"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಪ್ಲ್ಯಾನ್''
ಬೆಂಗಳೂರು: ಬೆಂಗಳೂರಿನ ಜಕ್ಕೂರಿನಲ್ಲಿ ಮೈಸೂರಿನ ಮಹಾರಾಜರು ನೀಡಿದ್ದ 370 ಎಕರೆ ಜಾಗದಲ್ಲಿ ನಿರ್ಮಾಣವಾದ ವೈಮಾನಿಕ ಶಾಲೆಗೆ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಶಂಕುಸ್ಥಾಪನೆ ಮಾಡಿದ್ದರು. ಇದೀಗ ಸರ್ಕಾರ ಇಲ್ಲಿ ರಿಯಲ್ ಎಸ್ಟೇಟ್ ಅನುಕೂಲಕ್ಕಾಗಿ ಶಾಲೆಯನ್ನು ಮುಚ್ಚುವ ಪ್ರಯತ್ನ ಮಾಡುತ್ತಿದೆ ಎಂದು ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಸದರಿ ಶಾಲೆಯನ್ನು ಸ್ಥಳಾಂತರಿಸಲು ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ. ಈ ಶಾಲೆ ಇರುವ ಜಾಗದಲ್ಲಿ ಈ ಭಾಗದಲ್ಲಿ ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ಇಲ್ಲಿ ಶಾಸಕರು, ಅಧಿಕಾರಿಗಳಿಗೆ ಎಕ್ಸಿಕ್ಯೂಟಿವ್ ಕ್ಲಬ್ ನಿರ್ಮಿಸಲು ಯೋಜನೆ ಇತ್ತು. ಬಿಜೆಪಿ ಅವಧಿಯಲ್ಲಿ ಅದನ್ನು ರದ್ದು ಮಾಡಲಾಗಿತ್ತು. ಇದೆಲ್ಲದರ ಬೆನ್ನಲ್ಲೆ ಮತ್ತೆ ಸರ್ಕಾರ ಶಾಲೆ ಸ್ಥಳಾಂತರ ಯತ್ನ ಮಾಡುತ್ತಿದೆ ಎಂದರು.

ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಪ್ಲ್ಯಾನ್
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಪ್ಪಾಗಿದೆ, ಇದು ದೊಡ್ಡ ಹಗರಣ, ಶಾಲೆಯನ್ನು ಉಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದನ್ನು ಅವರು ಸ್ಮರಿಸಿದರು. ಶಾಲೆಯ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಚರ್ಚೆಯಾಗಿದೆ. ನಗರದಲ್ಲಿ ಬೇರೆ ಕಡೆ ಸಾಕಷ್ಟು ಜಾಗವಿದ್ದರೂ ಶಾಲೆಯ ಜಾಗವನ್ನೇ ಪಡೆಯಲು ಹುನ್ನಾರ ನಡೆಯುತ್ತಿದೆ.
ಶಾಲೆಯನ್ನು ಮುಚ್ಚಿದರೆ ರಿಯಲ್ ಎಸ್ಟೇಟ್‌ನವರು ಎತ್ತರದ ಕಟ್ಟಡಗಳನ್ನು ಕಟ್ಟಿಸಿ ಹಣ ಮಾಡುತ್ತಾರೆ. ಈ ಮೂಲಕ ಸರ್ಕಾರಕ್ಕೂ ಕೆಟ್ಟ ಹೆಸರು ಬರುವುದು ಖಚಿತ. ಶಾಲೆಯ ಜಾಗವನ್ನು ರಿಯಲ್ ಎಸ್ಟೇಟ್‌ಗೆ ಕೊಡಬಾರದು ಎಂದು ಅವರು ಒತ್ತಾಯಿಸಿದರು.
ಅಭಿವೃದ್ಧಿ ಕಾಮಗಾರಿಗಳು ಸ್ಥಗಿತ
ಬೆಂಗಳೂರಿನಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಈಜಿಪುರದ ಮೇಲ್ಸೇತುವೆ, ಉಲ್ಲಾಳ ಗೇಟ್ ಸೆಪರೇಟರ್, ರಾಜರಾಜೇಶ್ವರಿ ನಗರ ಜಂಕ್ಷನ್, ಕೆಂಗೇರಿ ಹೊರವರ್ತುಲ ರಸ್ತೆ, ಎಚ್‌ಎಂಟಿ ಪೈಪ್‌ಲೈನ್ ವೃತ್ತ ಮೊದಲಾದ ಕಡೆ ಕಾಮಗಾರಿ ಸ್ಥಗಿತವಾಗಿದೆ. ಸರ್ಕಾರವನ್ನು ಪ್ರಶ್ನೆ ಮಾಡಿದರೆ ಹಣವಿದೆ ಎನ್ನುತ್ತಾರೆ. ಕಾಮಗಾರಿಗೆ ಹಣವಿಲ್ಲದೆ ಎಲ್ಲವೂ ಸ್ಥಗಿತವಾಗಿದೆ. ನಿಗದಿತ ಸಮಯಕ್ಕೆ ಹಣ ನೀಡಿಲ್ಲವೆಂದು ಒಬ್ಬ ಗುತ್ತಿಗೆದಾರರು ಜಿಬಿಎಗೆ ಪತ್ರ ಬರೆದಿದ್ದಾರೆ ಎಂದರು.
ಜಿಬಿಎ ಸಂಪೂರ್ಣ ಪಾಪರ್
ಹಿಂದೆ ಕಲ್ಯಾಣ ಕಾರ್ಯಕ್ರಮಗಳಡಿ ಬಡವರಿಗೆ ತಳ್ಳುಗಾಡಿ, ಇಸ್ತ್ರಿಪೆಟ್ಟಿಗೆ ನೀಡಲಾಗುತ್ತಿತ್ತು. ಆದರೆ ಮೂರು ವರ್ಷದಿಂದ ಯಾರಿಗೂ ಸ್ವಯಂ ಉದ್ಯೋಗಕ್ಕೆ ಪರಿಕರ ನೀಡಿಲ್ಲ. ಬೆಂಗಳೂರಿಗೆ ಬಜೆಟ್‌ನಲ್ಲಿ ಏಳೆಂಟು ಸಾವಿರ ಕೋಟಿ ರೂ. ಎಂದು ಹೇಳಿದರೂ, ಕೇವಲ 3,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಜಿಬಿಎ ಸಂಪೂರ್ಣ ಪಾಪರ್ ಆಗಿದೆ. ಸಿಎಂ ಸಿದ್ದರಾಮಯ್ಯ 48,000 ಕೋಟಿ ರೂ. ಗೆ ಬಾಂಡ್ ತರುವುದಾಗಿ ಬಜೆಟ್‌ನಲ್ಲಿ ಹೇಳಿದ್ದಾರೆ. ಬೆಂಗಳೂರಿನ ಸಮಸ್ಯೆಗಳು ನಿವಾರಣೆಯಾಗಲು ಹೆಚ್ಚು ಅನುದಾನವನ್ನು ಸರ್ಕಾರ ನೀಡಬೇಕು. ಐದು ಪಾಲಿಕೆಗಳನ್ನು ರಚಿಸಿದರೆ ಸಾಲದು, ಹೆಚ್ಚು ಅನುದಾನ ಕೊಡಬೇಕು ಎಂದು ಆಗ್ರಹಿಸಿದರು.
ನಗರದ ಕಟ್ಟಡಗಳಿಗೆ ಒಸಿ ನೀಡಲ್ಲ
ನಗರದಲ್ಲಿ ಅನೇಕ ಕಟ್ಟಡಗಳಿಗೆ ಒಸಿ ನೀಡದೆ ಸಮಸ್ಯೆ ಉಂಟಾಗಿದೆ. ಏನೇ ಕೇಳಿದರೂ ಸುಪ್ರೀಂ ಕೋರ್ಟ್ ಆದೇಶವಿದೆ ಎನ್ನುತ್ತಾರೆ. ಈಗಾಗಲೇ ನಿರ್ಮಾಣವಾದ 4 ಲಕ್ಷ ಕಟ್ಟಡಗಳು ಬಳಕೆಯಾಗದೆ ಪಾಳು ಬಿದ್ದಿದೆ. ಒಸಿ ನೀಡಲು ಸಾಧ್ಯವಿಲ್ಲವಾದರೆ ನಿರ್ಮಾಣವಾಗಲು ಅನುಮತಿ ಏಕೆ ನೀಡಬೇಕಿತ್ತು? ಈ ಹಿಂದೆ ಒನ್ ಟೈಮ್ ಸೆಟಲ್‌ಮೆಂಟ್ ಎಂಬ ವ್ಯವಸ್ಥೆ ತರಲಾಗಿತ್ತು.
ಬೆಂಗಳೂರಿನಲ್ಲಿ ಶೇಕಡಾ 80 ರಷ್ಟು ಅನಧಿಕೃತ ಕಟ್ಟಡಗಳೇ ಇವೆ. ಅವುಗಳನ್ನು ಒಡೆದು ಹಾಕಲು ಸಾಧ್ಯವಿಲ್ಲ. ವಸತಿಗಾಗಿ ಕಟ್ಟಡ ನಿರ್ಮಾಣ ಮಾಡಿದವರಿಗೆ ಬಳಕೆಗೆ ಅವಕಾಶ ನೀಡಬಹುದು. ಇ-ಖಾತಾ ವ್ಯವಸ್ಥೆಯಡಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಡ್ರೋನ್ ಆಧರಿಸಿ ವಿಸ್ತೀರ್ಣ ಅಳತೆ ಮಾಡಲಾಗಿದೆ. ಜನರಿಗೆ ತೊಂದರೆಯಾಗದಂತೆ ಈ ಸಮಸ್ಯೆ ನಿವಾರಿಸಬೇಕು ಎಂದು ಕೋರಿದರು.












Click it and Unblock the Notifications