ಮೇ 11ರಂದು ಜಯಲಲಿತಾ ಮೇಲ್ಮನವಿ ತೀರ್ಪು?
ಬೆಂಗಳೂರು, ಮೇ 08 : ಕರ್ನಾಟಕ ಹೈಕೋರ್ಟ್ ವಿಶೇಷ ಪೀಠ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ಮೇಲ್ಮನವಿಯ ತೀರ್ಪುನ್ನು ಮೇ 11ರಂದು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣದ ವಿಚಾರಣೆ ಮುಗಿಸಿ ತೀರ್ಪನ್ನು ಕಾಯ್ದಿರಿಸಲಾಗಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪಿನ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕಸದಸ್ಯ ಪೀಠ ಮಾ.11ರಂದು ಮುಕ್ತಾಯಗೊಳಿಸಿದೆ. ಈಗ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲು ಒಪ್ಪಿಗೆ ನೀಡಿದ್ದು, ಮೇ 11ರಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದೆ. [ಜಯಾ ಕೇಸ್ : ಬಿವಿ ಆಚಾರ್ಯ ಎಸ್ ಪಿಪಿ]

ಹೈಕೋರ್ಟ್‌ಗೆ ಬೇಸಿಗೆ ರಜೆ ಇದ್ದು, ಸಿ.ಆರ್.ಕುಮಾರಸ್ವಾಮಿ ಅವರ ಪೀಠ ತೀರ್ಪು ಪ್ರಕಟಿಸಲು ವಿಶೇಷ ಕಲಾಪವನ್ನು ನಡೆಸಲಿದೆ. ಸುಪ್ರೀಂ ಆದೇಶದಂತೆ ಪ್ರಕರಣದಲ್ಲಿ ಡಿಎಂಕೆ ಮುಖಂಡ ಅನ್ಬಳಗನ್ ಮತ್ತು ಕರ್ನಾಟಕ ಸರ್ಕಾರದ ಲಿಖಿತ ವಿವರಣೆಗಳನ್ನು ಪರೀಶಿಲಿಸಿ, ತೀರ್ಪನ್ನು ನೀಡಲಾಗುತ್ತಿದೆ.[ಬಿವಿ ಆಚಾರ್ಯ ಸಂದರ್ಶನ]
ಜೈಲು ಶಿಕ್ಷೆಯಾಗಿತ್ತು : 2014ರ ಸೆ. 27ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ.ಕುನ್ಹ ಅವರು, ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಇಳವರಸಿ ಮತ್ತು ವಿ.ಎನ್.ಸುಧಾಕರನ್ ತಪ್ಪಿತಸ್ಥರು ಎಂದು ಆದೇಶ ನೀಡಿದ್ದರು. [ಜಯ ಜಾಮೀನು ಅವಧಿ ವಿಸ್ತರಣೆ]
ಜಯಲಲಿತಾ ಅವರಿಗೆ 100 ಕೋಟಿ ಹಾಗೂ ಇತರರಿಗೆ ತಲಾ 10 ಕೋಟಿ ದಂಡ ಮತ್ತು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಜಯಲಲಿತಾ ಮತ್ತು ಇತರ ಮೂವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಈ ತೀರ್ಪನ್ನು ಪ್ರಶ್ನಿಸಿದ್ದರು, ಜಾಮೀನಿಗೆ ಮನವಿ ಮಾಡಿದ್ದರು.
ಸುಪ್ರೀಂಕೋರ್ಟ್ ಎಲ್ಲರಿಗೂ ಜಾಮೀನು ನೀಡಿತ್ತು ಮತ್ತು ಪ್ರಕರಣದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಲು ವಿಶೇಷ ಪೀಠವನ್ನು ರಚನೆ ಮಾಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿತ್ತು. ಆದರಂತೆ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕ ಸದಸ್ಯ ಪೀಠ ರಚನೆಯಾಗಿತ್ತು.












Click it and Unblock the Notifications