"ಮಹಾರಾಷ್ಟ್ರದ ಧ್ವಜಕ್ಕೆ ಜೈಕಾರ ಹಾಕುವವರು ಮಹಾರಾಷ್ಟ್ರಕ್ಕೇ ಹೋಗಲಿ!"
ಬೆಂಗಳೂರು, ಆಗಸ್ಟ್ 31: "ಮಹಾರಾಷ್ಟ್ರದ ಧ್ವಜ ಹಿಡಿದು ಜೈಕಾರ ಹಾಕುವವರು ಮಹಾರಾಷ್ಟ್ರಕ್ಕೇ ಹೋಗಲಿ, ಕರ್ನಾಟಕದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಯಾಕಿದ್ದಾರೆ?" ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ನೀಡಿದ ಪ್ರತಿಕ್ರಿಯೆ ಇದು.
ಬೆಳಗಾವಿಯ ಬಸರೀಕಟ್ಟೆ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಲಕ್ಷ್ಮಿ ಹೆಬ್ಬಾಳ್ಕರ್, 'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ, ಮೊದಲು ನಾನೇ ಮಹಾರಾಷ್ಟ್ರದ ಧ್ವಜ ಹಿಡಿದು ಜೈಕಾರ ಹಾಕುತ್ತೇನೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹೇಳಿಕೆ ಕರ್ನಾಟಕದಾದ್ಯಂತ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಮರಾಠಿಗರ ಮತಸೆಳೆಯೋಕೆ, ಸ್ವಾಭಿಮಾನ ಮರೆತು ಇಂಥ ಮಾತನಾಡುವ ಅಗತ್ಯವಿತ್ತೆ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕರವೇ ಅಧ್ಯಕ್ಷ ನಾರಾಯಣ ಗೌಡ, 'ಮಹಾರಾಷ್ಟ್ರಕ್ಕೆ ಜೈಕಾರ ಹಾಕುವವರು ಮಹಾರಾಷ್ಟ್ರಕ್ಕೇ ಹೋಗಲಿ, ಮರಾಠಿಗರ ಮತ ಸೆಳೆಯೋದಕ್ಕೆ ಇಂಥ ಹೇಳಿಕೆ ನೀಡುವ ಅಗತ್ಯವಿತ್ತೆ? ಇಂಥವರು ಕರ್ನಾಟಕದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಯಾಕಿದ್ದಾರೆ?' ಎಂದು ತೀಕ್ಷ್ಣವಾಗಿ ಪ್ರತಿಪ್ರಶ್ನೆಹಾಕಿದರು.
ಬೆಳಗಾವಿಯ ರಾಜಕಾರಣಿಗಳು ಕನ್ನಡಿಗರ ಸ್ವಾಭಿಮಾನ ಕಾಯುವ ಕೆಲಸ ಮಾಡಬೇಕಿತ್ತು. ಆದರ ವೋಟಿಗಾಗಿ ಮರಾಠಿಗರನ್ನು ಓಲೈಸುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದು ಅವರು ಪ್ರತಿಕ್ರಿಯಿಸಿದರು.












Click it and Unblock the Notifications