ಕ್ಯಾಮ್ಸ್ ಶಶಿಕುಮಾರ್ ಮೇಲೆ ಕೊಲೆ ಯತ್ನ: 12 ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಡಿ ಕೇಸು
ಬೆಂಗಳೂರು, ನ. 05: ರಾಜ್ಯ ಖಾಸಗಿ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಕೊಲೆಗೆ ಯತ್ನಿಸಿದ್ದ ಹನ್ನೆರಡು ಆರೋಪಿಗಳ ವಿರುದ್ಧ ಪೊಲೀಸರು ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ, ಖಾಸಗಿ ಶಾಲೆಗಳ ಪೋಷಕರ ಸಂಘದ ಮುಖ್ಯಸ್ಥ ರವಿ ಕುಮಾರ್ ಸೇರಿದಂತೆ ಹನ್ನೆರಡು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸಲು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಶಿಕುಮಾರ್ ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಒಂದಷ್ಟು ದಿನ ಜೈಲಿನಲ್ಲಿಯೇ ಕೊಳೆಯುವಂತಾಗಿದೆ.
ಜು. 29 ರಂದು ರಾತ್ರಿ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮನೆಗೆ ತೆರಳುವ ವೇಳೆ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಜೀವ ರಕ್ಷಣೆಗಾಗಿ ಶಶಿಕುಮಾರ್ ಪಿಸ್ತೂಲು ತೆಗೆದ ವೇಳೆ ಆರೋಪಿಗಳು ಪರಾರಿಯಾಗಿದ್ದರು. ಶಶಿಕುಮರ್ ಅವರ ಕೈಗೆ ಪೆಟ್ಟಾಗಿತ್ತು. ಈ ಕುರಿತು ಜಾಲಹಳ್ಳಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ಖಾಸಗಿ ಶಾಲೆಗಳ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ರವಿಕುಮಾರ್ ವಿರುದ್ಧ ಈಗಾಗಲೇ ಕೊಲೆ ಯತ್ನ , ಸುಲಿಗೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದ್ದವು. ಖಾಸಗಿ ಶಾಲೆ ಆಡಳಿತ ಮಂಡಳಿಗಳಿಂದ ಸುಲಿಗೆ ಮಾಡುತ್ತಿದ್ದ ರವಿಕುಮಾರ್ ವಿರುದ್ಧ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರವಿ ಕುಮಾರ್ ವಸೂಲಿ ಬಾಜಿ ಕೃತ್ಯಕ್ಕೆ ಬ್ರೇಕ್ ಹಾಕಿದ್ದರು. ಇದರಿಂದ ವೈಷಮ್ಯ ಬೆಳೆಸಿಕೊಂಡಿದ್ದ ರವಿಕುಮಾರ್ ಪೋಷಕರ ಸಂಘ ಕಟ್ಟಿಕೊಂಡಿದ್ದ. ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳನ್ನು ಜತೆಗಿಟ್ಟುಕೊಂಡು ಖಾಸಗಿ ಶಾಲೆಗಳಿಗೆ ಬೆದರಿಕೆ ಹಾಕುತ್ತಿದ್ದು, ಹಲವು ದೂರುಗಳು ದಾಖಲಾಗಿವೆ.
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಜು. 29 ರಂದು ರಾತ್ರಿ ಶಶಿಕುಮಾರ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಆಧರಿಸಿ ಶಶಿಕುಮಾರ್ ಮನೆ ಸಮೀಪವೇ ಮನೆ ಮಾಡಿ ಕೊಲೆಗೆ ಹೊಂಚು ಹಾಕಿದ್ದ ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ತಲೆ ಮರೆಸಿಕೊಂಡಿದ್ದ ಇತರೆ ಆರೋಪಿಗಳನ್ನು ಸಿಸಿಟಿವಿ ದೃಶ್ಯಾವಳಿಗಳ ಮೇಲೆ ತನಿಖೆ ನಡೆಸಿ ಬಂಧಿಸಿದ್ದರು. ಇದೀಗ ಬಂಧಿತ ಹನ್ನೆರಡು ಅರೋಪಿಗಳ ವಿರುದ್ದ ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ.
ಯುವಕನನ್ನು ಅಹಪರಿಸಿ ಹತ್ಯೆ: ಮೂವರ ಬಂಧನ:
ಯುವಕನ ಮುಖಕ್ಕೆ ಸೆಲೋ ಟೇಪ್ ನಿಂದ ಸುತ್ತಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಬಿಸಾಡಿದ್ದ ಪ್ರಕರಣವನ್ನು ರಾಜರಾಜೇಶ್ವರಿನಗರ ಪೊಲೀಸರು ಬೇಧಿಸಿದ್ದಾರೆ. ಪಟಾಕಿ ತರಲು ಹೋಗಿದ್ದ ಯುವಕನನ್ನು ಹಣಕ್ಕಾಗಿ ಅಪಹರಣ ಮಾಡಿ ಕೊಲೆ ಮಾಡಿದ್ದ ಮೂವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಪಟಾಕಿ ತರಲು ಮನೆಯಿಂದ ತೆರಳಿದ್ದ ತರುಣ್‌ನನ್ನು ಅಪಹರಣ ಮಾಡಿದ್ದ ಮೂವರು ದುಷ್ಕರ್ಮಿಗಳು ಮುಖಕ್ಕೆ ಸೆಲ್ಲೋಟೇಪ್ ಕಟ್ಟಿದ್ದರು. ಆ ಬಳಿಕ ತರುಣ್ ಅವರ ತಂದೆಗೆ ಕರೆ ಮಾಡಿ ನಿಮ್ಮ ಮಗನನ್ನು ಅಪಹರಣ ಮಾಡಿದ್ದೇವೆ, 50 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಕಟಿಂಗ್ ಶಾಪ್ ನಡೆಸುತ್ತಿದ್ದ ತರುಣ್ ಅವರ ತಂದೆ ಹಣ ನೀಡಿರಲಿಲ್ಲ. ಈ ಕುರಿತು ತರುಣ್ ತಂದೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ತರುಣ್ ನನ್ನು ಕೊಲೆ ಮಾಡಿ ಮುಖಕ್ಕೆ ಸೆಲೊಟೇಪ್ ಕಟ್ಟಿದ್ದರು.

ಆ ಬಳಿಕ ಮೃತ ದೇಹವನ್ನು ಗೋಣಿ ಚೀಲಕ್ಕೆ ಹಾಕಿ ರಾಜಕಾಲುವೆಗೆ ಬಿಸಾಡಿದ್ದರು. ಅಚ್ಚರಿ ಏನೆಂದರೆ ತರುಣ್ ಅವರ ತಂದೆ ಬಳಿ ಕೆಲಸ ಮಾಡುತ್ತಿದ್ದ ಮೂವರು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಮೂವರು ಆರೋಪಿಗಳನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
ನಾಸಿರ್, ಸಯ್ಯದ್, ತಜ್ಮುಲ್ ಬಂಧಿತ ಆರೋಪಿಗಳು. ಬಂಧಿತ ಮೂವರಲ್ಲಿ ಇಬ್ಬರು ಸಹೋದರರಾಗಿದ್ದಾರೆ. ತರುಣ್ ತಂದೆ ಮಣಿ ಕಟಿಂಗ್ ಶಾಪ್ ನಲ್ಲಿ ಇವರು ಕೆಲಸ ಮಾಡುತ್ತಿದ್ದರು. ಪಟಾಕಿ ತರಲು ಆರೋಪಿಗಳು ತರುಣ್ ಜತೆ ಹೋಗಿದ್ದರು. ಪಟಾಕಿ ಖರೀದಿಸಿ ವಾಪಸು ಬರುವಾಗ ತರುಣ್ ಜತೆ ಗಲಾಟೆ ಮಾಡಿ ಅಪಹರಣ ಮಾಡಿದ್ದಾರೆ. ಆ ಬಳಿಕ ಕೂಡಿ ಹಾಕಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊಡದಿದ್ದಾಗ ಕೊಲೆ ಮಾಡಿ ಮೂಟೆಯಲ್ಲಿ ಮೃತದೇಹ ಕಟ್ಟಿ ರಾಜಕಾಲುವೆಗೆ ಬಿಸಾಡಿರುವುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಮಾದಕ ವಸ್ತು ಸೇವನೆ ಮಾಡಿ ಆ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದು, ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.