ವ್ಯಾಲೆಟ್ ಪಾರ್ಕಿಂಗ್ ನಲ್ಲಿ ನಿಮ್ಮ ಕಾರು ಎಷ್ಟು ಸೇಫ್?
ವ್ಯಾಲೆಟ್ ಪಾರ್ಕಿಂಗ್ ವ್ಯವಸ್ಥೆಯ ಜವಾಬ್ದಾರಿಯನ್ನು ಹೊರುವ ಕೆಲ ಸಂಸ್ಥೆಗಳು ತಮ್ಮಲ್ಲಿ ಅನುಭವವಿರದ, ನಕಲಿ ಡ್ರೈವಿಂಗ್ ಲೈಸನ್ಸ್ ಹೊಂದಿರುವ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದು ಅಪಾಯಕಾರಿಯಾಗಿ ಪರಿಣಿಮಿಸಿದೆ.
ಬೆಂಗಳೂರು, ಮಾರ್ಚ್ 3: ಇತ್ತೀಚೆಗೆ, ಬಹುತೇಕ ಎಲ್ಲಾ ನಗರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪಾರ್ಕಿಂಗ್ ಸಮಸ್ಯೆ ಉಲ್ಪಣವಾಗಿದೆ. ಬೆಂಗಳೂರಿನಲ್ಲಂತೂ ಇದು ಅತ್ಯಧಿಕ. ಅದರಲ್ಲೂ ಯಾವುದೇ ಆಸ್ಪತ್ರೆ, ಕಚೇರಿ, ಹೋಟೆಲ್... ಹೀಗೆ ಯಾವುದೇ ಜನರ ಹೋಗು, ಬರುವಿಕೆ ಅಧಿಕವಾಗಿರುವ ಕಟ್ಟಡಗಳಂತೂ ಇಂಥ ಸಮಸ್ಯೆಗಳನ್ನು ಎದುರು ನೋಡುತ್ತಿವೆ.
ಹಾಗಾಗಿ, ತಮ್ಮಲ್ಲಿ ಬರುವ ಕಸ್ಟಮರ್ ಗಳ ಪಾರ್ಕಿಂಗ್ ಕಿರಿಕಿರಿ ತಪ್ಪಿಸಲು ಹಲವಾರು ಖಾಸಗಿ ಸಂಸ್ಥೆಗಳು ನೋಡಿಕೊಂಡ ಸರಳ ಉಪಾಯವೆಂದರೆ ವ್ಯಾಲೆಟ್ ಪಾರ್ಕಿಂಗ್. ಆದರೆ, ಈ ವ್ಯಾಲೆಟ್ ಪಾರ್ಕಿಂಗ್ ಎಷ್ಟು ಸೇಫ್ ಎಂಬುದು ಈ ಎದ್ದಿರುವ ಪ್ರಶ್ನೆ. ಅದಕ್ಕೂ ಮೊದಲು ವ್ಯಾಲೆಟ್ ಪಾರ್ಕಿಂಗ್ ಎಂದರೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಏನಿದು ವ್ಯಾಲೆಟ್ ಪಾರ್ಕಿಂಗ್?: ಉದಾಹರಣೆಗೆ, ಜನನಿಬಿಡ ರಸ್ತೆಯಲ್ಲೊಂದು ಶಾಲೆಯಿದೆ ಎಂದು ತಿಳಿಯೋಣ. ಅದರಲ್ಲಿ, ಪಾರ್ಕಿಂಗ್ ಸಮಸ್ಯೆಯಿದ್ದಾಗ, ತಮ್ಮ ಶಾಲೆಗೆ ಭೇಟಿ ನೀಡುವ ವ್ಯಕ್ತಿಗಳ ಖಾಸಗಿ ವಾಹನಗಳ ಪಾರ್ಕಿಂಗ್ ಗಾಗಿ ಹತ್ತಿರದಲ್ಲಿ ಒಂದಿಷ್ಟು ಜಾಗವನ್ನು ಶಾಲೆಯ ವ್ಯವಸ್ಥಾಪಕ ಮಂಡಳಿಯು ಬಾಡಿಗೆಗೋ, ಭೋಗ್ಯಕ್ಕೋ ಖರೀದಿಸುತ್ತದೆ.
ಅಲ್ಲಿ, ಶಾಲೆಗೆ ಬರುವವರ ವಾಹನಗಳನ್ನು ಕೊಂಡೊಯ್ದು ಪಾರ್ಕಿಂಗ್ ಮಾಡಲಾಗುತ್ತದೆ. ಶಾಲೆಯ ಮುಖ್ಯ ದ್ವಾರದಲ್ಲಿ ಬಂದಿಳಿಯುವ ವ್ಯಕ್ತಿಗಳ ಕಾರನ್ನು ಕೊಂಡೊಯ್ದು ಅದನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ವ್ಯಕ್ತಿಗಳ ಕೆಲಸ ಮುಗಿದ ಮೇಲೆ ಆ ಕಾರನ್ನು ಮತ್ತೆ ಶಾಲೆಯ ಮುಂಭಾಗಕ್ಕೆ ತಂದುಕೊಡುವ ಈ ವ್ಯವಸ್ಥೆಯನ್ನೇ ವ್ಯಾಲೆಟ್ ಪಾರ್ಕಿಂಗ್ ಎಂದು ಕರೆಯಲಾಗುತ್ತದೆ.
ಈ ವ್ಯಾಲೆಟ್ ಪಾರ್ಕಿಂಗ್ ಗಾಗಿ ತನ್ನಲ್ಲಿಯೇ ಯಾವುದೇ ಸಂಸ್ಥೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸುವುದು ಅಪರೂಪ. ಬಹುತೇಕ ಇಂಥ ಕೆಲಸಗಳನ್ನು ಖಾಸಗಿ ಸಂಸ್ಥೆಯೊಂದರ ಮೇಲುಸ್ತುವಾರಿಗೆ ವಹಿಸಿಬಿಡುತ್ತಾರೆ. ಅಂದರೆ, ವ್ಯಾಲೆಟ್ ಪಾರ್ಕಿಂಗ್ ಜವಾಬ್ದಾರಿಯನ್ನು ಔಟ್ ಸೋರ್ಸಿಂಗ್ ಗೆ ಕೊಟ್ಟುಬಿಡುತ್ತಾರೆ.
ಇದೆಲ್ಲಾ ಸರಿ. ಆದರೆ, ವ್ಯಾಲೆಟ್ ಪಾರ್ಕಿಂಗ್ ಹೇಗೆ ವಾಹನಗಳಿಗೆ ಅಪಾಯಕಾರಿಯಾಗಬಲ್ಲದು ಎಂದು ಹೇಳುವುದಕ್ಕೂ ಮುನ್ನ ಈ ಕೆಳಗಿನ ಘಟನೆಯನ್ನು ಒಮ್ಮೆ ಓದಲೇಬೇಕು.
ಶುಕ್ರವಾರ (ಮಾ. 3) ಸಂಜೆ ಸುಮಾರು 6 ಗಂಟೆ ಸುಮಾರಿಗೆ ಜಯನಗರದಲ್ಲಿ ನಡೆದ ಒಂದು ಅಪಘಾತ ಈ ಮಾತನ್ನು ಪುಷ್ಟೀಕರಿಸುತ್ತದೆ. ಜಯನಗರದ 3ನೇ ಬ್ಲಾಕ್ ನಲ್ಲಿರುವ ಅಪೊಲೋ ಆಸ್ಪತ್ರೆಗೆ ಆಗಮಿಸಿದ್ದ ಕಾರೊಂದನ್ನು ವ್ಯಾಲೆಟ್ ಪಾರ್ಕಿಂಗ್ ಗೆ ಕೊಂಡೊಯ್ದಿದ್ದ ಡ್ರೈವರ್, ಮರಳಿ ಆ ಕಾರನ್ನು ಸಂಬಂಧಪಟ್ಟ ಮಾಲೀಕರಿಗೆ ತರಲು ಹೋಗಿದ್ದಾಗ, ಹುಂಬತನದಲ್ಲಿ ಗಾಡಿ ಓಡಿಸಿ ಬಂದು 8ನೇ ಮುಖ್ಯರಸ್ತೆಯಲ್ಲಿರುವ ನಡತೂರ್ ಕಟ್ಟಡದ ಕಾಂಪೌಂಡ್ ಗೋಡೆಗೆ ಗುದ್ದಿ ಆ ಕಾರನ್ನು ಅಪಘಾತಕ್ಕೀಡು ಮಾಡಿದ್ದಾನೆ.[ಬ್ರೇಕ್ ಬದಲು ಆಕ್ಸಲರೇಟರ್ ಒತ್ತಿದ್ರೆ ಏನಾಗುತ್ತೆ? ಚಿತ್ರ ನೋಡಿ]
ಇಂಥ ಕೆಲವಾರು ಘಟನೆಗಳು ಇತರ ಮಹಾನಗರಗಳಲ್ಲೂ ನಡೆದಿದೆ. ದೆಹಲಿಯಲ್ಲಿ ಹೀಗೇ ವ್ಯಾಲೆಟ್ ಪಾರ್ಕಿಂಗ್ ಗಾಗಿ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಕೊಂಡೊಯ್ದ ಡ್ರೈವರ್ ಒಬ್ಬ ಅದನ್ನು ಅಪಘಾತಕ್ಕೀಡು ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಈ ಘಟನೆಯ ನೆಪದಲ್ಲಿ ಡ್ರೈವರ್ ನ ಪೂರ್ವಾಪರಗಳನ್ನು ವಿಚಾರ ಮಾಡಲಾಗಿ, ಆತನು ತನ್ನದಲ್ಲದ ಡ್ರೈವಿಂಗ್ ಲೈಸನ್ಸ್ ಹೊಂದಿರುವುದು ಹಾಗೂ ಆ ಡ್ರೈವಿಂಗ್ ಲೈಸನ್ಸ್ ಕೂಡ ನವೀಕರಣಗೊಳ್ಳದಿರುವುದು ಬೆಳಕಿಗೆ ಬಂದಿದೆ. ಇದಿನ್ನೂ ಪೊಲೀಸರ ತನಿಖೆಯಲ್ಲಿ ಸಾಬೀತಾಗಬೇಕಿದೆ. ಆ ವಿಚಾರ ಬೇರೆ.
ಆದರೆ, ವ್ಯಾಲೆಟ್ ಪಾರ್ಕಿಂಗ್ ಜವಾಬ್ದಾರಿ ಹೊರುವ ಸಂಸ್ಥೆಯು ತನ್ನಲ್ಲಿ ಒಂದಿಷ್ಟು ನುರಿತ ಡ್ರೈವರ್ ಗಳನ್ನು ಸಿಬ್ಬಂದಿಗಳನ್ನಾಗಿ ಇಟ್ಟುಕೊಳ್ಳಬೇಕೆಂಬ ನಿಯಮವಿದ್ಯಾಗ್ಯೂ ಯಾವ ಮಾನದಂಡದ ಮೇಲೆ ಡ್ರೈವಿಂಗ್ ಗೊತ್ತಿಲ್ಲದ ಡ್ರೈವರ್ ಗಳನ್ನು ಔಟ್ ಸೋರ್ಸಿಂಗ್ ಸಂಸ್ಥೆಗಳು ತೆಗೆದುಕೊಂಡಿರುವುದು ನಿಜಕ್ಕೂ ಆಕ್ಷೇಪಾರ್ಹ ಎನಿಸುತ್ತದೆ.












Click it and Unblock the Notifications