ಪ್ರಧಾನಿ ಮೋದಿ ಅಧಿಕಾರಾವಧಿಯಲ್ಲಿ ದೇಶದ ಸಾಲ ಏರಿಕೆ: ರೈತರ ಸಾಲಮನ್ನಾ ಒಪ್ಪಲ್ಲ: ಸಿದ್ದರಾಮಯ್ಯ ವಿವರಣೆ
ಬೆಂಗಳೂರು, ಜುಲೈ 21: ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿ ಆಗುವ ಮೊದಲು ದೇಶದ ಸಾಲ 53 ಲಕ್ಷ ಕೋಟಿಯಷ್ಟು ಇತ್ತು. ಅವರು ಪ್ರದಾನಿ ಆದ ಬಳಿಕ ನಮ್ಮ ರಾಷ್ಟ್ರದ ಸಾಲ 170 ಲಕ್ಷ ಕೋಟಿಗೆ ಹೆಚ್ಚಾಗಿದೆ. ಪ್ರದಾನಿ ಮೋದಿ ಒಬ್ಬರ ಅವಧಿಯಲ್ಲಿ 118 ಲಕ್ಷ ಕೋಟಿ ಸಾಲ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಪ್ರಸಕ್ತ ಆರ್ಥಿಕ ವರ್ಷ 2023-24 ನೇ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದ ಸಾಲದ ಪ್ರಮಾಣವನ್ನು ಬಿಚ್ಚಿಟ್ಟರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಮೋದಿ ಪ್ರಧಾನಿ ಆಗುವವರೆಗೂ ಇದ್ದ ದೇಶದ ಸಾಲ ಇದ್ದದ್ದು ಕೇವಲ 53 ಲಕ್ಷ ಕೋಟಿ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ್ದೇ ಮೋದಿಯವರ ಸಾಧನೆ ಎಂದು ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಶ್ರೀಮಂತ ಕಾರ್ಪೋರೇಟ್ ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಕಾಂಗ್ರೆಸ್ ಇಂದು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳುತ್ತಾರೆ.

ಜಿಎಸ್‌ಟಿ ಹೇರಿಕೆಯಿಂದ ಜನರಿಗೆ ತೊಂದರೆ
ಕಚ್ಚಾತೈಲದ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್-ಡೀಸೆಲ್ ಬೆಲೆ ಈ ಮಟ್ಟಕ್ಕೆ ಏರಿಸಿದರೆ, ಹಾಲು-ಮೊಸರು-ಮಜ್ಜಿಗೆ- ಮಂಡಕ್ಕಿ ಮೇಲೂ ಜಿಎಸ್ ಟಿ ಹಾಕಿದರೆ ಬಡವರು, ಮಧ್ಯಮ ವರ್ಗದವರ ಗತಿ ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಲಾಪದಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಅವರ ಎದುರು ಸಾಲಿನಲ್ಲಿ ಜೆಡಿಎಸ್ ನ ಮರಿತಿಬ್ಬೇಗೌಡ ಮತ್ತು ಬಿಜೆಪಿಯ ಎಚ್.ವಿಶ್ವನಾಥ್ ಮಾತ್ರ ಕುಳಿತು ಉಳಿದವರೆಲ್ಲಾ ಬಹಿಷ್ಕರಿಸಿದ್ದರು. ಇದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಮರಿತಿಬ್ಬೇಗೌಡರು ಟೆಕ್ನಿಕಲಿ ಜೆಡಿಎಸ್ ನಲ್ಲಿದ್ದಾರೆ ಆದರೆ ವಾಸ್ತವವಾಗಿ ಅವರಿಗೆ ವಿರುದ್ಧವಾಗಿದ್ದಾರೆ. ಇನ್ನೂ ಎಚ್.ವಿಶ್ವನಾಥ್ ಕೂಡ ಟೆಕ್ನಿಕಲಿ ಬಿಜೆಪಿಯಲ್ಲಿದ್ದಾರೆ. ಆದರೆ ವಾಸ್ತವವಾಗಿ ಬಿಜೆಪಿಗೆ ವಿರುದ್ಧವಾಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ ಮಹಾತ್ಮ ಗಾಂಧಿ ಜೀವನ ಸಂದೇಶವೇ ಸತ್ಯ-ಅಹಿಂಸೆ ಆಗಿತ್ತು. ಸದಾ ಸುಳ್ಳು ಹೇಳುವ ಬಿಜೆಪಿಯವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕುಳಿತಿದ್ದಾರೆ ಎಂದು ಸಿಎಂ ಲೇವಡಿ ಮಾಡಿದರು.
ಅಂಬೇಡ್ಕರ್ ಹೇಳಿಕೆ ಸ್ಮರಿಸಿದ ಸಿದ್ದರಾಮಯ್ಯ
'ನಮ್ಮ ಸಂವಿಧಾನ ಜನವರಿ 26 ರಿಂದ ಜಾರಿಗೆ ಬರುತ್ತದೆ. ಆದರೆ ಸಾಮಾಜಿಕ-ಆರ್ಥಿಕ ಅಸಮಾನತೆ ದೇಶದಲ್ಲಿದೆ. ಈ ಅಸಮಾನತೆಯನ್ನು ಅಳಿಸದೇ ಹೋದರೆ ಜನರೇ ಈ ಸ್ವಾತಂತ್ರ್ಯ ಸೌಧವನ್ನು ಸುಟ್ಟು ಭಸ್ಮ ಮಾಡುತ್ತಾರೆ" ಎಂದು 1949 ನೇ ವರ್ಷ ನವೆಂಬರ್ 25 ರಂದು ಬಾಬಾ ಸಾಹೇಬ ಅಂಬೇಡ್ಕರ್ ಅವರು ತಮ್ಮ ಐತಿಹಾಸಿಕ ಭಾಷಣದಲ್ಲಿ ಹೇಳಿದ್ದರು. ಈ ಕಾರಣಕ್ಕೆ ಅಸಮಾನತೆ, ತಾರತಮ್ಯವನ್ನು ಅಳಿಸುವ ದೃಷ್ಟಿಯಿಂದ ಬಜೆಟ್ ನಲ್ಲಿ ಸರ್ವರಿಗೂ ಸಮಾನ ಅವಕಾಶ ಸಿಗುವ ಆಶಯದ ಕಾರ್ಯಕ್ರಮಗಳಿಗೆ ಮಹತ್ವ ನೀಡಿದಂತಾಗಿದೆ.
ಬಸವಣ್ಣನವರ ದಾಸೋಹ ಮತ್ತು ಕಾಯಕ ಸಂಸ್ಕೃತಿಯ ಆಶಯ ನಮ್ಮ ಆಯವ್ಯಯದಲ್ಲಿದೆ. ಬಿಜೆಪಿಯವರು ಬಸವ ವಿರೋಧಿಗಳು. ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ. ಅವರು ಮಣಿಪುರವನ್ನೂ ಬಿಡಲ್ಲ, ಕರ್ನಾಟಕವನ್ನೂ ಬಿಡಲ್ಲ. ಬೆಂಕಿ ಹಚ್ಚುತಾರೆ ಎಂದು ವಾಗ್ದಾಳಿ ನಡೆಸಿದರು.
ಶ್ರಮಿಕರು, ಬಡವರ ಹಣ ಕಿತ್ತು ಶ್ರೀಮಂತ ಕಾರ್ಪೋರೇಟ್ ಗಳಿಗೆ ಕೊಡುವುದು ಬಿಜೆಪಿಯ ಆರ್ಥಿಕತೆಯಾಗಿದೆ. ಈ ಕಾರಣಕ್ಕೇ ಹಾಲು, ಮೊಸರು, ಮಂಡಕ್ಕಿ ಮೇಲೂ ತೆರಿಗೆ ಹಾಕಿದ್ದಾರೆ, ಶ್ರೀಮಂತ ಕಾರ್ಪೋರೇಟ್ ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಾರೆ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ಅವರು ಒಪ್ಪುತ್ತಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.












Click it and Unblock the Notifications