ಕ್ರೈಂ ಸ್ಟೋರಿ ಖ್ಯಾತಿ ಬಾಲಕೃಷ್ಣ ಕಾಕತ್ಕರ್ ಇನ್ನಿಲ್ಲ
ಬೆಂಗಳೂರು, ನ.10 : ಉದಯ ಟಿವಿಯ ಜನಪ್ರಿಯ ಕ್ರೈಂ ಸರಣಿ 'ಕ್ರೈಂ ಸ್ಟೋರಿ' ಮೂಲಕ ಮನೆ ಮಾತಾಗಿದ್ದ ಹಿರಿಯ ಪತ್ರಕರ್ತ ಬಾಲಕೃಷ್ಣ ಕಾಕತ್ಕರ್ ಅವರು ಸೋಮವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಮೃತರಾಗಿದ್ದಾರೆ.
ನಾಗರಬಾವಿಯ ಸ್ವಗೃಹದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬಾಲಕೃಷ್ಣ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ. ಕೆಲ ವರ್ಷಗಳಿಂದ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎರಡು ದಿನಗಳ ಹಿಂದೆ ಮನೆಗೆ ಮರಳಿದ್ದರು. ಬಾಲಕೃಷ್ಣ ಕಾಕತ್ಕರ್ ಪತ್ನಿ ಮನೋರಮಾ ಅವರು 2007ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಓರ್ವ ಪುತ್ರನನ್ನು ಅಗಲಿದ್ದಾರೆ
ಕಾರವಾರ ಮೂಲದ ಬಾಲಕೃಷ್ಣ ಕಾಕತ್ಕರ್(55) ಅವರು ಕನ್ನಡ ಚಿತ್ರರಂಗ ಸೇರಿಂದ ಕನ್ನಡ ವಿವಿಧ ಸುದ್ದಿಮನೆಗಳಲ್ಲಿ ಕಾರ್ಯನಿರ್ವಹಿಸಿದ್ದರು.ವೈಕುಂಠ ರಾಜು ಅವರ 'ವಾರಪತ್ರಿಕೆ' ಮೂಲಕ ಪತ್ರಿಕಾರಂಗಕ್ಕೆ ಕಾಲಿಟ್ಟ ಬಾಲಕೃಷ್ಣ ಅವರು ರಾಜಧಾನಿ ಎಂಬ ಟ್ಯಾಬ್ಲಾಯ್ಡ್ ಅನ್ನು ತಮ್ಮ ಸಾರಥ್ಯದಲ್ಲಿ ನಡೆಸುತ್ತಿದ್ದರು. ಈ ಟಿವಿ ನಂತರ ಉದಯ ಟಿವಿಯ ಕ್ರೈಂ ಆಧಾರಿತ ಕಾರ್ಯಕ್ರಮದ ನಿರೂಪಕರಾದರು.

'ಹೇಳಿ ಕೇಳಿ' ಎಂಬ ಜನಪರ ಕಾಳಜಿ ಕಾರ್ಯಕ್ರಮವಲ್ಲದೆ, ಉದಯ ಟಿವಿಯಲ್ಲಿ ಪ್ರಸಾರ ಕಂಡ ಕ್ರೈಂ ಸ್ಟೋರಿ ಬಾಲಕೃಷ್ಣ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಕಾಕತ್ಕರ್ ಅವರು ನಡೆಸಿಕೊಡುತ್ತಿದ್ದ 'ಮರೆಯದ ಮಾತು ಕಾರ್ಯಕ್ರಮವನ್ನು ಲಹರಿ ಸಂಸ್ಥೆ ಸಿಡಿ ರೂಪದಲ್ಲಿ ಹೊರತಂದಿತ್ತು.
ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಟ್ವಿಟ್ಟರ್ ನಲ್ಲೂ ಸಕ್ರಿಯರಾಗಿದ್ದ ಬಾಲಕೃಷ್ಣ ಅವರು ಸಮಾಜದ ಓರೆ ಕೋರೆಗಳ ತಿದ್ದುವ ಮಾತುಗಳನ್ನು ತಮ್ಮ ವಾಲ್ ಮೇಲೆ ಹಾಕುತ್ತಿದ್ದರು. ಇತ್ತೀಚೆಗೆ ಮೇಟ್ರೋ ಇದು ರೈಲಲ್ಲ ಕೃತಿಯನ್ನು ಹೊರ ತಂದಿದ್ದರು.
ಹೈರಾಣಾಗಿ ಮರಳಿ ಬಂದಿದ್ದೇನೆ-ಎರಡು ವಾರಗಳ ಆಸ್ಪತ್ರೆವಾಸ, ದೇಖರೇಖಿಯ ನಂತರ! ಸದ್ಯಕ್ಕಂತೂ ಶರೀರ ಝರ್ಜರಿತ. ವರ್ಷಾನುಗಟ್ಟಲೆಯಿಂದ ಮೈ,ಮನಸ್ಸಿಗೆ ಅಂಟಿಕೊಂಡು ಕಾಡುತ್ತಿದ್ದ ದುಷ್ಚಟವನ್ನು ಸಂಪೂರ್ಣ ತೊಳೆದುಕೊಂಡಿದ್ದೇನೆ! ಹಾಗಾಗಿ ಖಂಡಿತ ಸುಧಾರಿಸಿಕೊಂಡೇನು. ಹಾರೈಕೆ ಇರಲಿ ಎಂದು ಕಳೆದ ಜುಲೈನಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.












Click it and Unblock the Notifications