RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ
ಬೆಂಗಳೂರು: ಮಾರ್ಚ್ 28ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ, ನಗರದ ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಬಿಎಂಆರ್‌ಸಿಎಲ್ (BMRCL) ವಿಶೇಷ ವ್ಯವಸ್ಥೆ ಮಾಡಿದೆ. ಮೆಟ್ರೋ ಮೂಲಕ ಕ್ರೀಡಾಂಗಣಕ್ಕೆ ಬರುವವರಿಗಾಗಿ ಒಟ್ಟು 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಅಲ್ಲದೆ ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ರಿಯಾಯಿತಿ ದರದ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದು ಟ್ರಾಫಿಕ್ ದಂಡಕ್ಕೆ ಕಾರಣವಾಗಬಹುದು. ಕ್ರೀಡಾಂಗಣದ ಹತ್ತಿರ ವಾಹನಗಳನ್ನು ಪಾರ್ಕ್ ಮಾಡಿ ಟ್ರಾಫಿಕ್ ಸಂಕಷ್ಟಕ್ಕೆ ಸಿಲುಕುವ ಬದಲು, ನಿಮ್ಮ ಮನೆಗೆ ಹತ್ತಿರವಿರುವ ಮೆಟ್ರೋ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಿ ಮೆಟ್ರೋ ಮೂಲಕ ಕ್ರೀಡಾಂಗಣ ತಲುಪುವುದು ಉತ್ತಮ. ಇದರಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ.

ಪಾರ್ಕಿಂಗ್ ಶುಲ್ಕ
ದ್ವಿಚಕ್ರ ವಾಹನಗಳಿಗೆ ₹30
ಕಾರುಗಳು: ₹60
ಯಾವೆಲ್ಲ ನಿಲ್ದಾಣಗಳಲ್ಲಿ ಪಾರ್ಕಿಂಗ್?
ವೈಟ್‌ಫೀಲ್ಡ್, ಹೋಪ್ ಫಾರ್ಮ್ ಚನ್ನಸಂದ್ರ, ಕಾಡುಗೋಡಿ ಟ್ರೀ ಪಾರ್ಕ್, ಪಟ್ಟಂದೂರು ಅಗ್ರಹಾರ, ನಲ್ಲೂರಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ, ಸಿಂಗಯ್ಯನಪಾಳ್ಯ, ನಾಯಂಡನಹಳ್ಳಿ, ಜ್ಞಾನ ಭಾರತಿ, ಚಲ್ಲಘಟ್ಟ, ಚಿಕ್ಕಬಿದರಕಲ್ಲು, ದೊಡ್ಡಕಲ್ಲಸಂದ್ರ, ಸೆಂಟ್ರಲ್ ಸಿಲ್ಕ್ ಬೋರ್ಡ್, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಕೆ.ಆರ್.ಪುರ, ಮಾದಾವರ, ಜಾಲಹಳ್ಳಿ, ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಜಯನಗರ, ಬನಶಂಕರಿ, ಯಲೇಚನಹಳ್ಳಿ, ಆರ್.ವಿ.ರಸ್ತೆ, ರಾಗಿಗುಡ್ಡ, ಬಿಟಿಎಂ ಲೇಔಟ್, ಹೆಬ್ಬಗೋಡಿ, ನಾಗಸಂದ್ರ, ಮಹಾಲಕ್ಷ್ಮಿ, ಮಹಾಕವಿ ಕುವೆಂಪು ರಸ್ತೆ, ಶ್ರೀರಾಂಪುರ, ಮೆಜೆಸ್ಟಿಕ್, ಚಿಕ್ಕಪೇಟೆ, ಮೈಸೂರು ರಸ್ತೆ, ಸಿಟಿ ರೈಲ್ವೆ ನಿಲ್ದಾಣ, ಬೈಯಪ್ಪನಹಳ್ಳಿ (ಒಎಂಆರ್ ಭಾಗ), ಬೈಯಪ್ಪನಹಳ್ಳಿ (ಎನ್‌ಜಿಇಎಫ್ ಭಾಗ), ಎಸ್.ವಿ.ರಸ್ತೆ, ಹೊಸಹಳ್ಳಿ, ಕೆಂಗೇರಿ ಬಸ್ ಟರ್ಮಿನಲ್, ಮಂಜುನಾಥನಗರ.
ಉಚಿತ ಮೆಟ್ರೋ ಪ್ರಯಾಣ
ಮೆಟ್ರೋ QR ಕೋಡ್ ಹೊಂದಿರುವ ಅಧಿಕೃತ RCB ಪಂದ್ಯದ ಟಿಕೆಟ್ ಹೊಂದಿರುವವರಿಗೆ. ಪಂದ್ಯದ ದಿನಗಳಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಲು ಮತ್ತು ಬರಲು ಮೆಟ್ರೋ ಪ್ರಯಾಣ ಸಂಪೂರ್ಣ ಉಚಿತವಾಗಿರುತ್ತದೆ. ಅಧಿಕೃತ ಟಿಕೆಟ್ ಹೊಂದಿರುವ ಎಲ್ಲರಿಗೂ ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಸೌಲಭ್ಯವು ಕೇವಲ ಮಾನ್ಯವಾದ ಪಂದ್ಯದ ಟಿಕೆಟ್ ಹೊಂದಿರುವವರಿಗೆ ಮಾತ್ರ ಅನ್ವಯಿಸುತ್ತದೆ. ನಿಮ್ಮ ಟಿಕೆಟ್‌ನಲ್ಲಿರುವ ಮೆಟ್ರೋ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ಈ ಉಚಿತ ಪ್ರಯಾಣದ ಲಾಭ ಪಡೆಯಬಹುದು.
ಮೆಟ್ರೋ ಸೇವೆ ಅವಧಿ ವಿಸ್ತರಣೆ
ಪಂದ್ಯ ಮುಗಿದ ನಂತರ ಪ್ರೇಕ್ಷಕರು ಸುರಕ್ಷಿತವಾಗಿ ಮನೆ ತಲುಪಲು ಮೆಟ್ರೋ ರೈಲುಗಳ ಸಂಚಾರ ಅವಧಿಯನ್ನು ರಾತ್ರಿ 11:00 ಗಂಟೆಯಿಂದ ಮರುದಿನ ಮುಂಜಾನೆ 2:00 ಗಂಟೆಯವರೆಗೆ ವಿಸ್ತರಿಸಲಾಗಿದೆ.
ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12:30ಕ್ಕೆ
ಚೆಲ್ಲಘಟ್ಟ: ರಾತ್ರಿ 12:45ಕ್ಕೆ
ರೇಷ್ಮೆ ಸಂಸ್ಥೆ ಮತ್ತು ಮಾದಾವರ: ರಾತ್ರಿ 12:45ಕ್ಕೆ
ಬೊಮ್ಮಸಂದ್ರ: ರಾತ್ರಿ 01:00ಕ್ಕೆ
ಆರ್.ವಿ. ರಸ್ತೆ: ರಾತ್ರಿ 02:00ಕ್ಕೆ
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್): ನಾಲ್ಕೂ ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲುಗಳು ಹೊರಡಲಿವೆ.
ಕಬ್ಬನ್ ರಸ್ತೆ ಭಾಗದ ಗೇಟ್‌ಗಳನ್ನು ಬಳಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಸುವುದು. ಲಿಂಕ್ ರಸ್ತೆ ಭಾಗದ ಗೇಟ್‌ಗಳನ್ನು ಬಳಸುವವರು ಸಮೀಪದ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣ ಬಳಸುವುದು. ಪ್ರೇಕ್ಷಕರು ತಮ್ಮ ವಾಹನಗಳನ್ನು ನಿಗದಿತ 44 ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ ಮೆಟ್ರೋ ಮೂಲಕ ಕ್ರೀಡಾಂಗಣಕ್ಕೆ ಬರಲು ಸಲಹೆ ನೀಡಲಾಗಿದೆ. ಜನಸಂದಣಿಯನ್ನು ನಿಯಂತ್ರಿಸಲು ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ಅಗತ್ಯವಿದ್ದಲ್ಲಿ ತಾತ್ಕಾಲಿಕವಾಗಿ ಮುಚ್ಚುವ ಅಥವಾ ನಿಯಂತ್ರಿಸುವ ಹಕ್ಕನ್ನು ಬಿಎಂಆರ್‌ಸಿಎಲ್ ಕಾಯ್ದಿರಿಸಿದೆ. ಪ್ರಯಾಣಿಕರು ಪೊಲೀಸ್ ಮತ್ತು ಮೆಟ್ರೋ ಸಿಬ್ಬಂದಿಯ ನಿರ್ದೇಶನಗಳನ್ನು ಅನುಸರಿಸಲು ಕೋರಲಾಗಿದೆ.












Click it and Unblock the Notifications