ಜಯನಗರ ಸಹನಾ ಹತ್ಯೆ, ಸಕಲೇಶಪುರ ಎಸ್ಟೇಟ್, ಆಪರೇಷನ್ ಕಮಲ!
ಬೆಂಗಳೂರು, ಸೆಪ್ಟೆಂಬರ್ 27 : ಜಯನಗರದ ಸಹನಾ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿದ್ದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಹನಾಳನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪತಿ ಗಣೇಶ್ ಒಂದು ವಾರದ ಹಿಂದೆಯೇ ಯೋಜನೆ ರೂಪಿಸಿದ್ದ.
ಜೂನ್ 21ರಂದು ಬೆಂಗಳೂರಿನ ಜಯನಗರದಲ್ಲಿ 49 ವರ್ಷದ ಗಣೇಶ್ ಪತ್ನಿ ಸಹನಾಳನ್ನು ಹತ್ಯೆ ಮಾಡಿದ್ದ. ಮೂವರು ಮಕ್ಕಳ ಮೇಲೆಯೂ ಗುಂಡು ಹಾರಿಸಿದ್ದ. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿ ಪೊಲೀಸರು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಹಣಕಾಸಿನ ತೊಂದರೆ ಎದುರಿಸುತ್ತಿದ್ದ ಎಚ್.ಕೆ.ಗಣೇಶ್ ಮತ್ತು ಸಹನಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಒಂದು ವಾರದ ಹಿಂದೆಯೇ ಇದಕ್ಕಾಗಿ ಯೋಜನೆ ಸಿದ್ಧವಾಗಿತ್ತು. ಮೊದಲು ಸಹನಾಳನ್ನು ಕೊಲ್ಲುವುದು, ನಂತರ ಮಕ್ಕಳನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲು ಇಬ್ಬರೂ ಸೇರಿ ಯೋಜನೆ ರೂಪಿಸಿದ್ದೆವು ಎಂದು ಗಣೇಶ್ ತಪ್ಪೊಪ್ಪಿಕೊಂಡಿದ್ದಾರೆ.
ಪ್ರಕರಣದ ವಿವರ : ಇಂಜಿನಿಯರಿಂಗ್ ಪದವೀಧರ ಎಚ್.ಕೆ.ಗಣೇಶ್ 1996ರಲ್ಲಿ ಸಹನಾ ಜೊತೆ ವಿವಾಹವಾಗಿದ್ದರು. ನಂತರ ಅವರು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದ್ದರು 2005ರ ತನಕ ಉತ್ತಮ ಲಾಭ ಮಾಡಿದ್ದರು.
ಸಕಲೇಶಪುರದಲ್ಲಿ 102 ಎಕರೆ ಕಾಫಿ ಎಸ್ಟೇಟ್ ಖರೀದಿ ಮಾಡಿದರು. ನಂತರ ಅದರ ಮೇಲೆ 60 ಲಕ್ಷ ರೂ. ಬಂಡವಾಳ ಹೂಡಿದರು. ಕನಕಪುರ ರಸ್ತೆಯಲ್ಲಿ 9.8 ಕೋಟಿ ಹಣಕೊಟ್ಟು ಭೂಮಿ ಖರೀದಿ ಮಾಡಿ ಹರ್ಬಲ್ ವುಡ್ ಫಾರ್ಮ್ ಹೌಸ್ ಎಂಬ ರೆಸಾರ್ಟ್ ನಿರ್ಮಾಣ ಮಾಡಿದರು. 50 ಜನರು ಅಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅದು ಸರಿಯಾಗಿ ನಡೆಯದ ಕಾರಣ ಅಪಾರ ನಷ್ಟ ಅನುಭವಿಸಿದರು.

ಬೆಂಗಳೂರು ನಗರದ ಹಲವಾರು ಕಡೆ ಲೇಔಟ್‌ಗಳನ್ನು ನಿರ್ಮಿಸಿದರು, ಹಲವು ವಿಲ್ಲಾಗಳ ಮೇಲೆ ಬಂಡವಾಳ ಹೂಡಿಕೆ ಮಾಡಿದರು. ಆದರೆ, ನೋಟುಗಳ ನಿಷೇಧದ ಬಳಿಕ ಅದನ್ನು ಕೊಳ್ಳಲು ಯಾರೂ ಬರಲಿಲ್ಲ. ಆದ್ದರಿಂದ, ಹಣ ನಷ್ಟವಾಯಿತು. ಆದರೆ, ಗಣೇಶ್‌ಗೆ ಸಾಲ ಕೊಟ್ಟ ಖಾಸಗಿ ವ್ಯಕ್ತಿಗಳು ಮತ್ತು ಬ್ಯಾಂಕ್‌ನವರು ಹಣಕ್ಕಾಗಿ ಪೀಡಿಸಲು ಆರಂಭಿಸಿದರು.
ಬ್ಯಾಂಕ್‌ನಿಂದ, ಖಾಸಗಿ ವ್ಯಕ್ತಿಗಳಿಂದ ಕಿರುಕುಳವಾಗುತ್ತಿದೆ ಎಂದು ವಿಲ್ ಬರೆದಿದ್ದಾರೆ. 75 ಕೋಟಿ ಮೌಲ್ಯದ ಆಸ್ತಿಯನ್ನು ಅವರು ಹೊಂದಿದ್ದು, 50 ಕೋಟಿ ಗೂ ಅಧಿಕ ಸಾಲವಿದೆ. ಅವರು ಆಸ್ತಿಗಳನ್ನು ಮಾರಲು ಪ್ರಯತ್ನ ನಡೆಸಿದರು. ಯಾರೂ ಕೊಂಡುಕೊಳ್ಳದ ಕಾರಣ ಸಾಲ ತೀರಿಸಲು ಆಗಲಿಲ್ಲ. ಕಿರುಕುಳ ತಾಳಲಾರದೇ ಆತ್ಮಹತ್ಯೆಯ ಯೋಜನೆ ರೂಪಿಸಿದರು.
ಯೋಜನೆಯಂತೆ ಜೂನ್ 21ರ ಮಧ್ಯಾಹ್ನ 1 ಗಂಟೆಗೆ ಎಚ್.ಕೆ.ಗಣೇಶ್ ಸಹನಾಗೆ ಗುಂಡು ಹಾರಿಸಿ ಹತ್ಯೆ ಮಾಡಿದರು. ಮನೆಯಲ್ಲಿದ್ದ ಬುದ್ದಿಮಾಂಧ್ಯ ಮಗ ನಮಿತ್ (15) ಕರೆದುಕೊಂಡು ಶಾಲೆಗೆ ತೆರಳಿದರು. ಅಲ್ಲಿ ಸಿದ್ದಾರ್ಥ (13) ಮತ್ತು ದತ್ತುಪುತ್ರಿ ಸಾಕ್ಷಿ (9) ಕರೆದುಕೊಂಡು ಹರ್ಬಲ್ ವುಡ್ ಫಾರ್ಮ್ ಹೌಸ್‌ಗೆ ತೆರಳಿದರು.
ಮಧ್ಯಾಹ್ನ 3 ಗಂಟೆ ವೇಳೆಗೆ ಅವರು ರೆಸಾರ್ಟ್ ತಲುಪಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಮಕ್ಕಳ ಜೊತೆ ಕಾಲ ಕಳೆದಿದ್ದಾರೆ. ಅದೇ ವೇಳೆಗೆ ಮನೆಯಿಂದ ಸಹನಾ ಹತ್ಯೆ ಆಗಿರುವ ಬಗ್ಗೆ ಕರೆ ಬಂದಿದೆ. ಆಗ ಸಿದ್ದಾರ್ಥ ಮೇಲೆ ಎರಡು ಬಾರಿ, ಸಾಕ್ಷಿ ಮೇಲೆ ಒಂದು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದಾರೆ.
ಅಷ್ಟೊತ್ತಿಗಾಗಲೇ ಜಯನಗರ ಪೊಲೀಸರು ಎಚ್.ಕೆ.ಗಣೇಶ್ ಇರುವ ಸ್ಥಳ ಪತ್ತೆ ಹಚ್ಚಿ ಅಲ್ಲಿಗೆ ಧಾವಿಸಿದ್ದರು. ಪೊಲೀಸರು ಬಂಧಿಸದಿದ್ದರೆ ನಮಿತ್ ಮೇಲೆ ಗುಂಡು ಹಾರಿಸಿ, ತಾನೂ ಸಾಯಲು ಗಣೇಶ್ ಸಿದ್ಧವಾಗಿದ್ದರು. ಆದರೆ, ಗಣೇಶ್ ವಶಕ್ಕೆ ಪಡೆದ ಪೊಲೀಸರು 6 ಸಜೀವ ಗುಂಡುಗಳನ್ನು ಆತನಿಂದ ವಶಕ್ಕೆ ತೆಗೆದುಕೊಂಡರು.
ಪತ್ನಿಯನ್ನು ಕೊಂದ ದಿನವೂ ಸಹ ಗಣೇಶ್‌ಗೆ 12 ಕರೆಗಳು ಬಂದಿದ್ದವು. ಸಾಲವನ್ನು ವಾಪಸ್ ಮಾಡುವಂತೆ ಕೇಳಿದ್ದರು. ಸದ್ಯ, ಗಣೇಶ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಎಚ್.ಕೆ.ಗಣೇಶ್‌ಗೆ ಆಪರೇಷನ್ ಕಮಲದ ಲಿಂಕ್ ಸಹ ಇದೆ.
ಆಪರೇಷನ್ ಕಮಲ : ಎಚ್.ಕೆ.ಗಣೇಶ್ ಜಿಮ್ ಸೋಮರಿಂದ 2 ಕೋಟಿ ಹಣವನ್ನು 15.5% ಬಡ್ಡಿಗೆ ಪಡೆದಿದ್ದರು. ಹಣ ವಾಪಸ್ ಕೊಡುವಂತೆ ಜಿಮ್ ಸೋಮ ಒತ್ತಾಯಿಸಿದ್ದ. ಆದ್ದರಿಂದ ಸಕಲೇಶಪುರದಲ್ಲಿದ್ದ ಕಾಫಿ ತೋಟವನ್ನು ಸೋಮನಿಗೆ ನೀಡಿದ್ದರು.
ಜಿಮ್ ಸೋಮ ಸಕಲೇಶಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ 2018ರ ವಿಧಾನಸಭೆ ಚುನಾವಣೆಗೆ ನಿಂತಿದ್ದರು. ಆದರೆ, ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು. ಕಳೆದ ವಾರ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಿಮ್ ಸೋಮ ಕಿಂಗ್ ಪಿನ್ ಎಂದು ಹೇಳಿದ್ದರು.












Click it and Unblock the Notifications