Rain Alert: ಕರ್ನಾಟಕದ 17 ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್: ಬೆಂಗಳೂರು ಹವಾಮಾನ..
ಬೆಂಗಳೂರು, ಆಗಸ್ಟ್ 10: ಕರ್ನಾಟಕದಾದ್ಯಂತ ಮುಂಗಾರು ಮಳೆ ಅಬ್ಬರ ಕಡಿಮೆ ಆಗಿಲ್ಲ. ಮತ್ತೆ ಜೋರಾಗುವ ಎಲ್ಲ ಲಕ್ಷಣಗಳು ಇವೆ. ಈ ಬಾರಿ ಕರಾವಳಿ ಜಿಲ್ಲೆಗಳಿಗಿಂತ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ನಂತರ ಕರಾವಳಿ ಭಾಗಗಳಲ್ಲಿ ಮುಂಗಾರು ಬಿರುಸುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ಮುನ್ಸೂಚನೆ ನೀಡಿದೆ.
ಆಗಸ್ಟ್ 11ರಂದು ರಾಜ್ಯದ ಒಳನಾಡು ಭಾಗದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಜೋರು ಮಳೆ ಆಗಲಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಿಗಿರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಗರಿಷ್ಠ 115 ಮಿಲಿ ಮೀಟರ್ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ಎಲ್ಲ ಜಿಲ್ಲೆಗಳಿಗೂ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ಇನ್ನುಳಿದಂತೆ ಆಗಸ್ಟ್ 12ರಿಂದ ಮಳೆ ಮತ್ತೆ ಅಬ್ಬರ ತಣ್ಣಗಾಗಲಿದೆ. ನಂತರ ಆಗಸ್ಟ್ 15ರಿಂದ ಮೂರು ದಿನ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳು ಮತ್ತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಬಹುದೆಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಕಳೆದ ಒಂದು ವಾರದಿಂದ ಆಗಾಗ ಬೆಂಗಳೂರು ನಗರ ಜಿಲ್ಲೆ, ದಾವಣಗೆರೆ, ತುಮಕೂರು, ಕೊಡಗು,ಶಿವಮೊಗ್ಗ, ಚಿಕ್ಕಮಗಳೂರು, ವಿಜಯಪುರ, ಭಾಗಲಕೋಟೆ, ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗಿದೆ. ದಿನವಿಡೀ ಜಿಟಿ ಜಿಟಿ ಮಳೆ ಅಬ್ಬರಿಸಿದೆ. ವಿಜಯಪುರ, ಬೆಳಗಾವಿ ಭಾಗದ ಕೆಲವು ಪ್ರದೇಶಗಳಲ್ಲಿ ಮಳೆ ಹಾನಿ ಸಂಭವಿಸಿದೆ. ರಸ್ತೆಗಳು ಜಲಾವೃತಗೊಂಡಿವೆ. ಈ ಭಾಗಗಳಲ್ಲಿ ಮಳೆ ಮುಂದುವರಿಯುವ ಲಕ್ಷಣಗಳು ಇವೆ.
ಬೆಂಗಳೂರಲ್ಲಿ ಆ. 15ರವರೆಗೆ ಜೋರು ಮಳೆ
ಒಂದು ವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಜೋರು ಮಳೆ ಆಗುತ್ತಿದೆ. ಈ ವ್ಯಾಪಕ ಮಳೆ ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ಮುಂದುವರಿಯಲಿದೆ. ತಾಪಮಾನದಲ್ಲಿ ಕೊಂಚ ಏರು ಪೇರಾಗಲಿದೆ. ನಿತ್ಯ ಮಧ್ಯಾಹ್ನ ಹೊತ್ತಿಗೆ ಮಳೆ ಜಮಾಯಿಸಲಿದ್ದು, ಸಂಜೆ ಇಲ್ಲವೇ ರಾತ್ರಿ ಮತ್ತಷ್ಟು ಬಿರುಸಿನ ಮಳೆ ಆಗಲಿದೆ. ಚಳಿ ಹಾಗೂ ಮಬ್ಬು ವಾತಾವರಣ ಕಂಡು ಬರಲಿದೆ. ಈ ವೇಳೆ ಗರಿಷ್ಠ ತಾಪಮಾನ 28-29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.












Click it and Unblock the Notifications