರತಿಮೆ ಸೇರಿದಂತೆ ಮೂರು ಪ್ರತಿಮೆಗಳನ್ನು ಅನಾವರಣಗೊಳಿಸಲಿದ್ದಾರೆ.
ಮಾರ್ಚ್ 24 ಮತ್ತು 26 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಮಾರ್ಚ್ 25 ರಂದು ಪ್ರಧಾನಿ ಮೋದಿ ಬರಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಖಚಿತಪಡಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವರು ರಾಜ್ಯಾದ್ಯಂತ ಭಾಗವಹಿಸಲಿರುವ ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ.

ಪ್ರಸ್ತುತ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿದ ನಂತರ, ಕೇಸರಿ ಪಕ್ಷವು ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ವಿವಿಧ ಸಮುದಾಯಗಳನ್ನು ತಲುಪಲು ಪ್ರಯತ್ನಿಸುತ್ತಿದೆ.
ಮಾರ್ಚ್ 25 ರಂದು ಬೆಂಗಳೂರಿಗೆ ಪ್ರಧಾನಿ ಬರುವುದು ಖಚಿತವಾಗಿದೆ. ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ 13 ಕಿಲೋಮೀಟರ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ಮತ್ತು ದಾವಣಗೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೋದಿ, ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಚಿಕ್ಕಬಳ್ಳಾಪುರದ ನಂತರ ದಾವಣಗೆರೆಗೆ ತೆರಳಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ದಾವಣಗೆರೆಯಲ್ಲಿ ಮುಕ್ತಾಯಗೊಳ್ಳಲಿದ್ದು, ಪ್ರಧಾನಿ ಭಾಷಣ ಮಾಡುವ ರ್ಯಾಲಿಗೆ ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಶಿವಮೊಗ್ಗಕ್ಕೆ ತೆರಳಿ ಹೊಸ ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೆಹಲಿಗೆ ವಿಮಾನದಲ್ಲಿ ತೆರಳಲಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಒತ್ತಡ ಬಿಜೆಪಿ ಮೇಲಿದ್ದು, ಈ ಭಾರಿಯ ಅಮಿತ್ ಶಾ ಅವರ ಭೇಟಿ ಮಹತ್ವದ್ದಾಗಿದೆ. ಮಾರ್ಚ್ 12 ರಂದು, ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಿದ್ದರು. ಇಲ್ಲಿ ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಚಾರ ಮಾಡಲಾಗಿದೆ. ಲೋಕಸಭಾ ಚುನಾವಣೆ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆ ಬಿಜೆಪಿಗೆ ಸದ್ಯದ ಅತೀ ಮುಖ್ಯ ಅಂಶಗಳಾಗಿವೆ.












Click it and Unblock the Notifications