ರೈಲ್ವೆ ಬಜೆಟ್ : ಅನಂತ್ ಕುಮಾರ್ ಹೇಳಿದ್ದೇನು?
ಬೆಂಗಳೂರು, ಜು. 9 : ಅಭಿವೃದ್ಧಿಪರ, ಜನಪರವಾದ ರೈಲ್ವೆ ಬಜೆಟ್ ಅನ್ನು ರೈಲ್ವೆ ಸಚಿವರು ಮಂಡಿಸಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ಜನಪರ ಬಜೆಟ್ ಮಂಡಿಸಿದ ಡಿ.ವಿ.ಸದಾನಂದ ಗೌಡರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಮಂಡಿಸಿರುವ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಂತ್ ಕುಮಾರ್, ರೈಲ್ವೆ ಸಚಿವರು ವಾಸ್ತವಿಕ ಅಂಶಗಳ ಬಗ್ಗೆ ಬಜೆಟ್ ನಲ್ಲಿ ಹೆಚ್ಚು ಗಮನಹರಿಸಿದ್ದಾರೆ ಎಂದು ಹೇಳಿದ್ದಾರೆ. ದೇಶದ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾದ ರೈಲ್ವೆ ಇಲಾಖೆಯನ್ನು ಆರ್ಥಿಕವಾಗಿ ಸದೃಢಗೊಳಸಿಲು ಬಜೆಟ್ ನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಿದ್ದಾರೆ. ['ಸದಾನಂದ' ಗೌಡ್ರು ಬಿಟ್ಟಿದ್ದು 58 ಹೊಸ ರೈಲುಗಳು]

ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ, ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಿಸಲಾಗಿದೆ. ರೈಲಿನಲ್ಲಿ ಮಹಿಳೆಯರ ಸುರಕ್ಷತೆ ಆದ್ಯತೆ ನೀಡಲು ರೈಲ್ವೆ ಪೊಲೀಸ್ ನಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಕ್ರಮ ಪ್ರಯಾಣಿಕ ಸ್ನೇಹಿಯಾಗಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ. [ರೈಲ್ವೆ ಬಜೆಟ್ : ಯಾರು ಏನು ಹೇಳಿದರು?]
ರೈಲ್ವೆ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಆಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ರೈಲು, ಎ1 ಮತ್ತು ಎ ದರ್ಜೆಯ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಮುಂತಾದವು ರೈಲ್ವೆ ಬಜೆಟ್ ನ ಪ್ರಮುಖ ಮುಖ್ಯಾಂಶಗಳಾಗಿದ್ದು, ದೂರದೃಷ್ಠಿಯಿಂದ ಕೂಡಿದ ಬಜೆಟ್ ಇದಾಗಿದೆ ಎಂದು ಅನಂತ್ ಕುಮಾರ್ ವಿಶ್ಲೇಷಣೆ ಮಾಡಿದ್ದಾರೆ. [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ರಾಮೇಶ್ವರ-ಚೆನ್ನೈ-ಬೆಂಗಳೂರು-ಅಯೋಧ್ಯೆ-ವಾರಣಾಸಿ-ಹರಿದ್ವಾರ ಮುಂತಾದ ಪ್ರದೇಶಗಳಲ್ಲಿರುವ ದೇವಾಲಯಗಳಿಗೆ ಸಂಪರ್ಕ ಕಲ್ಪಿಸಲು ವಿಶೇಷ ರೈಲನ್ನು ಘೋಷಣೆ ಮಾಡಲಾಗಿದ್ದು, ಇದರಿಂದ ಹಲವು ಭಕ್ತಾದಿಗಳಿಗೆ ಸಹಾಯಕವಾಗಿದೆ. ಎಲ್ಲಾ ಧರ್ಮದ ಮತ್ತು ಎಲ್ಲಾ ವರ್ಗದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯಕ್ಕೂ ಸದಾನಂದ ಗೌಡರು ಹಲವಾರು ಕೊಡುಗೆಗಳನ್ನು ನೀಡಿದ್ದು, ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಉಪಯುಕ್ತವಾಗಿದೆ. ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ ಸಬ್ ಅರ್ಬನ್ ರೈಲು ಪ್ರಸ್ತಾಪಿಸಲಾಗಿದೆ. ಒಟ್ಟಾರೆ ರೈಲ್ವೆ ಬಜೆಟ್ ಜನಪರವಾಗಿದೆ ಎಂದು ಅನಂತ್ ಕುಮಾರ್ ತಿಳಿಸಿದ್ದಾರೆ.


Click it and Unblock the Notifications
