ಬೆಂಗಳೂರಲ್ಲಿ ಒಟ್ಟು ಮತದಾರರ 97,15,109: ಹೆಚ್ಚಾದ ಯುವ ಮತದಾರರು
ಬೆಂಗಳೂರು, ಏಪ್ರಿಲ್ 27: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಯುವ ಮತದಾರರ ಸಂಖ್ಯೆ ಈ ಭಾರಿ ಹೆಚ್ಚಳವಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ಜನ ಮತದಾನ ಅರ್ಹರು, ಅದರಲ್ಲಿ ಯುವಕರೆಷ್ಟು ಎಂದು ಮಾಹಿತಿಯನ್ನು ಬಿಬಿಎಂಪಿ ಪ್ರಕಟಿಸಿದೆ.
ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಗುರುವಾರ ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಮತದಾರರ ಪಟ್ಟಿ ಕುರಿತು ಇಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಮತದಾರರ ಕುರಿತು ವಿವರಣೆ ನೀಡಿದರು.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 97,15,109 ಮತದಾರರು ಇದ್ದಾರೆ. ಅದರಲ್ಲಿ 50,24,775 ಮಂದಿ ಪುರುಷ ಮತದಾರರು ಹಾಗೂ 46,86,813 ಜನ ಮಹಿಳಾ ಮತದಾರರು ಇದ್ದಾರೆ. ಇನ್ನೂ 1,761 ಇತರೆ, 1,760 ಸೇವಾ ಮತದಾರರಿದ್ದಾರೆ ಎಂದು ತಿಳಿಸಿದರು.
ಯುವ ಮತದಾರರ ಸಂಖ್ಯೆ 1.43 ಲಕ್ಷ
ಈ ಸಲ 1,43,526 ಯುವ ಮತದಾರರು ಚುನಾವಣಾ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 80ವರ್ಷ ವಯಸ್ಸಿನ ಮತದಾರರು ಹಾಗೂ ವಿಶೇಷ ಚೇತನರಿಗೆ ಏಪ್ರಿಲ್ 29 ರಿಂದ ಮೇ 6ನೇ ತಾರೀಖಿನವರೆಗೂ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಚುನಾವಣಾಧಿಕಾರಿಗಳ ಮುಖಾಂತರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿಯವರ ಸುತ್ತೋಲೆಯಂತೆ ಏಪ್ರಿಲ್ 30 ರಂದು 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಕರ್ನಾಟಕ ವಿಧಾನಸಭೆ-2023 ಮತ್ತು ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು 'ನಮ್ಮ ನಡೆ ಮತಗಟ್ಟೆಯ ಕಡೆ' ನಡೆಯಲಿದೆ. ವಿಶೇಷವೆಂದರೆ ಈ ಕಾರ್ಯಕ್ರಮ ಎಲ್ಲ ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ನಡೆಸಲಾಘುವುದು ಎಂದರು.

ಏಕಕಾಲಕ್ಕೆ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾರ್ಯಕ್ರಮ
ಪ್ರಸ್ತುತ ಚುನಾವಣೆಯ ಮತದಾನ ಮೇ 10 ರಂದು ನಡೆಯಲಿದೆ. 'ನಮ್ಮ ನಡೆ ಮತಗಟ್ಟೆಯ ಕಡೆ' ಕಾರ್ಯಕ್ರಮ ಬೆಂಗಳೂರು ನಗರದಲ್ಲಿ ಏಕಕಾಲದಲ್ಲಿ ಬೆಳಗ್ಗೆ 8 ಗಂಟೆಗೆ ಜರುಗುವಂತೆ ಯೋಜನೆ ರೂಪಿಸಲಾಗಿದೆ. ಈ ವೇಳೆ ಪ್ರಾಥಮಿಕವಾಗಿ ಮತಗಟ್ಟೆ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳು, ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ನೇತೃತ್ವ ವಹಿಸಿ ಜಾಗೃತಿ ಮೂಡಿಸಲಿದ್ದಾರೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.












Click it and Unblock the Notifications