Get Updates
Get notified of breaking news, exclusive insights, and must-see stories!

ಬಿಬಿಎಂಪಿ ಮುಖ್ಯ ಆಯುಕ್ತರ ಯಲಹಂಕ ರೌಂಡ್ಸ್: ಕಾಮಗಾರಿಗೆ ಚುರುಕು

ಬೆಂಗಳೂರು, ಜೂ.3: ಬೃಹತ್ ಬೆಂಗಳೂರು ಮಹಾನಗರ(ಬಿಬಿಎಂಪಿ) ಯಲಹಂಕ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಅಭಿವೃದ್ದಿ ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಸೂಚಿಸಿದರು.

ಯಲಹಂಕ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲಹಂಕ ಕೆರೆಯು 292 ಎಕರೆ ಪ್ರದೇಶದಲ್ಲಿದ್ದು, ಕೆರೆಯಲ್ಲಿ ಹೂಳನ್ನು ತೆರವುಗೊಳಿಸಿ, ಬಂಡ್, ಜೌಗು ಪ್ರದೇಶ, ಇನ್‌ಲೆಟ್-ಔಟ್‌ಲೆಟ್, ಕೆರೆಗೆ ಕೊಳಚೆ ನೀರು ಸೇರದಿರುವ ಹಾಗೆ ತಿರುವುಗಾಲುವೆ ನಿರ್ಮಾಣ, ಭದ್ರತಾ ಸಿಬ್ಬಂದಿಯ ಕೊಠಡಿ, ಸೈಕಲ್ ಟ್ರ್ಯಾಕ್, ವಿಹಾರಕ್ಕೆ ಬರುವವರಿಗೆ ವಿರಾಮದ ಸ್ಥಳ ಹಾಗೂ ಕೆರೆಯ ಸುತ್ತಲು ಫೆನ್ಸಿಂಗ್ ಅಳವಡಿಕೆ ಮಾಡಲಾಗಿದೆ. ಮಳೆಗಾಲದ ವೇಳೆ ಸ್ಥಳೀಯ ಪ್ರದೇಶದಲ್ಲಿ ಜಾಲಾವೃತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರಾಜಕಾಲುವೆಗಳ ದುರಸ್ಥಿ ಕಾರ್ಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಯೋಜನಾ ವಿಭಾಗದಿಂದ 1 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಆವರಣದಲ್ಲಿರುವ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಿ ಸುಂದರೀಕರಣಗೊಳಿಸಲಾಗಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಜೋರು ಮಳೆಯಾದ ಪರಿಣಾಮ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಜಲಾವೃತಗೊಂಡು ಸಾಕಷ್ಟು ಸಮಸ್ಯೆಯಾಗಿತ್ತು. ಇದೀಗ ಆ ಭಾಗದಲ್ಲಿ ಜಲಾವೃತವಾಗದೆ ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಸರಾಗವಾಗಿ ನೀರು ಹರಿದು ಹೋಗುವಂತೆ ರಾಜಕಾಲುವೆಗಳ ಅಗಲೀಕರಣ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ನಲ್ಲಿ ಹಾದುಹೋಗುವ ರಾಜುಲುವೆಯನ್ನು 8 ಅಡಿಯಿಂದ 10 ಅಡಿಗೆ ಅಗಲೀಕರಣ ಮಾಡಿದ್ದು, ಸದರಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಕೆಳಗೆ ಹಾದುಹೋಗುವ ರಾಜಕಾಲುವೆಯ ವೆಂಟ್ ಭಾಗ ಚಿಕ್ಕದಾಗಿದ್ದು, ಅದನ್ನು ಅಗಲೀಕರಿಸಿ ಪುಶಿಂಗ್ ಬಾಕ್ಸ್ ಅಳವಡಿಸಲು ಯೋಜನೆ ರೂಪಿಸಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಜಲಾವೃತ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೈಕಲ್ ಟ್ರ್ಯಾಕ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ:

ಸೈಕಲ್ ಟ್ರ್ಯಾಕ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ:

ಯಲಹಂಕ ನ್ಯೂ ಟೌನ್ ವಾರ್ಡ್ ವ್ಯಾಪ್ತಿಯಲ್ಲಿ 10.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಿದ್ದು, 438 ಹಾಸನಗಳ ಸಾಮರ್ಥ್ಯದ ಆಡಿಟೋರಿಯಂ, ಬೇಸ್ಮೆಂಟ್ ಹಾಗೂ ಭವನ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಅಡಿಟೋರಿಯಂ ಮೇಲ್ಬಾಗದಲ್ಲಿ ಒಂದು ಸಭಾಂಗಣವಿದ್ದು, ಸುಮಾರು 700 ಹಾಸನಗಳ ವ್ಯವಸ್ಥೆಯಿದೆ. ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣದ ಬಳಿಯ ರಸ್ತೆ ಬದಿಯ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಮೊಬಿ ಪಾರ್ಕ್ ಗೆ ಮೂರು ವರ್ಷ ಟೆಂಡರ್ ನೀಡಲಾಗಿದ್ದು, ವಾರ್ಷಿಕ 13 ಲಕ್ಷ ರೂ. ಪಾಲಿಕೆಗೆ ಪಾವತಿ ಮಾಡಲಿದೆ. ಈ ಸ್ಥಳದಲ್ಲಿ 100 ಕಾರ್, 200 ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವ ವ್ಯವಸ್ಥೆಯಿದ್ದು, ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ವಾಹನಗಳ‌ ನಿಲುಗಡೆಗೆ ಅವಕಾಶ ಕೊಡದಿರಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆ ಬದಿ 2.5 ಕೋಟಿ ರೂ. ವೆಚ್ಚದಲ್ಲಿ 1 ಕಿ.ಮೀ ಮೀಟರ್ ಉದ್ದದಲ್ಲಿ ವಿನೂತನ ಮಾದರಿಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದ್ದು, ಮೊದಲ ಹಂತದಲ್ಲಿ 500 ಮೀಟರ್ ಸೈಕಲ್ ಟ್ರ್ಯಾಕ್ ಪೂರ್ಣಗೊಂಡಿದ್ದು, ಬಳಕೆಗೆ ಅನುವು ಮಾಡಿಕೊಡಲಾಗಿದೆ. ಬಾಕಿ 500 ಮೀಟರ್ ಟ್ರ್ಯಾಕ್ ಅನ್ನು ಕೆಲಸ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 1.95 ಕಿ.ಮೀ ಉದ್ದದ ಯಲಹಂಕ ನ್ಯೂ ಟೌನ್ ಮುಖ್ಯ ರಸ್ತೆ (ಶೇಷಾದ್ರಿಪುರಂ ಕಾಲೇಜು ಮುಖ್ಯ ರಸ್ತೆಯಿಂದ ಅರೋಮಾ ಬೇಕರಿಯವರೆಗೆ)ಯನ್ನು 13 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರತಿಯಲ್ಲಿದ್ದು, ಈಗಾಗಲೇ ಶೇ. 70 ರಷ್ಟು ಕಾಮಗಾರಿ ಪೂರ್ಣಗೊಂಡಿರುತ್ತದೆ. ಜಲಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಬದಿ ಡಕ್ಟ್ ಅಳವಡಿಕೆ, ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗ ಅಭಿವೃದ್ಧಿ ಪ್ರಗತಿಯಲ್ಲಿದೆ. ಈ ಪೈಕಿ ತ್ವರಿತವಗಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಟ್ಟೂರು ಸಸ್ಯಕ್ಷೇತ್ರ ಪರಿಶೀಲನೆ:

ಅಟ್ಟೂರು ಸಸ್ಯಕ್ಷೇತ್ರ ಪರಿಶೀಲನೆ:

70 ಎಕರೆ ಪ್ರದೇಶದಲ್ಲಿ ಅಟ್ಟೂರು ಕೆರೆಯಿದ್ದು, ಕೆರೆಗೆ ಶುದ್ಧ ನೀರು ಬಿಡುವ ಸಲುವಾಗಿ ಜಲಮಂಡಳಿ ವತಿಯಿಂದ 7 ಎಂ.ಎಲ್.ಡಿ ಸಾಮರ್ಥ್ಯದ ಎಸ್.ಟಿ.ಪಿ ಪ್ಲಾಂಟ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ಶುದ್ಧ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಟ್ಟೂರು ಕೆರೆ ಬಳಿಯಿರುವ ಸಸ್ಯಕ್ಷೇತ್ರದಲ್ಲಿ ವಿವಿಧ ರೀತಿಯ ಸಸಿಗಳನ್ನು ಬೆಳಸಲಾಗುತ್ತಿದ್ದು, 8X12 ಅಳತೆಯ 1 ಲಕ್ಷ, 10X16 ಅಳತೆಯ 1 ಲಕ್ಷ, 14X20 ಅಳತೆಯ 50 ಸಾವಿರ ಸೇರಿದಂತೆ 2.5 ಲಕ್ಷ ಸಸಿಗಳಿವೆ. ಅವುಗಳಲ್ಲಿ ಸಂಪಿಗೆ, ಹೊಂಗೆ, ಮಹಗನಿ, ನೇರಳೆ, ಕಾಡು ಬಾದಾಮಿ, ಬೇವು, ಹಲಸು ಸೇರಿದಂತೆ ಇನ್ನಿತ್ಯಾದಿ ಪ್ರಬೇಧದ ಸಸಿಗಳಿವೆ. ಪಾಲಿಕೆ ವತಿಯಿಂದ ಮಳೆಗಾಲ್ಲಿ ರಸ್ತೆ ಬದಿ, ಸರ್ಕಾರಿ ಖಾಲಿ ಜಾಗ, ಉದ್ಯಾನವನಗಳಲ್ಲಿ ನಡೆಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕರಿಂದ ಮನವಿ ಬಂದರೆ ಅವರಿಗೂ ಸಸಿಗಳನ್ನು ವಿತರಿಸಲು ಅಧಿಕಾರಿಗಳಿಗೆ ತಿಳಿಸಿದರು.

ಜೆ.ಎನ್.ಸಿ.ಎ.ಎಸ್‌.ಆರ್ ಪರಿಶೀಲನೆ

ಜೆ.ಎನ್.ಸಿ.ಎ.ಎಸ್‌.ಆರ್ ಪರಿಶೀಲನೆ

ನಗರದ ಬಳ್ಳಾರಿ ರಸ್ತೆ ಜಕ್ಕೂರು(ಏರೋ ಡ್ರಮ್) ಬಳಿ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರಿ ವೈಮಾನಿಕ ಶಾಲೆಯಿಂದ ಒಟ್ಟು 2,450.74 ಚದರ ಮೀಟರ್ ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು ಈಗಾಗಲೇ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಕಾರ್ಯಾದೇಶ ನೀಡಲಾಗಿದ್ದು, ಕಾಮಗಾರಿಯನ್ನು ಪ್ರಾರಂಭಿಸಲಾಗಿರುತ್ತದೆ. ಪ್ರಸ್ತುತ ರಸ್ತೆಬದಿ ಚರಂಡಿ ನಿರ್ಮಾಣ ಕಾಮಗಾರಿ ಕೆಲಸ ನಡೆಯುತ್ತಿದ್ದು, ಬೆಸ್ಕಾಂ ಉಪಯುಕ್ತತೆಗಳನ್ನು ಸ್ಥಳಾಂತರ ಮಾಡಿದ ಬಳಿಕ ರಸ್ತೆ ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಿದರು.ಕಳೆದ ನವೆಂಬರ್ ತಿಂಗಳಲ್ಲಿ ಜೋರು ಮಳೆಯಾದ ಪರಿಣಾಮ ಜೆ.ಎನ್.ಸಿ‌.ಎ.ಎಸ್.ಆರ್(Jawaharlal Nehru Centre For Advanced Scientific Research) ಆವರಣಕ್ಕೆ ನೀರು ನುಗ್ಗಿ ಸಾಕಷ್ಟು ಉಪಕರಣಗಳು ಆಳಾಗಿದ್ದವು. ಈ ಸಂಬಂಧ ಜಕ್ಕೂರು ಕೆರೆಯಿಂದ ಬರುವ ನೀರು ಸರಾಗವಾಗಿ ರಾಚೇನಹಳ್ಳಿ ಕೆರೆಗೆ ಸೇರಲು ಪರ್ಯಾಯ ರಾಜಕಾಲುವೆ ನಿರ್ಮಾಣ ಮಾಡಬೇಕು. ಜೊತೆಗೆ ಸೀವೇಜ್ ನೀರು ಕೆರೆಗೆ ಸೇರದಂತೆ ಜಲಮಂಡಳಿ ವತಿಯಿಂದ ಪ್ರತ್ಯೇಕ ಪೈಪ್ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.

ಡಾಂಬರು ಗುಣಮಟ್ಟ ಪರೀಕ್ಷೆ ಮಾಡಿದ ಆಯುಕ್ತರು

ಡಾಂಬರು ಗುಣಮಟ್ಟ ಪರೀಕ್ಷೆ ಮಾಡಿದ ಆಯುಕ್ತರು

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಕಣ್ಣೂರು ಬಳಿ ಪಾಲಿಕೆಯ 4.5 ಎಕರೆ ಜಾಗದಲ್ಲಿ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ ಡಾಂಬರು ಮಿಶ್ರಣ ಘಟಕ(Batch Mix Plant)ವನ್ನು ಸ್ಥಾಪಿಸಲಾಗಿದೆ. ಒಂದು ಗಂಟೆಗೆ 100/120 TPH (Tonnes Per Hour) ಸಾಮರ್ಥ್ಯವುಳ್ಳ ಡಾಂಬರನ್ನು ತಯಾರಿಸಬಹುದಾಗಿದ್ದು, ದಿನಕ್ಕೆ 30 ರಿಂದ 40 ಟ್ರಕ್ ಡಾಂಬರನ್ನು ತಯಾರಿಸಬಹುದಾಗಿದೆ. ಡಾಂಬರು ಮಿಶ್ರಣ ಘಟಕವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಡಾಂಬರು ಮಿಶ್ರಣಕ್ಕೆ ಕಚ್ಚಾ ವಸ್ತುಗಳಾದ ಜಲ್ಲಿ, ಜಲ್ಲಿಪುಡಿ, ಬಿಟಮಿನ್ ಅನ್ನು ಡಾಂಬರು ಮಿಶ್ರಣಕ್ಕೆ ಅಗತ್ಯ ಪ್ರಮಾಣದಲ್ಲಿ ಪಡೆಯಲಿದೆ ಎಂದು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರು ಶ್ರೀ ಪ್ರಹ್ಲಾದ್ ಮಾಹಿತಿ ನೀಡಿದರು. ಈ ವೇಳೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಪಾಲಿಕೆಯ ಬ್ಯಾಚ್ ಮಿಕ್ಸ್ ಪ್ಲಾಂಟ್ ನಿಂದ ಅವಶ್ಯಕತೆಗೆ ತಕ್ಕಂತೆ ಡಾಂಬರನ್ನು ಉತ್ಪಾದಿಸಿ ತ್ವರಿತಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಡಾಬಂರಿನ ಮಿಶ್ರಣದಲ್ಲಿ ಬಿಟಮಿನ್ ಪ್ರಮಾಣವನ್ನು ಪರಿಶೀಲಿಸಿದಾಗ ವಿನ್ಯಾಸದ ಪ್ರಕಾದ ಶೇ. 5.4 ರಿಂದ 6.1 ರವರೆಗೆ ಇರುಬೇಕು. ಪರೀಕ್ಷೆ ಮಾಡಿದಾಗ ಶೇ. 5.8 ಇದ್ದುದನ್ನು ಗಮನಿಸಿ ಇದೇ ರೀತಿ ಗುಣಮಟ್ಟ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಯಲಹಂಕ ವಲಯ ಪರಿಶೀಲನೆಯ ವೇಳೆ ಸ್ಥಳೀಯ ಶಾಸಕರಾದ ಎಸ್.ಆರ್.ವಿಶ್ವನಾಥ್, ವಲಯ ಆಯುಕ್ತರಾದ ರಂಗಪ್ಪ, ಜಂಟಿ ಆಯುಕ್ತರಾದ ಪೂರ್ಣಿಮಾ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪರಶುರಾಮ್ ಶಿನ್ನಾಳ್ಕರ್, ಮುಖ್ಯ ಇಂಜಿನಿಯರ್ ಗಳಾದ ರಂಗನಾಥ್, ಸುಗುಣಾ, ಪ್ರಹ್ಲಾದ್, ಲೋಕೇಶ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+