ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಆಯೋಗ ದಾಳಿ
ಬೆಂಗಳೂರು, ಜೂನ್ 10: ಜಯನಗರ ವಿಧಾನಸಭೆ ಚುನಾವಣೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಇದರೊಂದಿಗೆ ಬಿಜೆಪಿ ಕಾರ್ಯಕರ್ತರು ಅಕ್ರಮವಾಗಿ ಮದ್ಯ, ಹಣ ಹಂಚಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹಾಗೂ ಪೊಲೀಸರು ಸಾರಕ್ಕಿ ವಾರ್ಡ್, ಜೆಪಿನಗರದ ಮೊದಲ ಹಂತದ ಬಡಾವಣೆಗಳಲ್ಲಿನ ಬಿಜೆಪಿ ಕಾರ್ಯಕರ್ತರು ಸಂಗ್ರಹಿಸಿಟ್ಟ ಹಣ, ಮದ್ಯ ಸಂಗ್ರಹಿಸಿರುವ ದೂರಿನ ಮೇರೆಗೆ ದಾಳಿ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತ ನರಸಿಂಹರಾಜ್ ಎಂಬುವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಯಾವುದೇ ವಸ್ತುಗಳು ದೊರೆತಿಲ್ಲ ಎನ್ನಲಾಗಿದೆ. ಆದರೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇದರಲ್ಲಿ ಕಾಂಗ್ರೆಸ್‌ನ ಕೈವಾಡವಿದೆ ಎಂದು ಹರಿಹಾಯ್ದಿದ್ದಾರೆ. ಮಾಜಿ ಮೇಯರ್ ಮಂಜುನಾಥರೆಡ್ಡಿ ಅವರು ಸರ್ಕಾರವನ್ನು ಮುಂದಿಟ್ಟುಕೊಂಡು ಈ ರೀತಿ ಮಾಡಿದ್ದಾರೆ. ಸರ್ಚ್ ವಾರೆಂಟ್ ಇಲ್ಲದೇ ಚುನಾವಣಾ ಆಯೋಗ ಹಾಗೂ ಪೊಲೀಸರು ಈ ರೀತಿ ಪರಿಶೀಲನೆ ಮಾಡುವುದು ಎಷ್ಟು ಸರಿ ಅಂತ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಯನಗರ ವಿಧಾನಸಭೆ ಚುನಾವಣೆ ಜೂನ್ 11 ರಂದು ನಡೆಯಲಿದ್ದು, ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಭಾನುವಾರ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.











Click it and Unblock the Notifications