ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ, ವೇಳಾಪಟ್ಟಿ
ಬೆಂಗಳೂರು, ಮಾರ್ಚ್ 23: ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವೆ ಸಂಚಾರ ಇನ್ನಷ್ಟು ಸುಲಭವಾಗಲಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ಮಧ್ಯಾಹ್ನ ವಿಮಾನ ಬೇಕು ಎಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಮಾರ್ಚ್ 30ರಿಂದಲೇ ಹುಬ್ಬಳ್ಳಿ-ಬೆಂಗಳೂರು ನಗರದ ನಡುವೆ 3ನೇ ವಿಮಾನ ಹಾರಾಟವನ್ನು ನಡೆಸಲಿದೆ. ಈಗಾಗಲೇ ವಿಮಾನದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗ ಉಭಯ ನಗರಗಳ ನಡುವೆ ಮತ್ತೊಂದು ವಿಮಾನ ಸಂಚಾರ ಆರಂಭವಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ.

ಇಷ್ಟು ದಿನ ಬೆಂಗಳೂರು-ಹುಬ್ಬಳ್ಳಿ ನಡುವೆ ಬೆಳಗ್ಗೆ ಮತ್ತು ರಾತ್ರಿ ಮಾತ್ರ ಎರಡು ವಿಮಾನಗಳು ಸಂಚಾರ ನಡೆಸುತ್ತಿದ್ದವು. ಬೆಳಗ್ಗೆ ವಿಮಾನದಲ್ಲಿ ಸೀಟು ಸಿಗದಿದ್ದರೆ ರಾತ್ರಿಯ ತನಕ ಕಾಯಬೇಕಿತ್ತು. ಆದ್ದರಿಂದ ಉಭಯ ನಗರದ ನಡುವೆ ಮಧ್ಯಾಹ್ನದ ವಿಮಾನ ಬೇಕು ಎಂದು ಬೇಡಿಕೆ ಇಡಲಾಗಿತ್ತು.
ವಿಮಾನದ ವೇಳಾಪಟ್ಟಿ: ಪ್ರಯಾಣಿಕರು, ಸ್ಥಳೀಯ ವ್ಯಾಪಾರಿಗಳು, ಜನಪ್ರತಿನಿಧಿಗಳ ಬೇಡಿಕೆಗೆ ಒಪ್ಪಿಗೆ ನೀಡಿರುವ ಇಂಡಿಗೋ ವಿಮಾನಯಾನ ಸಂಸ್ಥೆ ಬೆಂಗಳೂರು-ಹುಬ್ಬಳ್ಳಿ ನಡುವೆ ಮಧ್ಯಾಹ್ನದ ವಿಮಾನವನ್ನು ಘೋಷಣೆ ಮಾಡಿದೆ. ಮಾರ್ಚ್ 30ರಿಂದಲೇ ಈ ವಿಮಾನ ಸಂಚಾರವನ್ನು ನಡೆಸಲಿದೆ.

ಹೊಸ ವಿಮಾನದ ವೇಳಾಪಟ್ಟಿಯಂತೆ ಬೆಳಗ್ಗೆ 9.55ಕ್ಕೆ ಬೆಂಗಳೂರು ನಗರದಿಂದ ವಿಮಾಣ ಹೊರಟು 11.20ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ವಿಮಾನ 11.55ಕ್ಕೆ ಹೊರಟು, ಮಧ್ಯಾಹ್ನ 1.20ಕ್ಕೆ ಬೆಂಗಳೂರು ನಗರವನ್ನು ತಲುಪಲಿದೆ.
ಇಂಡಿಗೋ ಈಗಾಗಲೇ ಬೆಳಗ್ಗೆ ಮತ್ತು ರಾತ್ರಿ ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸೇವೆಯನ್ನು ನೀಡುತ್ತಿದೆ. ಈಗ ಮಧ್ಯಾಹ್ನದ ವಿಮಾನ ಸೇವೆ ಆರಂಭಿಸುವ ಮೂಲಕ 3 ವಿಮಾನಗಳನ್ನು ಉಭಯ ನಗರದ ನಡುವೆ ಹಾರಾಟ ನಡೆಸಲಿದೆ.
ಬೆಳಗ್ಗೆ ಮತ್ತು ರಾತ್ರಿ ಹಾರಾಟ ಮಾಡುವ ಮಾದರಿಯಲ್ಲಿಯೇ ಮಧ್ಯಾಹ್ನ ಸಹ 78 ಸೀಟುಗಳ ಎಟಿಆರ್ ಮಾದರಿ ವಿಮಾನವನ್ನು ಓಡಿಸಲಾಗುತ್ತದೆ. ಎರಡು ವಿಮಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ಇದೆ. 3ನೇ ವಿಮಾನಕ್ಕೆ ಪ್ರಯಾಣಿಕರು ಸ್ಪಂದಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ ಎಂದು ಇಂಡಿಗೋ ಹೇಳಿದೆ.
ಜನರ ಬೇಡಿಕೆಗೆ ಅನುಗುಣವಾಗಿ ಬೆಂಗಳೂರು-ಹುಬ್ಬಳ್ಳಿ ಮಧ್ಯಾಹ್ನದ ವಿಮಾನ ಆರಂಭಿಸಲಾಗಿದೆ. ಮಾರ್ಚ್ 30ರಿಂದ ವಿಮಾನ ಸಂಚಾರ ನಡೆಸಲಿದೆ. ಈಗಾಗಲೇ ಬುಕ್ಕಿಂಗ್ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿ, ಹೈದರಾಬಾದ್, ಪುಣೆ ಮತ್ತು ಮುಂಬೈ ಸೇರಿ 6 ವಿಮಾನಗಳು ಸಂಚಾರ ನಡೆಸುತ್ತಿವೆ. ಮಾರ್ಚ್ 30ರಿಂದ 7 ವಿಮಾನಗಳ ಹಾರಾಟ ಆರಂಭವಾಗಲಿದೆ. ಮೂರು ವಿಮಾನಗಳು ಬೆಂಗಳೂರು-ಹುಬ್ಬಳ್ಳಿ ನಡುವೆ ಹಾರಾಟವನ್ನು ನಡೆಸುತ್ತವೆ.
ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ದೇಶದ 11 ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆಯನ್ನು ಖಾಸಗಿಗೆ ನೀಡಲು ತಯಾರಿ ನಡೆಸಿದೆ. ಈ 11 ನಿಲ್ದಾಣದಲ್ಲಿ ಕರ್ನಾಟಕದ ಹುಬ್ಬಳ್ಳಿ ನಿಲ್ದಾಣ ಸೇರಿದೆ. 2025ರ ಅಂತ್ಯದಲ್ಲಿ ಈ ಪ್ರಕ್ರಿಯೆ ಮುಗಿಯುವ ನಿರೀಕ್ಷೆ ಇದೆ.












Click it and Unblock the Notifications