ಐಎಂಎ ಹಗರಣ : ಜಯನಗರದ ಆಭರಣ ಮಳಿಗೆಯಲ್ಲಿ ಸಿಕ್ಕಿದ್ದೇನು?
ಬೆಂಗಳೂರು, ಜೂನ್ 18 : ಸುಮಾರು 2 ಸಾವಿರ ಕೋಟಿ ರುಪಾಯಿನಷ್ಟು ಬಡವರ, ಮಧ್ಯಮ ವರ್ಗೀಯರ, ಶ್ರೀಮಂತರ ಹಣವನ್ನು ನುಂಗಿ ನೊಣೆದಿರುವ ಐಎಂಎ ಕಂಪನಿಯ ಹಗರಣವನ್ನು ಬೆನ್ನತ್ತಿರುವ ವಿಶೇಷ ತನಿಖಾ ತಂಡಕ್ಕೆ ಕಂಪನಿಯ ಆಭರಣ ಶೋರೂಮ್ ನಲ್ಲಿ ಸಿಕ್ಕಿದ್ದೇನು?
ಜನರು ಕಷ್ಟಪಟ್ಟು ದುಡಿದಿದ್ದ ಹಣವನ್ನು ಹೆಚ್ಚಿಸಿಕೊಳ್ಳಬೇಕೆಂದು ಇಲ್ಲಿ ಹೂಡಲಾಗಿದ್ದ ಹಣವನ್ನು ನುಂಗಿ ಹಾಕಿದ್ದಲ್ಲದೆ, ಜಯನಗರದ ಶೋರೂಂನಲ್ಲಿರುವ ಶೇ.90ರಷ್ಟು ಆಭರಣಗಳನ್ನು ಕೂಡ ತೆಗೆದುಕೊಂಡು ವಂಚಕರು ಪರಾರಿಯಾಗಿದ್ದಾರೆ.
ತನ್ನ ಹೆಂಡಂದಿರು ಮತ್ತು ಮಕ್ಕಳೊಂದಿಗೆ ಭಾರತ ಬಿಟ್ಟು ದುಬೈಗೆ ಹೋಗಿದ್ದಾನೆನ್ನಲಾದ ಐಎಂಎ ಕಂಪನಿಯ ಮಾಲಿಕ ಮೊಹಮ್ಮದ್ ಮನ್ಸೂರ್ ಖಾನ್ ನೇ ಎಲ್ಲ ಆಭರಣಗಳನ್ನು ತನ್ನೊಂದಿಗೆ ತೆಗೆದುಕೊಂಡು ಕಾಲಿಗೆ ಬುದ್ಧಿ ಹೇಳಿರಬಹುದು ಎಂದು ಎಸ್ಐಟಿ ಅಧಿಕಾರಿಗಳು ಶಂಕಿಸಿದ್ದಾರೆ.

ಮೊಹಮ್ಮದ್ ಮನ್ಸೂರ್ ಖಾನ್ ಜೂನ್ 8ರಂದೇ ಭಾರತ ಬಿಟ್ಟು ಪರಾರಿಯಾಗಿದ್ದು, ಶೇ.10ರಷ್ಟು ಮಾತ್ರ ಆಭರಣಗಳನ್ನು ಶೋರೂಂನಿಂದ ವಶಪಡಿಸಿಕೊಳ್ಳಲಾಗಿದೆ. ಅವುಗಳ ಮೊತ್ತ 20 ಕೋಟಿ ರುಪಾಯಿಯಷ್ಟಿರಬಹುದು ಎಂದು ಎಸ್ಐಟಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಮನ್ಸೂರ್ ಖಾನ್ ನಿಗೆ ಒಟ್ಟು ಐವರು ಹೆಂಡಂದಿರು. ಅವರಲ್ಲಿ ತಾನು ಅಪಾರವಾಗಿ ಪ್ರೀತಿಸುತ್ತಿದ್ದ ಕಡೆಯ ಹೆಂಡತಿಯನ್ನು ಆತ ಕಂಪನಿಯ ನಿರ್ದೇಶಕಿಯನ್ನಾಗಿ ಮಾಡಿದ್ದ. ಆಕೆಗೆ ವಿಚ್ಛೇದನ ಕೊಟ್ಟಿದ್ದರೂ ಆಕೆ ನಿರ್ದೇಶಕಿಯಾಗಿ ಮುಂದುವರಿದಿದ್ದಳು. ಇದೀಗ ಮನ್ಸೂರ್ ನ ಮಾಜಿ ಹೆಂಡತಿ ಸೇರಿದಂತೆ ಇಬ್ಬರ ಮನೆಯ ತಪಾಸಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಅವರಿಂದ ಕೇವಲ 2 ಲಕ್ಷ ರುಪಾಯಿ ನಗದು, ಒಂದಿಷ್ಟು ಆಭರಣಗಳು ಮತ್ತು ಲ್ಯಾಪ್ಟಾಪನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಮಾತ್ರವಲ್ಲ ಮೈಸೂರು, ಶಿವಮೊಗ್ಗದಿಂದಲೂ 1.25 ಲಕ್ಷಕ್ಕೂ ಹೆಚ್ಚು ಜನರು ಈ ಟೋಪಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಅವರೆಲ್ಲ ಇದೀಗ ಬಾಯಿಬಾಯಿ ಬಡಿದುಕೊಳ್ಳುವಂತಾಗಿದೆ. ಇವರಲ್ಲಿ ಬಹುತೇಕ ಜನರು ಬಡವರು ಮತ್ತು ಮಧ್ಯಮ ವರ್ಗದವರು. ಅವರೆಲ್ಲ ಮನ್ಸೂರ್ ಮಾತ್ರವಲ್ಲ ಕೆಲ ರಾಜಕಾರಣಿಗಳ ಹೆಸರು ಹೇಳಿ ಹಿಡಿಶಾಪ ಹಾಕುತ್ತಿದ್ದಾರೆ.
ಜನರಿಂದ ಸಂಗ್ರಹಿಸಲಾಗಿದ್ದ ದುಡ್ಡನ್ನು ಕೆಲ ರಾಜಕಾರಣಿಗಳಿಗೆ ನೀಡಿದ್ದಾಗಿ, ದೇಶದಿಂದ ಪರಾರಿಯಾಗುವ ಮುನ್ನ ಮನ್ಸೂರ್ ಆಡಿಯೋ ಟೇಪನ್ನು ಬಿಡುಗಡೆ ಮಾಡಿದ್ದ. ಅದರ ಸತ್ಯಾಸತ್ಯತೆ ಇನ್ನೂ ಸಾಬೀತಾಗಬೇಕಾಗಿದೆ. ಅದರಲ್ಲಿ ಕೆಲ ಕಾಂಗ್ರೆಸ್ ರಾಜಕಾರಣಿಗಳ ಹೆಸರುಗಳು ಕೂಡ ಪ್ರಸ್ತಾಪವಾಗಿದ್ದವು. ಅಲ್ಲದೆ, ತನಗೆ ಬಂದಿದ್ದ ಸಂಕಷ್ಟದಿಂದ ಪಾರಾಗಲು ಮನ್ಸೂರ್ 600 ಕೋಟಿ ರುಪಾಯಿ ಸಾಲ ಮಾಡಲು ಮುಂದಾಗಿದ್ದ. ಇದಕ್ಕೆ ಸರಕಾರದಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಬೇಕೆಂದು ಆರ್ ವಿ ದೇಶಪಾಂಡೆ ಅವರ ಕದವನ್ನೂ ತಟ್ಟಲಾಗಿತ್ತು. ಆದರೆ, ಆ ಸಾಲ ದೊರೆಯದ ಕಾರಣ ಆತ ಇದ್ದಬದ್ದ ಹಣ ಮತ್ತು ಆಭರಣಗಳನ್ನು ಪೆಟ್ಟಿಗೆ ತುಂಬಿಸಿಕೊಂಡು ಪರಾರಿಯಾಗಿದ್ದಾನೆ.












Click it and Unblock the Notifications