ಕರ್ನಾಟಕದಲ್ಲಿ ವಿಶ್ವಮಟ್ಟದ 'ಫಿಲ್ಮ್ ಸಿಟಿ' ಸ್ಥಾಪನೆ, ಕಾಮಗಾರಿ ಶೀಘ್ರ ಆರಂಭ: ಬೊಮ್ಮಾಯಿ
ಬೆಂಗಳೂರು, ಮಾರ್ಚ್ 24: ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ ಬಹು ನಿರೀಕ್ಷೆಯ 'ಅಂತಾರಾಷ್ಟ್ರೀಯ ಗುಣಮಟ್ಟದ 'ಫಿಲ್ಮ್ ಸಿಟಿ' ನಿರ್ಮಾಣ ಆಗಲಿದೆ. ಚಲನಚಿತ್ರ ಬಂಧುಗಳು ಮತ್ತು ಉತ್ಸಾಹಿ ಕಲಾವಿದರ ಆಸೆ ಈಡೇರಿಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನೂತನ ಚಲನಚಿತ್ರ ನಗರಿ ನಿರ್ಮಾಣ ಬಗ್ಗೆ ಭರವಸೆ ನೀಡಿದರು. ಫಿಲ್ಮ್ ಸಿಟಿ ಕಾಮಗಾರಿ ಶೀಘ್ರದಲ್ಲಿ ನಡೆಯಲಿದೆ. ಇದು ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿರಲಿದೆ. ಚಿತ್ರರಂಗದಲ್ಲಿ ಅನುಭವ ಇರುವವರಿಗೆ ಹೊಸ ಸ್ಟುಡಿಯೋ ನಿರ್ಮಿಸಲು ಆಹ್ವಾನ ನೀಡುತ್ತಿದ್ದೇವೆ. ಡಿಜಿಟಲ್ ಸ್ಟುಡಿಯೋ ಕೂಡ ನಮ್ಮಲ್ಲಿ ಇರಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಕರ್ನಾಟಕದಲ್ಲಿ ಮುಂದೆ ನಿರ್ಮಾಣವಾಗಲಿರುವ 'ಅಂತಾರಾಷ್ಟ್ರೀಯ ಮಟ್ಟದ 'ಫಿಲ್ಮ್ ಸಿಟಿ' ಕೆಲಸ ಮುಗಿದ ಮೇಲೆ ಹಾಲಿವುಡ್ ನವರು ಇಲ್ಲಿಗೆ ಬಂದು ಸಿನಿಮಾ ಮಾಡಲಿ ಎಂಬ ಆಸೆ ಇದೆ. ಹೀಗೆ ಹೇಳುವ ಮೂಲಕ ಅತ್ಯುತ್ತಮ, ಸುವ್ಯವಸ್ಥಿತ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಫಿಲ್ಮ ಸಿಟಿ ಆಗಲಿದೆ ಎಂಬುದನ್ನು ಅವರು ಖಚಿತಪಡಿಸಿದರು.
ಮಾರ್ಚ್ 30ರವರೆಗೆ ಚಲನಚಿತ್ರೋತ್ಸವ
ಮಾರ್ಚ್ 30ರವರೆಗೆ ನಡೆಯಲಿರುವ ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಉತ್ತಮ ಚಿತ್ರಗಳ ಆಯ್ಕೆಯಾಗಿದೆ. ಈ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ. ಸಿನೆಮಾಗೆ ಬಹಳ ದೊಡ್ಡ ಇತಿಹಾಸ ಇದೆ. ಅತ್ಯಂತ ಅದ್ಬುತವಾದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಡಿಜಿಟಲೀಕರಣ ಆದ ಮೇಲೆ ಬಹಳಷ್ಟು ಬದಲಾವಣೆ ಆಗಿದೆ. ನಾವು ನೋಡುವುದಕ್ಕೂ, ನಮ್ಮ ಮಕ್ಕಳು ಸಿನೆಮಾ ನೋಡುವುದಕ್ಕು ವ್ಯತ್ಯಾಸ ಇದೆ. ಬದುಕಿನಲ್ಲಿ ಎಲ್ಲವೂ ವೇಗವಾಗಿ ಬೆಳೆಯುತ್ತಿದ್ದು, ತಂತ್ರಜ್ಞಾನದ ಜೊತೆ ಜೊತೆ ಸಾಗಿದರೆ ಯಶಸ್ಸು ಸಿಗುತ್ತದೆ ಎಂದರು.
ಸಿನೆಮಾ ಇಲ್ಲದೆ ನಮ್ಮ ಬದುಕಿಲ್ಲ. ಹೀಗಾಗಿ ಸಿನೆಮಾಗಾಗಿ ನಾನು ಏನೆಲ್ಲ ಬೇಕು, ಅದನ್ನು ಮಾಡಿದ್ದೇನೆ. ಸಿನೆಮಾ ಸಬ್ಸಿಡಿ ಹೆಚ್ಚಿಗೆ ಮಾಡಿದ್ದೇನೆ. ಸಬ್ಸಿಡಿ ಪಡೆಯುವ ಚಿತ್ರಗಳ ಸಂಖ್ಯೆ ಹೆಚ್ಚಳ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಫಿಲ್ಮ್ ಸಿಟಿ ಕೂಡ ಆಗಲಿದೆ ಎಂದು ಪುನರುಚ್ಚರಿಸಿದರು.
ಅಪ್ಪು ಸಮಾಧಿ ಅಭಿವೃದ್ಧಿ; ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು
ನಾವು ಈಗಾಗಲೇ ಪವರ್ ಸ್ಟಾರ್ ಪುನೀತ ರಾಜಕುಮಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದೇವೆ. ಅವರ ಹೆಸರಿನಲ್ಲಿ ಸ್ಮಾರಕ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಇದೇ ವರ್ಷ ನಟ ದಿ.ಪುನಿತ್ ರಾಜಕುಮಾರ್ ಅವರ ಸ್ಮಾರಕ ಅಭಿವೃದ್ಧಿ ಮಾಡುತ್ತೇವೆ. ಇದರ ಜೊತೆಗೆ ಅಂಬರೀಶ್ ಅವರ ಸ್ಮಾರಕ ಸಿದ್ದವಾಗುತ್ತಿದೆ. ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ತೀರ್ಮಾನಿಸಲಾಗಿದೆ. ಮಾರ್ಚ್ 27 ರಂದು ಸ್ಮಾರಕ ಹಾಗೂ ಹೆಸರಿಡುವ ಕಾರ್ಯಕ್ರಮ ಮಾಡುತ್ತೇವೆ ಎಂದರು.

14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸ ಉದ್ಘಾಟನಾ ಸಮಾರಂಭ ಕಲಾವಿದರ ಪ್ರದರ್ಶನ ಮತ್ತು ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸುವುದರ ಮೂಲಕ ಆರಂಭವಾಯಿತು.
ಚಲನಚಿತ್ರೋತ್ಸವಕ್ಕೆ 5.5 ಕೋಟಿ ಖರ್ಚು
ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಈ ಕಾರ್ಯಕ್ರಮಕ್ಕೆ 5.5 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಈ ಕಾರ್ಯಕ್ರಮ ಮೂಲಕ ಬೆಂಗಳೂರಿನ ಜನರು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರಗಳನ್ನು ವೀಕ್ಷಿಸಬಹುದು. ಮೈಸೂರಲ್ಲಿ ಹೊಸ ಫಿಲ್ಮ್ ಸ್ಟುಡಿಯೋ ಮೈಸೂರಲ್ಲಿ ಜಾಗ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ರಾಜೀವ್ ಚಂದ್ರಶೇಖರ್, ಬಾಲಿವುಡ್ ನಿರ್ದೇಶಕ- ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ಚಿತ್ರ ನಿರ್ದೇಶಕ ಮತ್ತು ಬರಹಗಾರ ಕಾಮಾಖ್ಯ ನಾರಾಯಣ್ ಸಿಂಗ್, ತೆಲುಗು ಚಿತ್ರಕಥೆಗಾರ ವಿ ವಿಜಯೇಂದ್ರ, ನಟಿ ಸಪ್ತಮಿ ಗೌಡ, ನಟ ಅಭಿಷೇಕ್ ಅಂಬರೀಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications