ಕರ್ನಾಟಕ: YST ತೆರಿಗೆ ಪಾವತಿಸದಿದ್ದರೆ ವರ್ಗಾವಣೆ ಆದೇಶ ಕಸದ ಬುಟ್ಟಿಗೆ: CMO ಅಂದರೆ ಭ್ರಷ್ಟಾಚಾರ ನಿರ್ವಹಣಾ ಕಚೇರಿ
ಬೆಂಗಳೂರು, ಜಲೈ 05: ರಾಜ್ಯ ರಾಜಕಾರಣದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸಿಡಿಸಿದ್ದ ಹೊಸ ಬಾಂಬ್ ವೈಎಸ್ ತೆರಿಗೆ (YST) ವಿಚಾರ ಸದ್ದು ಮುಂದುವರಿಸಿದೆ. ಶಿಫಾರಸ್ಸಿನಂತೆ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಉಪ ನಿರ್ದೇಶಕರ ವರ್ಗಾವಣೆ ಆದೇಶ ಕೈ ಸೇರಬೇಕಾದರೆ ವೈಎಸ್‌ಟಿ ತೆರಿಗೆ ಕಡ್ಡಾಯ ಎಂದು ಜೆಡಿಎಸ್ ಪಕ್ಷ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಾಗ್ದಾಳಿ ನಡೆಸಿದೆ.
ಇದು ಪಾರದರ್ಶಕವಷ್ಟೇ ಅಲ್ಲ, 'ಅಪಾರ'ದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿ! ಏಕೆಂದರೆ, @CMofKarnataka ದಿಂದ ನಡೆಯುವ ವರ್ಗಾವಣೆ, ಶಿಫಾರಸ್ಸಿನ ಟಿಪ್ಪಣಿಗಳ ಬಿಕರಿಗೆ ಇಲ್ಲಿದೆ ಇನ್ನೊಂದು ಸಾಕ್ಷ್ಯ, ಅಲ್ಲಿನವರಿಗೆ ಇದೇ ಪಂಚಭಕ್ಷ್ಯ. 1/3#YstTax #CashForPosting pic.twitter.com/tOOBhR0Qvh
— Janata Dal Secular (@JanataDal_S) July 5, 2023
ಈ ವಿಚಾರ ಕುರಿತು ಸ್ಥಳಿಯ ಆಡಳಿತ ಪಕ್ಷ ಜನತಾದಳ (ಜಾತ್ಯಾತೀತ) ಸರಣಿ ಟ್ವೀಟ್ ಮಾಡಿದೆ. ಅದರಲ್ಲಿ, ಸಿಎಂಒ (CMO) ಅಂದರೆ ಕರ್ನಾಟಕದ ಮುಖ್ಯಮಂತ್ರಿಗಳು (CMofKarnataka) ಎಂದುಕೊಂಡಿದ್ದ ಕನ್ನಡಿಗರಿಗೆ ಅದು ಈಗ ಭ್ರಷ್ಟಾಚಾರ ನಿರ್ವಹಣಾ ಕಚೇರಿ (Corruption Management Office) ಆಗಿದೆ ಎನ್ನುವುದು ಅರ್ಥವಾಗಿದೆ.

ಏಕೆಂದರೆ ಈ ಕಚೇರಿಯಲ್ಲಿ ವೈಎಸ್‌ಟಿ ತೆರಿಗೆ ಪಾವತಿಸದಿದ್ದರೆ ವರ್ಗಾವಣೆ ಆದೇಶಗಳೆಲ್ಲ ಮುಲಾಜಿಲ್ಲದೆ ಕಸದ ಬುಟ್ಟಿ ಸೇರುತ್ತವೆ ಎಂದು ಜೆಡಿಎಸ್ ಕುಟುಕಿದೆ. ಅಲ್ಲದೇ ಟ್ವೀಟ್ ನಲ್ಲಿ ವೈಎಸ್‌ಟಿ ತೆರಿಗೆ ಹ್ಯಾಷ್‌ಟ್ಯಾಗ್ (#YstTax) ಹಾಕಿ ರಾಜ್ಯ ಸರ್ಕಾರಕ್ಕೆ ತಿವಿದಿದೆ.
'ಕೈ' ಬೆಚ್ಚಗೆ ಆಗದಿದ್ದರೆ ಆದೇಶ ಕಸದ ಬುಟ್ಟಿಗೆ
ಜೆಡಿಎಸ್ ತನ್ನ ಟ್ವೀಟ್‌ನಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ನಾಲ್ಕು ಮಂದಿ ಉಪನಿರ್ದೇಶಕರ ವರ್ಗಾವಣೆ ಆದೇಶದ ಪ್ರತಿ ಪೋಸ್ಟ್ ಮಾಡಿದೆ. ಈ ವರ್ಗಾವಣೆ ಆದೇಶ ಜಾರಿಯಾದ ದಿನವೇ ಅದು ಕೈಗೆ ಸಿಗಬೇಕಾದರೆ #YstTax ಕಡ್ಡಾಯ. ಇಲ್ಲವಾದರೆ ತಪ್ಪಿದ್ದಲ್ಲ ಅನ್ಯಾಯ. 'ಕೈ' ಬೆಚ್ಚಗೆ ಆಗದಿದ್ದರೆ ವರ್ಗಾವಣೆ ಆದೇಶದ ಪ್ರತಿ ನೇರ ಕಸದ ಬುಟ್ಟಿಗೆ ಹೋಗುವುದು 'ಗ್ಯಾರಂಟಿ' ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿಸಿದೆ.
ರಾಜ್ಯ ಸರ್ಕಾರದ ಆಡಳಿತ ಕುರಿತು ವ್ಯಂಗ್ಯವಾಡಿರುವ ಜೆಡಿಎಸ್ ಇದು ಪಾರದರ್ಶಕವಷ್ಟೇ ಅಲ್ಲ, 'ಅಪಾರ'ದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿ. ಏಕೆಂದರೆ ರಾಜ್ಯದ ಮುಖ್ಯಮಂತ್ರಿಗಳಿಂದ ನಡೆಯುವ ವರ್ಗಾವಣೆ, ಶಿಫಾರಸ್ಸಿನ ಟಿಪ್ಪಣಿಗಳ ಬಿಕರಿಯಾಗುತ್ತವೆ ಎಂಬುದಕ್ಕೆ ಈ ವರ್ಗಾವಣೆ ಆದೇಶಗಳೇ ಸಾಕ್ಷಿ. ಅಕ್ರಮ ನಡೆಸುತ್ತಿರುವವರಿಗೆ ಇದೊಂದು ಪಂಚಭಕ್ಷ್ಯ ಎಂದು ಜರಿದಿದೆ.

ಜಿಎಸ್‌ಟಿ ಇರುವಂತೆ ರಾಜ್ಯದಲ್ಲಿ ವೈಎಸ್‌ಟಿ ಇದೆ
ಇತ್ತೀಚೆಗಷ್ಟೇ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು, ದೇಶದಲ್ಲಿ 'ಜಿಎಸ್‌ಟಿ' ಇರುವಂತೆ ಕರ್ನಾಟಕದಲ್ಲಿ 'ವೈಎಸ್‌ಟಿ' ಇದೆ ಎಂದು ಹೇಳಿದ್ದರು. ಈ ಹೊಸ 'ವೈಎಸ್‌ಟಿ' ಸಂಗ್ರಹ ಬಗ್ಗೆ ನಾನು ಮಾಹಿತಿ ಸಂಗ್ರಹಿಸಿದ್ದೇನೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅವರು ವಾಗ್ದಾಳಿ ನಡೆಸಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಕುಮಾರಸ್ವಾಮಿಗೆ ತಿರುಗೇಟು ನೀಡಿದ ಕಾಂಗ್ರೆಸ್
ಈ ಕುರಿತು ಮಂಗಳವಾರ ಟ್ವೀಟ್ ಮಾಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದ ಕಾಂಗ್ರೆಸ್, ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಒಂದು ದಿನದ ಬಾಡಿಗೆ ಎಷ್ಟು? ನೀವು (ಎಚ್‌ಡಿ ಕುಮಾರಸ್ವಾಮಿ) ಆ ಹೋಟೆಲಿನಲ್ಲಿ ಒಂದು ಖಾಯಂ ಅಡ್ಡ ತೆರೆದಿದ್ದೀರಿ, ಹಾಗಾದರೆ ಅದಕ್ಕೆ ಕೋಟಿ ಪಾವತಿಸಿದ್ದೀರಿ ಎಂದು ಪ್ರಶ್ನಿಸಿತ್ತು.
ಆ ಹೋಟೆಲಿನಲ್ಲಿನ ನಿಮ್ಮ ಅಡ್ಡಕ್ಕೆ ಬಾಡಿಗೆ ಕಟ್ಟಲು ನೀವೇನು ಉಳುಮೆ ಮಾಡಿ ಬಾಡಿಗೆ ಕಟ್ಟಿದ್ದೀರಾ? ಅಥವಾ "KST" ಸಂಗ್ರಹದ ಹಣ ಬಳಸಿ ಬಾಡಿಗೆ ಕಟ್ಟಿದ್ದೀರಾ? ಇದಕ್ಕೆ ನೀವೆ ಕೆಎಸ್‌ಟಿ ಕುಮಾರ್ ಉತ್ತರಿಸಬೇಕು ಎಂದು ಹ್ಯಾಷ್ ಟ್ಯಾಗ್ ಹಾಕಿ (#KSTkumara) ಕಾಂಗ್ರೆಸ್ ಎದಿರೇಟು ಕೊಟ್ಟಿತ್ತು. ಅದರ ಬೆನ್ನಲ್ಲೆ ಜೆಡಿಎಸ್ ಮತ್ತೆ ಕಾಂಗ್ರೆಸ್ ವಿರುದ್ಧ ಕಾಳಗ ಮುಂದುವರಿಸಿದೆ.












Click it and Unblock the Notifications