ಬೆಂಗಳೂರಿನಲ್ಲಿ ಕಾಂಗ್ರೆಸ್ ಪರ ಉಳಗ ನಾಯಗನ್ ಕಮಲ್ ಹಾಸನ್ ಪ್ರಚಾರ: ಎಲ್ಲೆ ಮೀರಿದ ತಮಿಳರ ಉತ್ಸಾಹ
ಬೆಂಗಳೂರು, ಏಪ್ರಿಲ್ 29: ಬಿಜೆಪಿ ಪರವಾಗಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಅವರನ್ನು ಪಕ್ಷ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ತಮಿಳು ಭಾಷಿಕರ ಮನಗೆಲ್ಲಲು ಕಾಂಗ್ರೆಸ್ ಉಳಗ ನಾಯಗನ್ ಕಮಲ್ ಹಾಸನ್ ಅವರನ್ನು ಪ್ರಚಾರಕ್ಕೆ ಇಳಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗಾಂಧಿನಗರ, ಮಹದೇವಪುರ, ಕೆಆರ್‌ಪುರಂ, ಚಿಕ್ಕಪೇಟೆ ಹಾಗೂ ಪುಲಕೇಶಿನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ತಮಿಳು ಮತದಾರರ ಸಂಖ್ಯೆ ಅಧಿಕವಿದೆ. ಹೀಗಾಗಿ ಅವರ ಮತಗಳನ್ನು ಸೆಳೆಯಲು ತಮಿಳುನಾಡಿನ ಖ್ಯಾತ ನಟರಾದ ಕಮಲ್ ಹಾಸನ್ ಅವರನ್ನು ಪ್ರಚಾರಕ್ಕೆ ಕರೆತರಲಾಗುವುದು ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದರೆಗೆ ಭಾರತ್ ಜೋಡೊ ಯಾತ್ರೆ ಆರಂಭಿಸಿದ್ದಾಗ ಕಮಲ್ ಹಾಸನ್ ಅವರೂ ಕೂಡ ಈ ಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು. ಈಗ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನಿರ್ಣಯಕ ರಾಜ್ಯವಾಗಿರುವ ಕರ್ನಾಟಕವನ್ನು ವಶಪಡಿಸಿಕೊಳ್ಳುವ ತವಕದಲ್ಲಿರುವ ಕಾಂಗ್ರೆಸ್ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ತಮಿಳು ಭಾಷಿಗರ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಕಮಲ್ ಹಾಸನ್ ಅವರನ್ನು ಕಣಕ್ಕಿಸಲು ಮುಂದಾಗಿದೆ ಎನ್ನಲಾಗಿದೆ.
ಕಮಲ್ ಹಾಸನ್ ಅವರು ತಮಿಳುನಾಡಿನಲ್ಲಿ ತಮ್ಮದೇ ಆದ ಮಕ್ಕಳ್ ನೀದಿ ಮಯ್ಯಂ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದಾರೆ. ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರೂ ಹಾಗೂ ಅವರ ಪಕ್ಷದಿಂದ ಹಲವು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಆದರೆ ಅವರಿಗೆ ಜನ ಬೆಂಬಲ ದೊರಕಿರಲಿಲ್ಲ. ಕಾಂಗ್ರೆಸ್‌ನಿಂದ 3500 ಕಿಲೋಮೀಟರ್ ಪ್ರಚಾರ ನಡೆದಾಗ ಅದರಲ್ಲಿ ಭಾಗವಹಿಸಿ ಬೆಂಬಲ ಘೋಷಿಸಿದ್ದರು.

ಬಿಜೆಪಿ ಪಕ್ಷವು ಬೆಂಗಳೂರಿನಲ್ಲಿರುವ ಅನ್ಯ ಭಾಷಿಕರ ಮತಗಳನ್ನು ಸೆಳೆಯಲು ಆಯಾ ರಾಜ್ಯಗಳ ನಾಯಕರನ್ನು ಕರೆಸಿ ಪ್ರಚಾರ ಮಾಡಿಸುತ್ತಿದೆ. ಇದು ಅವರಿಗೆ ಮತಗಳನ್ನು ಸೆಳೆಯಲು ಪ್ರಮುಖ ಅಸ್ತ್ರವಾಗಲಿದೆ. ಹೀಗಾಗಿ ಇದೇ ತಂತ್ರ ಬಳಸಲು ಕಾಂಗ್ರೆಸ್ ಕೂಡ ಮುಂದಾಗಿದ್ದು, ಬೆಂಗಳೂರಿನಲ್ಲಿ ಅಧಿಕವಿರುವ ತಮಿಳರ ಮತಗಳನ್ನು ಸೆಳೆಯಲು ಕಮಲ್ ಹಾಸನ್ ಅವರನ್ನು ಕರೆಸುತ್ತಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಈಗಾಗಲೇ ಹಲವು ಚಲನಚಿತ್ರ ನಟರು ಕರ್ನಾಟಕ ವಿಧಾನಸಭೆಯಲ್ಲಿ ತಮ್ಮ ಸ್ನೇಹಿತ ರಾಜಕಾರಣಿಗಳ ಪರ ಪ್ರಚಾರ ಕೈಗೊಂಡಿದ್ದಾರೆ. ಇದಲ್ಲದೆ ಹಲವು ಖ್ಯಾತನಾಮರೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗೆ ಪಕ್ಷಾಂತರ ಮಾಡಿ ಅಖಾಡಕ್ಕೆ ಇಳಿದಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರತಿಷ್ಠೆಯ ಸ್ಪರ್ಧೆಯಾಗಿ ಮಾರ್ಪಟ್ಟಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಈಗಾಗಲೇ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ ದಿನನಿತ್ಯ ಹಲವು ಜನಪ್ರಿಯ ವ್ಯಕ್ತಿಗಳಿಂದ ಪ್ರಚಾರ ಮಾಡಿಸುತ್ತಿವೆ. ಕಾಂಗ್ರೆಸ್ ಪರ ತಮಿಳುನಾಡಿನ ಮಿತ್ರಪಕ್ಷವಾದ ಡಿಎಂಕೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಪ್ರಚಾರ ಮಾಡಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಸದ್ಯ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದೆ.












Click it and Unblock the Notifications