ಅಕ್ರಮ ಗಣಿಗಾರಿಕೆ: ಶಾಸಕ ಅನಿಲ್ ಲಾಡ್ ಗೆ ಜಾಮೀನು
ಬೆಂಗಳೂರು, ಜುಲೈ 27: ಅಕ್ರಮ ಗಣಿಗಾರಿಕೆ, ಅದಿರು ರಫ್ತು ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಅವರಿಗೆ ಸೋಮವಾರ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಸಿಬಿಐ ವಿಶೇಷ ನ್ಯಾಯಾಲಯದಿಂದ ಅನಿಲ್ ಲಾಡ್ ಅವರಿಗೆ ವೈದ್ಯಕೀಯ ಕಾರಣಗಳಿಂದ ಜಾಮೀನು ಮಂಜೂರಾಗಿದೆ.
ಬಂಧಿತ ಅನಿಲ್ ಲಾಡ್ ಅವರು ಸಿಬಿಐ ತಂಡದ ವಶದಲ್ಲಿದ್ದರು. ಅಕ್ರಮವಾಗಿ ಕಬ್ಬಿಣ ಅದಿರು ರಫ್ತು ಮಾಡಿದ ಆರೋಪದ ಮೇಲೆ ಅನಿಲ್ ಲಾಡ್ ಅವರನ್ನು ಬುಧವಾರ (ಜುಲೈ 15) ಸಂಜೆ ಸಿಬಿಐ ತಂಡ ಬಂಧಿಸಿತ್ತು. [ಸಿಬಿಐನಿಂದ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬಂಧನ]
ಈ ಪ್ರಕರಣದಲ್ಲಿ ಜಾಮೀನು ಕೋರಿ ಅನಿಲ್ ಲಾಡ್ ಸಲ್ಲಿಸಿರುವ ಅರ್ಜಿ ವಿಚಾರಣೆ ಜುಲೈ 20ಗೂ ಮುಂಚಿತವಾಗಿ ಬರಬೇಕಿತ್ತು. ಆದರೆ, ವಿಧಾನಸಭೆ ಅಧಿವೇಶನ ಮುಕ್ತಾಯದ ನಂತರ ಅರ್ಜಿ ವಿಚಾರಣೆ ನಡೆಸಲಾಯಿತು.

ಅನಿಲ್ ಲಾಡ್ ಅವರಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವುದನ್ನು ಪರಿಗಣಿಸಿ ಸಿಬಿಐ ನ್ಯಾ ಎಚ್ ಕೆ ಮಲ್ಲಪ್ಪ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ ಎಂದು ಲಾಡ್ ಅವರ ಪರ ವಕೀಲ ಸಿವಿ ನಾಗೇಶ್ ಹೇಳಿದ್ದಾರೆ.
2010ರಲ್ಲಿ ಶಾಸಕ ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ ಲಿಮಿಟೆಡ್ ನಿಂದ ಕಾರವಾರದ ಬೇಲೇಕೇರಿ ಬಂದರಿನಿಂದ ಕಾನೂನು ಬಾಹಿರವಾಗಿ 15 ಸಾವಿರ ಮೆಟ್ರಿಕ್ ಟನ್ ಅದಿರು ರಫ್ರು ಮಾಡಿದ ಆರೋಪವನ್ನು ಅನಿಲ್ ಲಾಡ್ ಎದುರಿಸುತ್ತಿದ್ದಾರೆ.[ಪೂರ್ತಿ ವಿವರ ಇಲ್ಲಿದೆ ಓದಿ]
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಶಾಸಕರಾದ ಆನಂದ್ ಸಿಂಗ್, ಬಿ ನಾಗೇಂದ್ರ, ಸತೀಶ್ ಸೈಲ್, ಸುರೇಶ್ ಬಾಬು ಅವರನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಲಾಗಿತ್ತು. ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಮಿತ್ರ ಬಿ ಶ್ರೀರಾಮುಲು ಅವರನ್ನು ಕೂಡಾ ಪ್ರಶ್ನಿಸಲಾಗಿತ್ತು. [ಶ್ರೀರಾಮುಲುಗೆ ಸಂಕಟ?]
ಅನಿಲ್ ಲಾಡ್ ಅವರು 10 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ನೀಡಬೇಕು, ಪ್ರತಿ ಶನಿವಾರ ಸಿಬಿಐ ಕಚೇರಿಗೆ ಹಾಜರಾಗಬೇಕು, ದೇಶ ಬಿಟ್ಟು ಹೊರಕ್ಕೆ ಹೋಗುವಂತಿಲ್ಲ, ಪೊಲೀಸ್ ಠಾಣೆಗೆ ಪಾಸ್ ಪೋರ್ಟ್ ಒಪ್ಪಿಸಬೇಕು ಇವೆ ಮುಂತಾದ ಷರತ್ತುಗಳನ್ನು ವಿಧಿಸಲಾಗಿದೆ. (ಒನ್ ಇಂಡಿಯಾ ಸುದ್ದಿ)











Click it and Unblock the Notifications