ಕುಟುಂಬಕ್ಕಿಂತಲೂ ಹೆಚ್ಚಾಗಿ ವೃತ್ತಿಯನ್ನೇ ಪ್ರೀತಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಕ್ಯಾನ್ಸರ್‌ಗೆ ಬಲಿ
ಬೆಂಗಳೂರು, ಜೂನ್ 05: ಕುಟುಂಬ, ಸಂಸಾರಕ್ಕಿಂತಲೂ ಹೆಚ್ಚಾಗಿ ವೃತ್ತಿಯನ್ನೇ ಪ್ರೀತಿಸುತ್ತಿದ್ದ ಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಭಾನುವಾರ ಲಿವರ್ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ.
ಲಿವರ್ ಕ್ಯಾನ್ಸರ್ ಕೊನೆಯ ಹಂತದಲ್ಲಿರುವಾಗ ಕಳೆದ ಜನವರಿಯಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದಿದ್ದು, ಚಿಕಿತ್ಸೆ ಪಡೆಯಲು 15 ದಿನಗಳ ರಜೆ ತೆಗೆದುಕೊಂಡಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಆದರೆ, ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಮಂಜುನಾಥ್ ಸಾವನ್ನಪ್ಪಿದ್ದಾರೆ. ಹುಟ್ಟೂರು ಹಾಸನಕ್ಕೆ ಇನ್ಸ್ಪೆಕ್ಟರ್ ಮಂಜುನಾಥ್ ಮೃತದೇಹ ರವಾನೆ ಮಾಡಲಾಗಿದ್ದು, ಹಾಸನದಲ್ಲಿ ಅಂತಿಮ ಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮೃತ ಇನ್ಸ್‌ಪೆಕ್ಟರ್ ಮಂಜುನಾಥ್ ಅವರಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಮಂಜುನಾಥ್ ಅವರಿಗೆ ಪತ್ನಿ ಹಾಗೂ ಚಿಕ್ಕ ಮಗನಿದ್ದಾನೆ. ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ ಮೂಲಕ ಹಂತ ಹಂತವಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾ ಬಂದಿದ್ದ ಮಂಜುನಾಥ್ ಬೆಂಗಳೂರಿನ ಜಯನಗರ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು. ಆದರೆ, ಗುಣಪಡಿಸಲಾಗದ ಮಾರಕ ರೋಗದಿಂದ ಎಲ್ಲರನ್ನು ಅಗಲಿದ್ದಾರೆ.
ಹಾಸನ ಮೂಲದವರಾದ ಇನ್ಸ್‌ಪೆಕ್ಟರ್ ಮಂಜುನಾಥ್ ಯುಆರ್ 2007ನೇ ಬ್ಯಾಚ್ ನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ವೃತ್ತಿಗೆ ಸೇರಿಕೊಂಡಿದ್ದರು. ಕಳೆದ 2021 ರಲ್ಲಿ ಮುಖ್ಯಮಂತ್ರಿ ಪದಕಕ್ಕೂ ಭಾಜನರಾಗಿದ್ದರು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ತಮ್ಮ 15 ವರ್ಷಗಳ ಸೇವೆಯಲ್ಲಿ ಹಲವಾರು ಪ್ರಕರಣಗಳನ್ನು ಪರಿಹರಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅವರನ್ನು ಕೆಲವೆಡೆ ಪೀಪಲ್ಸ್ ಮ್ಯಾನ್ ಎಂದು ಕರೆಯಲಾಗುತ್ತಿತ್ತು. ಜೊತೆಗೆ, ರಾಜ್ಯದ ಹಲವಾರು ಸಂಸ್ಥೆಗಳಿಂದ ಗುರುತಿಸಿ ಸನ್ಮಾನಿಸಲಾಗಿತ್ತು.












Click it and Unblock the Notifications