ಡಿ.1ರಿಂದ ಬಸವನಗುಡಿ ಕಡಲೆಕಾಯಿ ಪರಿಷೆ
ಬೆಂಗಳೂರು, ನ. 26 : ಉದ್ಯಾನಗರಿ ಬೆಂಗಳೂರು ಐತಿಹಾಸಿಕ ಪ್ರಸಿದ್ಧ ಬಸವನಗುಡಿನ ಕಡಲೆಕಾಯಿ ಪರಿಷೆಗೆ ಸಿದ್ಧವಾಗಿದೆ. ಕಾರ್ತಿಕ ಮಾಸದ ಕೊನೆಯವಾರ ಕಡಲೆಕಾಯಿ ಪರಿಷೆ ನಡೆಯಲಿದ್ದು, ಈಗಾಗಲೇ ಕಡಲೆಕಾಯಿ ಮಾರಾಟ ಮಳಿಗೆಗಳು ಆಗಮಿಸಿವೆ. ಈ ವರ್ಷ ಕಡಲೆಕಾಯಿ ಇಳುವರಿ ಉತ್ತಮವಾಗಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.
ಕಾರ್ತಿಕ ಮಾಸದ ಕೊನೆಯ ವಾರ ಅಂದರೆ ಡಿ.1 ರಿಂದ 3ರ ವರೆಗೆ ಈ ಬಾರಿಯ ಕಡೆಲೆಕಾಯಿ ಪರಿಷೆ ನಡೆಯಲಿದೆ. ಪರಿಷೆ ಆರಂಭವಾಗುವುದಕ್ಕೂ ಐದು ದಿನಗಳು ಬಾಕಿ ಇದ್ದರೂ, ಬಸವನಗುಡಿಯಲ್ಲಿ ಕಡಲೆಕಾಯಿ ಮಾರಾಟ ಮಳಿಗೆಗಳು ತಲೆಯೆತ್ತಿವೆ. ಈ ವರ್ಷದ ಪರಿಷೆಗೆ 5 ರಿಂದ 6 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಕಡಲೆಕಾಯಿಯ ಇಳುವರಿ ಉತ್ತಮವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಈಗಾಗಲೇ ಲೀಟರ್‌ಗೆ 20ರಿಂದ 25 ರೂ.ವರೆಗೆ ಕಡಲೆಕಾಯಿ ಮಾರಾಟವಾಗುತ್ತಿದ್ದು, ಪರಿಷೆಯ ಆರಂಭವಾದ ತಕ್ಷಣ ಬೆಲೆಗಳು ಮತ್ತಷ್ಟು ಏರುವ ಸಾಧ್ಯತೆ ಇದೆ.
ಐತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಬೆಂಗಳೂರು ಸುತ್ತಮುತ್ತಲ ಹಳ್ಳಿಗಳು, ತುಮಕೂರು, ರಾಮನಗರ, ಚನ್ನಪಟ್ಟಣ, ಕೋಲಾರ, ಚಿಂತಾಮಣಿ, ಹೊಸೂರುನಿಂದಲೂ ವ್ಯಾಪಾರಿಗಳು ಆಗಮಿಸುತ್ತಾರೆ. ತಮಿಳುನಾಡಿನ ವುಡುಪೇಟೆ, ಚಂಗೂರು, ತಿರುವಣಮಲೈನಿಂದಲೂ ಕಡಲೆಕಾಯಿ ಪರಿಷೆಗೆ ವ್ಯಾಪಾರಿಗಳು ಆಗಮಿಸಲಿದ್ದಾರೆ.
ಇಳುವರಿ ಉತ್ತಮ : ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ರಾಜ್ಯದಲ್ಲಿ ಕಡಲೆಕಾಯಿ ಬೆಳೆ ಉತ್ತಮವಾಗಿದೆ. 2012 ಕ್ಕೆ ಹೋಲಿಸಿದರೆ, ಈ ಬಾರಿ ಶೇ.15 ರಷ್ಟು ಹೆಚ್ಚಿನ ಇಳುವರಿ ದೊರಕಿದೆ. ರಾಜ್ಯದಲ್ಲಿ ಈ ವರ್ಷ 6.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡೆಲೆಕಾಯಿ ಬೆಳೆ ಬೆಳೆಯಲಾಗಿದೆ. ಯಾವುದೇ ಕೀಟ ಬಾಧೆ ಹಾಗೂ ರೋಗ ತಗುಲದ ಕಾರಣ 6 ಲಕ್ಷ ಟನ್‌ಗೂ ಅಧಿಕ ಇಳುವರಿ ಬಂದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications