Bengaluru Airport: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರತದ ಮೊದಲ ಇಂಟರ್-ಟರ್ಮಿನಲ್ ಸಾರಿಗೆ ಸೇವೆ
ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KEA) ಮಹತ್ವದ ಸಾರಿಗೆ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಜಾರಿಗೆ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮುಂದಾಗಿದೆ. ಆಟೋಮ್ಯಾಟಿಕ್ ಪೀಪಲ್ ಮೂವರ್ಸ್ (APM) ಪರಿಚಯಿಸಲು ಬಿಡ್‌ಗಳನ್ನು ಆಹ್ವಾನಿಸಿದೆ. ಏನಿದು?, ಏರ್‌ಪೋರ್ಟ್ ಸಾರಿಗೆಯಿಂದ ಯಾರಿಗೆಲ್ಲ ಅನುಕೂಲ ಆಗಲಿದೆ? ಮಾಹಿತಿ ಮುಂದಿದೆ.
ಸ್ವಯಂಚಾಲಿತ ಸಂಚಾರ ಮಾಡಬಹುದಾದ ಟರ್ಮಿನಲ್ ಸಾರಿಗೆ ಇದಾಗಿದೆ. ಈ ಯೋಜನೆಯಡಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ಟರ್ಮಿನಲ್ ನಿಂದ ಟರ್ಮಿನಲ್ ಗೆ ಸಂಚಾರ ಮಾಡಬಹುದಾಗಿದೆ. ಇದರಿಂದ ಜನದಟ್ಟಣೆ ನಿಯಂತ್ರಣವಾಗಲಿದೆ. ಏರ್‌ಪೋರ್ಟ್‌ನಲ್ಲಿ ಸುಗಮ ಸಂಚಾರಕ್ಕೆ, ವಯೋವೃದ್ಧರಿಗೆ, ಮಹಿಳೆಯರು ಹಾಗೂ ಮಕ್ಕಳಿಗೆ ಸಹಾಯವಾಗಲಿದೆ. ಭವಿಷ್ಯದಲ್ಲಿ ಹೆಚ್ಚಾಗುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಕೊಂಡು ಈ ಯೋಜನೆ ತರಲಾಗುತ್ತಿದೆ. ಇದು ಸಾಧ್ಯವಾದಲ್ಲಿ ಇಂಟರ್ ಟರ್ಮಿನಲ್ ಸಾರಿಗೆ (ಎಪಿಎಂ ಸಾರಿಗೆ) ಹೊಂದಿದ ಭಾರತದ ಮೊದಲ ಅಂತಾರಾಷ್ಟ್ರೀಐ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಸಿಗಲಿದೆ.

ಈ ಯೋಜನೆ ಕಾರ್ಯರೂಪಕ್ಕೆ ತರುವ ಸಂಬಂಧ ಬಿಎಐಎಲ್ ಬಿಡ್ ಕರೆದಿದೆ. ಇದರಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳು ಆಯ್ಕೆ ಯಾದ ಬಳಿಕ ಯೋಜನೆ ಹೇಗಿರುತ್ತದೆ. ವಿನ್ಯಾಸ ಹಾಗೂ ಇತರ ಅಪ್ಡೇಟ್ ಮಾಹಿತಿ ಸಿಗಲಿದೆ. ವಿಮಾನ ಯಾನಕ್ಕೆ ಬರುವ ಪ್ರಯಾಣಿಕರು ಟರ್ಮಿನಲ್ 1 ಮತ್ತು ಟರ್ಮಿನಲ್ 2 ಗೆ ಸದ್ಯ ಶಟಲ್ ಬಸ್‌ಗಳ (ಬಿಎಂಟಿಸಿ ವಾಯು ವಜ್ರ ಎಸಿ ಬಸ್) ಮೂಲಕ ಸಂಚಾರ ಮಾಡುತ್ತಿದ್ದಾರೆ. ಇವುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸಂಪರ್ಕಿಸಲು ಸ್ವಯಂಚಾಲಿತ ಪೀಪಲ್ ಮೂವರ್ಸ್ (ಎಪಿಎಂಗಳು), ಚಾಲಕ ರಹಿತ ರೈಲು ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ ಬಿಐಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ 41 ಮಿಲಿಯನ್ ಪ್ರಯಾಣಿಕರ ನಿರ್ವಹಣೆ
ವರದಿಗಳ ಪ್ರಕಾರ, ಬೆಂಗಳೂರು ಏರ್‌ಪೋರ್ಟ್ 2025ರ ಮೊದಲ ಆರು ತಿಂಗಳೂ 21 ಮಿಲಿಯನ್‌ಗೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ. ಒಟ್ಟು 2024-2025ರ ಆರ್ಥಿಕ ವರ್ಷದಲ್ಲಿ 41 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡಿದೆ. ಇದೆಲ್ಲ ನೋಡಿದರೆ ಪ್ರಯಾಣಿಕರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು. ಏರ್‌ಪೋರ್ಟ್ ಉದ್ದೇಶಿತ ಈ ಇಂಟರ್ ಟರ್ಮಿನಲ್ ಸಾರಿಗೆಯಿಂದ 30 ಮಿಲಿಯನ್ ವಾರ್ಷಿಕ ಪ್ರಯಾಣಿಕರ ಪ್ರಯಾಣದ ಸಮಯ ತಗ್ಗಿಸಬಹುದೆಂದು ಅಧಿಕಾರಿಗಳು ಅಂದಾಜು ಮಾಡಲಾಗಿದೆ.

ಏರ್‌ಪೋರ್ಟ್‌ನಲ್ಲಿ ಗಾಲಿ ಕುರ್ಚಿ ಸೇವೆ
ಪ್ರಯಾಣಿಕರಿಗಾಗಿ ಬಿಎಐಎಲ್ ಈಗಾಗಲೇ ಹಲವು ಉಪಕ್ರಮ ಜಾರಿಗೆ ತಂದಿದೆ. ಇತ್ತೀಚೆಗೆ ಇಲ್ಲಿ ಗಾಲಿಕುರ್ಚಿ ಸೇವೆ ಪರಿಚಯಿಸಿತ್ತು. ಖಾಸಗಿ ಸಹಕಾರದಲ್ಲಿ ಏರ್‌ಪೋರ್ಟ್‌ನಲ್ಲಿ ವಿಶೇಷ ಚೇತನರಿಗೆ, ವಯೋವೃದ್ಧರಿಗೆ ಹಾಗೂ ಅಗತ್ಯವುಳ್ಳ ವ್ಯಕ್ತಿಗಳಿಗೆ ಟರ್ಮಿನಲ್ 2ರಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಿತ್ತು. ಇದರ ಪ್ರಯೋಜನ, ಬಳಕೆಗಾಗಿ ಟರ್ಮಿನಲ್‌ನಲ್ಲಿರುವ ಗಾಲಿ ಕುರ್ಚಿ ಸಹಾಯ ಕೇಂದ್ರ ಇಲ್ಲವೇ ಅಲ್ಲಿನ ಸಿಬ್ಬಂದಿ ಸಂಪರ್ಕಿಸಬೇಕಿದೆ.
ಉಚಿತ ಬಗ್ಗಿ ವಾಹನ ಸೇವೆ ಲಭ್ಯ
ಏರ್‌ಪೋರ್ಟ್‌ನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ, ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್ ಕಡೆಗೆ ತೆರಳಲು (ಒಳಾಂಗಣ ಸಂಚಾರ) ಬಗ್ಗಿ ವಾಹನ ಸೇವೆ ಲಭ್ಯವಿದೆ. ಇದಕ್ಕೆ ಯಾರು ಹಣ ನೀಡಬೇಕಿಲ್ಲ. ಪ್ರಯಾಣಿಕರು, ಅಗತ್ಯ ಇರುವ ಹಿರಿಯ ನಾಗರಿಕರು ಮುಕ್ತವಾಗಿ ಈ ವಾಹನದ ಸೇವೆ ಪಡೆಯಬಹುದಾಗಿದೆ.
ಬೆಂಗಳೂರು ಎರಡನೇ ಏರ್‌ಪೋರ್ಟ್
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರ್ಷಿಕ ಪ್ರಯಾಣಿಕರ ಸಂಚಾರ, ದಟ್ಟಣೆ ಹೆಚ್ಚಾಗುತ್ತಿದೆ. ಈ ಜನದಟ್ಟಣೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಬೆಂಗಳೂರು ವ್ಯಾಪ್ತಿಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second International Airport) ನಿರ್ಮಾಣಕ್ಕೆ ಮುಂದಾಗಿದೆ. ಈ ಸಂಬಂಧ ಕನಕಪುರ, ತುಮಕೂರು ರಸ್ತೆ ಕಡೆಗಳಲ್ಲಿ ಒಟ್ಟು ಆರು ಕಡೆಗಳಲ್ಲಿ ಜಾಗ ಗುರುತಿಸಿತ್ತು. ಕೇಂದ್ರದ ಅಧಿಕಾರಿಗಳು ಜಾಗ ಪರಿಶೀಲನೆ ಮಾಡಿದ್ದರು. ಇದರ ಕಾರ್ಯಸಾಧ್ಯತೆ ವರದಿಗೆ ಸರ್ಕಾರ ಸೂಚನೆ ನೀಡಿದೆ.
25 ವರ್ಷ ಹಾಲಿ ಏರ್‌ಪೋರ್ಟ್ ವ್ಯಾಪ್ತಿಯ ಸರಿಸುಮಾರು 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಿಸದಂತೆ ಒಪ್ಪಂದ ಹೇಳುತ್ತದೆ. ಹೀಗಾಗಿ ಈ ಯೋಜನೆ ಪ್ರಸ್ತಾವನೆ ಕೇಂದ್ರದ ಮುಂದೆ ಬಂದಿಲ್ಲ ಎಂದು ಇತ್ತೀಚೆಗೆ ಸಚಿವರು ಸಂಸತ್‌ನಲ್ಲಿ ಮಾಹಿತಿ ನೀಡಿದ್ದರು. ರಾಜ್ಯ ಸರ್ಕಾರ ಯೋಜನೆಗೆ ಬೇಕಾದ ಎಲ್ಲ ತಯಾರಿ ಮುಂದುವರಿಸಿದೆ.












Click it and Unblock the Notifications