ಜಂತಕಲ್ಲು ಗಣಿಗಾರಿಕೆ ಕೇಸ್ : ಎಚ್ಡಿಕೆ ದಂಪತಿ ವಿರುದ್ಧ ಸಮನ್ಸ್ ಜಾರಿ
ಜಂತಕಲ್ ಮೈನಿಂಗ್ ಗುತ್ತಿಗೆ ಪ್ರಕರಣಕ್ಕೆ ಸಂಬಂಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಮಾರ್ಚ್ 15ಕ್ಕೆ ವಿಚಾರಣೆಗೆ ಖುದ್ದು ಹಾಜರಾಗಬೇಕೆಂದು ಲೋಕಾಯುಕ್ತ ನ್ಯಾಯಾಲಯ ಸೂಚಿಸಿದೆ.
ಬೆಂಗಳೂರು, ಫೆಬ್ರವರಿ 21: ಜಂತಕಲ್ ಮೈನಿಂಗ್ ಗುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಕೋರ್ಟಿನಿಂದ ಸಮನ್ಸ್ ಜಾರಿಯಾಗಿದೆ. ಇಬ್ಬರು ಮಾರ್ಚ್ 15ಕ್ಕೆ ವಿಚಾರಣೆಗೆ ಖುದ್ದು ಹಾಜರಾಗಬೇಕೆಂದು ಲೋಕಾಯುಕ್ತ ನ್ಯಾಯಾಲಯ ಸೂಚಿಸಿದೆ.
ಜಂತಕಲ್ ಮೈನಿಂಗ್ ಗುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ವಿನೋದ್ ಅವರು ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ಮಂಗಳವಾರ ನಡೆಸಲಾಯಿತು. ಮಾರ್ಚ್ 15ರಂದು ಆರೋಪಿಗಳು ಹಾಜರಾಗದಿದ್ದರೆ ವಾರೆಂಟ್ ಜಾರಿ ಮಾಡಲಾಗುವುದು ಎಂದು ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶ ಗೋಪಾಲ್ ಅವರು ಸೂಚಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ವಿಚಾರಣೆಗೆ ಕಾಲಾವಕಾಶ ಬೇಕು ಎಮ್ದು ದೂರುದಾರ ವಕೀಲ ವಿನೋದ್ ಅವರು ಕೋರಿದ್ದರು.
ಈ ಪ್ರಕರಣವನ್ನು 2011ರಲ್ಲೇ ಹೈಕೋರ್ಟ್ ರದ್ದುಗೊಳಿಸಿದೆ. ವಕೀಲ ವಿನೋದ್ ಅವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆಸುವಂತೆ ಸೂಚನೆ ನೀಡಿತ್ತು. ಸುಪ್ರೀಂ ಸೂಚನೆ ಮೇರೆಗೆ ದೂರುದಾರರು ಮತ್ತು ಆರೋಪಿಗಳು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನ್ಯಾಯಾಲಯ ಸೂಚನೆ ನೀಡಿತ್ತು.
ಆದರೆ, ಎಚ್.ಡಿ.ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಅವರು ವಿಚಾರಣೆಗೆ ಜನವರಿ 17, ಫೆಬ್ರವರಿ 8 ಹಾಗೂ ಫೆಬ್ರವರಿ 21ರಂದು ಹಾಜರಾಗಿಲ್ಲ. ಹೀಗಾಗಿ ಮಾರ್ಚ್ 15ಕ್ಕೆ ಹಾಜರಾಗಬೇಕೆಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಜಂತಕಲ್ ಮೈನಿಂಗ್ ಲೈಸನ್ಸ್ ಹಾಗೂ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘ ಡಿನೋಟಿಫೈ ಅವ್ಯವಹಾರ ಪ್ರಕರಣವನ್ನು ರದ್ದುಗೊಳಿಸಿ ಹೈಕೋರ್ಟ್ 2011ರಲ್ಲಿ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications