ದುಡ್ಡು ಬೇಡ, ನೆಮ್ಮದಿ ಬೇಕು 'ನಮ್ಮ ಬೆಂಗಳೂರೇ' ಸಾಕು! 32 ಲಕ್ಷದ ಆಫರ್ ತಿರಸ್ಕರಿಸಿದ IIT ಪದವೀಧರೆ ಸ್ನೇಹಾ
ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಯುವಜನರು ಹೆಚ್ಚಿನ ಸಂಬಳದತ್ತ ಆಕರ್ಷಿತರಾಗುವುದು ಸಾಮಾನ್ಯ. ಆದರೆ 25 ವರ್ಷದ ಐಐಟಿ ಪದವೀಧರೆ ಹಾಗೂ ಡೇಟಾ ಸೈಂಟಿಸ್ಟ್ ಆಗಿರುವ ಸ್ನೇಹಾ ಪ್ರಿಯಾ ಅವರು ಎಲ್ಲರಿಗಿಂತ ವಿಭಿನ್ನವಾಗಿ ಯೋಚಿಸಿದ್ದಾರೆ. ಅವರು ಗುರ್ಗಾಂವ್‌ನಲ್ಲಿ ದೊರೆತ ಭಾರಿ ಮೊತ್ತದ ಉದ್ಯೋಗದ ಆಫರ್ ಅನ್ನು ತಿರಸ್ಕರಿಸಿ, ಬೆಂಗಳೂರಿನಲ್ಲೇ ಉಳಿಯುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
32 ಲಕ್ಷದ ಪ್ಯಾಕೇಜ್ ತಿರಸ್ಕಾರ
ಸ್ನೇಹಾ ಪ್ರಿಯಾ ಅವರು 2023ರಲ್ಲಿ ಐಐಟಿ ರೂರ್ಕೆಲಾದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಪದವಿ ಮುಗಿದ ಬಳಿಕ ತಮ್ಮ ಮೊದಲ ಉದ್ಯೋಗಕ್ಕಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ಅವರಿಗೆ ಗುರ್ಗಾಂವ್‌ನ ಪ್ರತಿಷ್ಠಿತ ಕಂಪನಿಯೊಂದರಿಂದ ವಾರ್ಷಿಕ 32 ಲಕ್ಷ ರೂಪಾಯಿಗಳ ಪ್ಯಾಕೇಜ್‌ನ ಉದ್ಯೋಗದ ಆಫರ್ ಬಂದಿತ್ತು.

ಈ ಆಫರ್‌ನಲ್ಲಿ ಆಕರ್ಷಕ ಸೇರ್ಪಡೆ ಬೋನಸ್ ಹಾಗೂ ಸ್ಥಳಾಂತರ ಭತ್ಯೆ ಕೂಡ ಸೇರಿತ್ತು. ಆದರೂ ಈ ಹರಿಯಾಣದ ಗುರುಗ್ರಾಮದಲ್ಲಿ ಸಿಕ್ಕಿದ್ದ ಕೆಲಸ ಬೇಡ ಎಂದು ಯುವತಿ ಸ್ಪಷ್ಟಪಡಿಸಿದ್ದಾರೆ. ಹಣಕ್ಕಿಂತ ತನಗೆ ನೆಮ್ಮದಿ ಮತ್ತು ಸುರಕ್ಷತೆ ಮುಖ್ಯ ಎಂದು ಅವರು ಈ ಅವಕಾಶವನ್ನು ನಯವಾಗಿ ತಿರಸ್ಕರಿಸಿದರು.
ಬೆಂಗಳೂರಿನ ಹವಾಮಾನ ಮತ್ತು ಸುರಕ್ಷತೆಯೇ ಮುಖ್ಯ
ಮೂಲತಃ ಬಿಹಾರದ ಪಾಟ್ನಾದವರಾದ ಸ್ನೇಹಾ, ಎಲ್‌ಐಸಿ ಉದ್ಯೋಗಿಯಾಗಿದ್ದ ತಂದೆಯ ವರ್ಗಾವಣೆಯಿಂದಾಗಿ ದೇಶದ ಹಲವು ನಗರಗಳಲ್ಲಿ ಬೆಳೆದಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅವರಿಗೆ ಈ ನಗರದ ಬಗ್ಗೆ ವಿಶೇಷ ಒಲವು ಬೆಳೆದಿದೆ.
ದೆಹಲಿ-ಎನ್‌ಸಿಆರ್ ಪ್ರದೇಶದ ವಿಪರೀತ ಚಳಿ ಮತ್ತು ಸೆಖೆ ಅವರಿಗೆ ಇಷ್ಟವಿಲ್ಲ. ಹಾಗೆಯೇ ಈ ಹಿಂದೆ ದೆಹಲಿ-ಎನ್‌ಸಿಆರ್‌ನಲ್ಲಿ ಆದ ಕೆಲವು ಅಹಿತಕರ ಅನುಭವಗಳಿಂದಾಗಿ, ಗುರ್ಗಾಂವ್‌ಗಿಂತ ಬೆಂಗಳೂರೇ ಹೆಚ್ಚು ಸುರಕ್ಷಿತ ಎಂದು ಅವರು ಭಾವಿಸಿದ್ದಾರೆ. ಟ್ರಾಫಿಕ್ ಸಮಸ್ಯೆ ಹೊರತುಪಡಿಸಿದರೆ, ಬೆಂಗಳೂರಿನ ಸೌಹಾರ್ದಯುತ ಜನರು ಮತ್ತು ಆಹ್ಲಾದಕರ ಹವಾಮಾನ ತನಗೆ ತುಂಬಾ ಇಷ್ಟ ಎಂದು ಸ್ನೇಹಾ ವಿವರಿಸಿದ್ದಾರೆ. ಬೆಂಗಳೂರು ತನಗೆ ಸುರಕ್ಷಿತ ಭಾವನೆ ಹಾಗೂ ಮನೆಯಂತಹ ಅನುಭವ ನೀಡುತ್ತದೆ, ಎಷ್ಟೇ ಹಣ ಕೊಟ್ಟರೂ ಆ ಭಾವನೆಯನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಜೀವನದಲ್ಲಿ ನೆಮ್ಮದಿಯ ಹುಡುಕಾಟ
ಸ್ನೇಹಾ ಅವರ ಮೊದಲ ಉದ್ಯೋಗದಲ್ಲಿ ಕೆಲಸದ ವಾತಾವರಣ ಉತ್ತಮವಾಗಿರಲಿಲ್ಲ, ಇದರಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಹಾಗಾಗಿ ಈ ವರ್ಷದ ಜನವರಿಯಲ್ಲಿ ಹೊಸ ಉದ್ಯೋಗ ಹುಡುಕಲು ಆರಂಭಿಸಿದಾಗ, ಕಲಿಯಲು ಮತ್ತು ಬೆಳೆಯಲು ಪೂರಕವಾದ, ಸ್ಥಿರ ಹಾಗೂ ಸುರಕ್ಷಿತ ವಾತಾವರಣವನ್ನು ಅವರು ಬಯಸಿದ್ದರು.
ವೃತ್ತಿಪರ ಗಾಯಕಿಯೂ ಆಗಿರುವ ಇವರು, ಕಚೇರಿ ಕೆಲಸದ ನಂತರ ಸಂಗೀತ ಅಭ್ಯಾಸಕ್ಕೂ ಸಮಯ ಮೀಸಲಿಡುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಅವರ ಸಹೋದರ ಮತ್ತು ಅತ್ತಿಗೆ ವಾಸವಿದ್ದು, ಶಾಲಾ-ಕಾಲೇಜಿನ ಸ್ನೇಹಿತರೂ ಇಲ್ಲೇ ಇದ್ದಾರೆ. ಕುಟುಂಬ, ಸ್ನೇಹಿತರು ಮತ್ತು ನೆಚ್ಚಿನ ಹವಾಮಾನವನ್ನು ನೀಡುವ ಈ ನಗರದ ಅನುಭವವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಳ್ಳುತ್ತಾರೆ. ಸದ್ಯಕ್ಕೆ ಈ ನಗರವನ್ನು ಇನ್ನಷ್ಟು ಅನುಭವಿಸಬೇಕಿದೆ, ಸೂಕ್ತ ಸಮಯ ಬಂದಾಗ ಬೇರೆಡೆಗೆ ಹೋಗುವ ಬಗ್ಗೆ ಯೋಚಿಸಬಹುದು ಎಂದು ಸ್ನೇಹಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications