ಬೆಂಗಳೂರಲ್ಲಿ ಬರೀ ಶೇ.12% ಮಂದಿಗೆ ವಯಸ್ಕ ರೋಗ ನಿರೋಧಕ ಲಸಿಕೆ: API ಸಮೀಕ್ಷೆಯಿಂದ ಬಹಿರಂಗ
ಬೆಂಗಳೂರು, ಸೆಪ್ಟಂಬರ್ 05: ಭಾರತದಲ್ಲಿ 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಲ್ಲಿ ರೋಗನಿರೋಧಕ ಶಕ್ತಿ ಏಕೆ ಕಡಿಮೆ ಎಂಬುದರ ಕುರಿತು ದಿ ಅಸೋಸಿಯೇಟ್ ಫಿಜಿಸಿಯನ್ ಆಫ್ ಇಂಡಿಯಾ (Associate Physician of India) ಮತ್ತು ಬೆಂಗಳೂರು Ipsos ಸಂಶೋಧನಾ ಕಂಪನಿ ಜಂಟಿಯಾಗಿ ಭಾರತದ 16 ನಗರಗಳಲ್ಲಿ ಸಮೀಕ್ಷೆ ನಡೆಸಿವೆ. ಈ ಪೈಕಿ ಬೆಂಗಳೂರಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿಗಳು, ಅಂಕಿ ಅಂಶಗಳು ಬಹಿರಂಗಗೊಂಡಿವೆ.
ಈ ಸಮೀಕ್ಷೆಯ ಪ್ರಕಾರ,50 ವರ್ಷ ವಯಸ್ಸಿನ ಶೇ.71 ರಷ್ಟು ಮಂದಿ ಅಡಲ್ಟ್ ವ್ಯಾಕ್ಸಿನೇಷನ್ ಅಂದರೆ ವಯಸ್ಕರಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ರೋಗನಿರೋಧಕ ಲಸಿಕೆಗಳ ಬಗ್ಗೆ ಅರಿವು ಇದ್ದರೂ ಸಹ ಕೇವಲ ಶೇ.16 ರಷ್ಟು ಜನ ಮಾತ್ರ ಆ ಲಸಿಕೆ ಪಡೆದಿದ್ದಾರೆ.

ಅಧಿಕೃತ ಮಾರ್ಗಸೂಚಿಗಳ ಕೊರತೆ ಪರಿಣಾಮ ರೋಗಿಗಳು ರೋಗನಿರೋಧಕ ಲಸಿಕೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಅರ್ಹರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಇದರಿಂದ ಅವರು ಅರ್ಧ ಆಯುಷ್ಯ ಕಳೆದ ಬಳಿಕ ಅವರಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಶೇ. 90ರಷ್ಟು ವೈದ್ಯರು ಹೇಳಿದ್ದಾರೆ.
ಶಿಫಾರಸು ಮಾಡಿದರೆ ಮಾತ್ರವೇ ಲಸಿಕೆ ಪಡೆಯುತ್ತಾರೆ
ವೈದ್ಯರು ತಮ್ಮ ರೋಗಿಗಳೊಂದಿಗೆ ವಯಸ್ಕ ಲಸಿಕೆ ಬಗ್ಗೆ ಚರ್ಚಿಸಲು ಹಿಂದೇಟು ಹಾಕುತ್ತಾರೆ. ಏಕೆಂದರೆ, ಅವರಿಗೆ ಸಮಯದ ಮಿತಿಗಳಿರುತ್ತವೆ ಮತ್ತು ರೋಗಿಗಳು ಲಸಿಕೆ ಶಿಫಾರಸುಗಳ ಬಗ್ಗೆ ಕಡಿಮೆ ಮಟ್ಟದ ಗ್ರಹಿಕೆಯನ್ನು ಹೊಂದಿರುತ್ತಾರೆ ಎಂದು ಅವರು ಭಾವಿಸುತ್ತಾರೆ. ವೈದ್ಯರಿಂದ ದೃಢವಾದ ಮತ್ತು ನಿಖರವಾದ ಶಿಫಾರಸು ಅಥವಾ ಸಲಹೆಗಳು ಬಾರದ ಹೊರತು ವಯಸ್ಕ ಲಸಿಕೆಗಳನ್ನು ಪಡೆದುಕೊಳ್ಳಲು ಬಯಸುವುದಿಲ್ಲ ಎಂಬ ಅಂಶ ಗೊತ್ತಾಗಿದೆ.

50 ವರ್ಷ ಮತ್ತು ಅದಕ್ಕಿಂತ ಮೇಲಿನವರಲ್ಲಿ ಶೇ.69ರಷ್ಟು ಮಂದಿ ಮತ್ತು ಅವರನ್ನು ಆರೈಕೆ ಮಾಡುವ ಶೇ.76 ರಷ್ಟು ಜನರು ವಯಸ್ಕ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ವೈದ್ಯರ ಬಳಿ ಕೇಳುವುದೇ ಇಲ್ಲ. ಅಗತ್ಯವಿದ್ದಲ್ಲಿ ವೈದ್ಯರೇ ಹೇಳುತ್ತಾರೆ ಎಂದು ರೋಗಗಿಳು ಭಾವಿಸುತ್ತಾರೆ. ಆದ್ದರಿಂದ ಈ ವಯಸ್ಕರ ಲಸಿಕೆ ತೆಗೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ಬೆಂಗಳೂರಿನಲ್ಲಿ ಈ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ 50 ವರ್ಷ ಹಾಗೂ 50ವರ್ಷಕ್ಕಿಂತಹ ಮೇಲ್ಪಟ್ಟ ಶೇ.84 ರಷ್ಟು ಜನರಿಗೆ ವಯಸ್ಕ ಲಸಿಕೆ ಬಗ್ಗೆ ಮಾಹಿತಿ ಇದೆ. ಆದರೆ ಅದರಲ್ಲಿ ಶೇ.12 ರಷ್ಟು ಜನರು ಮಾತ್ರ ವಯಸ್ಕ ಲಸಿಕೆ ಪಡೆದಿದ್ದಾರೆ. ಶೇಕಡಾ 93 ರಷ್ಟು ಜನರು ತಮ್ಮ ವೈದ್ಯರು ಶಿಫಾರಸು ಮಾಡಿದರೆ ಮಾತ್ರ ಲಸಿಕೆ ಪಡೆಯುತ್ತಾರೆ.

ಬೆಂಗಳೂರಿನಲ್ಲಿರುವ ವೈದ್ಯರು ಕೇವಲ ಶೇ.12 ರಷ್ಟು ವಯಸ್ಕರಿಗೆ ಲಸಿಕೆ ಹಾಕಿಸಿಕೊಳ್ಳುವಂತಯೆ ಶಿಫಾರಸು ಮಾಡಿರುವುದು ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ದಕ್ಷಿಣ ವಲಯದ ವೈದ್ಯರು ಶೇ.10 ಕ್ಕಿಂತ ಕಡಿಮೆ ಸಂಖ್ಯೆಯ ವಯಸ್ಕ ಲಸಿಕೆಗೆ ಶಿಫಾರಸು ಮಾಡಿದ್ದಾರೆ. ಈ ಪ್ರಮಾಣ ರಾಷ್ಟ್ರಮಟ್ಟದ ಸರಾಸರಿ ಶೇ.16 ರಷ್ಟಿರುವುದು ಗಮನಾರ್ಹವಾಗಿದೆ ಎಂದು ಸಮೀಕ್ಷೆಯ ಅಂಶಗಳು ತಿಳಿಸಿವೆ.
ಸರ್ಪಸುತ್ತು ರೋಗ ಬಗ್ಗೆ ಜಾಗೃತಿ ತೀರಾ ಕಡಿಮೆ
API ಕಾರ್ಯದರ್ಶಿ ಡಾ.ಅಗಂ ವೋರಾ ಅವರು, 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ ಲಸಿಕೆಯನ್ನು ಶಿಫಾರಸು ಮಾಡುವ ವಿಚಾರದಲ್ಲಿ ವೈದ್ಯರ ವಿಶ್ವಾಸ ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ವಯಸ್ಕರ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕುರಿತು ಅಗತ್ಯವಾದ ಮಾರ್ಗಸೂಚಿಗಳನ್ನು ಹೊರಡಿಸಬೇಕು, ಮತ್ತು ಅವುಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಜನರಲ್ಲಿರುವ ವಯಸ್ಕ ಲಸಿಕೆ ಬಗ್ಗೆ ಆತಂಕ, ಮಿಥ್ಯೆಗಳನ್ನು ತೊಡೆದು ಹಾಕಿ ವೈದ್ಯರಲ್ಲಿ ಕೇಳಿ ತಿಳಿದುಕೊಳ್ಳುವ ಬಗ್ಗೆ ಜಾಗೃತಿ ಅಭಿಯಾನಗಳು ಅನುಷ್ಠಾನಗೊಳ್ಳಬೇಕು. ಭಾರತದಲ್ಲಿ ಸರ್ಪಸುತ್ತುಗಳಂತಹ ರೋಗಗಳನ್ನು ತಡೆಗಟ್ಟುವ ಲಸಿಕೆ ಬಗ್ಗೆ ಅರಿವು ತುಂಬಾ ಕಡಿಮೆ ಇರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ತಪ್ಪು ಕಲ್ಪನೆಗಳಿಂದಲೂ ಈ ಲಸಿಕೆ ಹಾಕಿಕೊಳ್ಳಲು ಮುಂದೆ ಬರುತ್ತಿಲ್ಲ. ಬೆಂಗಳೂರಿನಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಶೇ.61 ರಷ್ಟು ಮಂದಿ ಕೋವಿಡ್ ಬಿಟ್ಟು ಇತರ ಕಾಯಿಲೆಗಳು ಲಸಿಕೆ ಹಾಕಿಸಿಕೊಳ್ಳುವುದು ಅನಗತ್ಯ ಎಂದು ನಂಬಿದ್ದಾರೆ ಎಂದು ಅವರು ವಿವರಿಸಿದರು.
ಶೇ.72 ರಷ್ಟು ಜನರಲ್ಲಿ ಸರ್ಪಸುತ್ತು ರೋಗ ಲಕ್ಷಣ ಕಾಣಲ್ಲ
ಲಸಿಕೆಯಿಂದ ತಡೆಗಟ್ಟಬಹುದಾದ (VPD) ಸರ್ಪಸುತ್ತು ರೋಗವನ್ನು ಲಸಿಕೆ ಮೂಲಕ ತಡೆಗಟ್ಟಬಹುದೆಂಬ ಅರಿವು ಕಡಿಮೆ ಇದೆ. ಈ ಕುರಿತಂತೆಯೂ ಸಮೀಕ್ಷೆ ನಡೆಸಲಾಯಿತು. ಚಿಕನ್ ಪಾಕ್ಸ್ ವೈರಸ್ ಪುನಃ ಹೆಚ್ಚು ಸಕ್ರಿಯವಾಗುವ ಕಾರಣದಿಂದ ಸರ್ಪಸುತ್ತು ಅಥವಾ ಹರ್ಪಿಸ್ ಜೋಸ್ಟರ್ ಕಾಣಿಸಿಕೊಳ್ಳುತ್ತದೆ. ಇದು ಕಡಿಮೆಯಾಗಲು ವಾರ, ಕೆಲವೊಮ್ಮೆ ತಿಂಗಳುಗಟ್ಟಲೇ ಹಿಡಿಯಬಹುದು. ಇನ್ನೂ ಶೇ.72 ರಷ್ಟು ಜನರು ಸರ್ಪಸುತ್ತು ಬರುವ ಮೊದಲು ಅದರ ಲಕ್ಷಣಗಳ ಬಗ್ಗೆ ತಿಳಿದಿರುವುದೇ ಇಲ್ಲ ಎಂದು ವರದಿ ತಿಳಿಸಿದೆ.
ಇನ್ನೂ ಸರ್ಪಸುತ್ತು ರೋಗಕ್ಕೆ ಒಳಗಾಗುವವರ ಪೈಕಿ ಶೇಕಡಾ 66 ರಷ್ಟು ಮಂದಿಗೆ ಅವರ ಆರೋಗ್ಯ ಸ್ಥಿತಿಯನ್ನು ಈ ರೋಗ ಗಂಭೀರವನ್ನಾಗಿಸಿಬಿಡುತ್ತದೆ. ಇಂತಹ ರೋಗಿಗಳು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications