''ಗಾರ್ಬೇಜ್ ಸಿಟಿ: ಬೆಂಗಳೂರನ್ನು ಹಾಳು ಮಾಡಿದ್ದೇ ಹೆಚ್ಚು! ಸಾವಿರಾರು ಕೋಟಿ ರೂಪಾಯಿ ಡಿಕೆಶಿ ಜೇಬು ಸೇರುತ್ತಿದೆ''
ಬೆಂಗಳೂರು, ಮೇ 14: ಒಂದತ್ತು ನಿಮಿಷ ಮಳೆ ಬಂದರೆ ಸಾಕು ಬೆಂಗಳೂರಿನ ರಸ್ತೆಗಳು ಜಲಾವೃತ. ನೀರು ಸರಾಗವಾಗಿ ಹರಿದು ಹೋಗದೇ ಅವಾಂತರ ಸೃಷ್ಟಿಯಾಗುತ್ತದೆ. ರಸ್ತೆಗಳು ಗುಂಡಿಮಯವಾಗಿದೆ. ಈ ಮಧ್ಯೆ 'ಬ್ರ್ಯಾಂಡ್ ಬೆಂಗಳೂರು' ಉಪಕ್ರಮದಡಿ ಅಭಿವೃದ್ಧಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳುತ್ತಾರೆ. ಇದೀಗ ಅಭಿವೃದ್ಧಿ ಮಾಡದೇ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಭೀರ ಆರೋಪ ಡಿಕೆ ಶಿವಕುಮಾರ್ ಅವರ ವಿರುದ್ಧ ಕೇಳಿ ಬಂದಿದೆ.
ಬೆಂಗಳೂರಿನ ಅಭಿವೃದ್ಧಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಜೆಡಿಎಸ್ ಬುಧವಾರ ಟ್ವಿಟ್ ಮಾಡಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸಿಲಿಕಾನ್ ಸಿಟಿ ಬೆಂಗಳೂರನ್ನು ಅಭಿವೃದ್ಧಿ ಮಾಡಿದ್ದಕ್ಕಿಂತ ಹಾಳು ಮಾಡಿದ್ದೇ ಹೆಚ್ಚು. ಬ್ರ್ಯಾಂಡ್ ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದೆ. ಗಾರ್ಡನ್ ಸಿಟಿ "ಗಾರ್ಬೇಜ್ ಸಿಟಿ"ಯಾಗಿ ಬದಲಾಗಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹೀಗಿದ್ದಾಗ ಯೋಜನೆಗಳ ಸಾವಿರಾರು ಕೋಟಿ ರೂ. ಹಣ ಯಾರ ಜೇಬು ಸೇರುತ್ತಿದೆ? ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ. ಈ ಮೂಲಕ ಉಪಮುಖ್ಯಮಂತ್ರಿಗೆ ಜೆಡಿಎಸ್ ಟಕ್ಕರ್ ನೀಡಿದೆ.
ಇನ್ನೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೆಂಥಾ ದಾರಿದ್ರ್ಯ ಸ್ಥಿತಿ ಬಂದಿದೆ. ಬೊಕ್ಕಸವನ್ನು ಖಾಲಿ ಮಾಡಿರುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜ್ಯ ಕಾಂಗ್ರೆಸ್ ಸರ್ಕಾರ, ಜನರ ಜೀವ ಉಳಿಸಲು ಹಗಲು ರಾತ್ರಿ ಸೇವೆ ಸಲ್ಲಿಸುವ ಆರೋಗ್ಯ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ಸಂಬಳ ನೀಡಿಲ್ಲ ಎಂದು ಜನತಾದಳ (ಜಾತ್ಯಾತೀತ) ದೂರಿದೆ.
ಎನ್‌ಎಚ್‌ಎಂ ಅಡಿ ಆರೋಗ್ಯ ಇಲಾಖೆಯ ಜಿಲ್ಲಾ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕರು, ಸಮನ್ವಯಕಾರರು ಸೇರಿದಂತೆ ಸುಮಾರು 30 ಸಾವಿರ ಆರೋಗ್ಯ ಸಿಬ್ಬಂದಿಗೆ 3 ತಿಂಗಳಿಂದ ವೇತನ ನೀಡಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಮತ್ತೊಂದು ಕಡೆ ಸದ್ದಿಲ್ಲದೇ, 15 ಸಾವಿರಕ್ಕೂ ಹೆಚ್ಚು NHM ನೌಕರರನ್ನು ಕೆಲಸದಿಂದ ತೆಗೆಯಲು ಸರ್ಕಾರ ತೀರ್ಮಾನಿಸಿದೆ.
ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮೊದಲು ಬಾಕಿ ಇರುವ ವೇತನ ಪಾವತಿಸಿ ಆರೋಗ್ಯ ಸಿಬ್ಬಂದಿಯ ಕುಟುಂಬಗಳನ್ನು ರಕ್ಷಿಸಬೇಕು ಎಂದು ಜೆಡಿಎಸ್ ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದೆ.












Click it and Unblock the Notifications