ನಾನೀಗ ಒಬ್ಬಂಟಿ ಎಂದು ಕಣ್ಣೀರಿಟ್ಟ 'ಕೈ' ಅಭ್ಯರ್ಥಿ
ಬೆಂಗಳೂರು, ಡಿಸೆಂಬರ್ 04: ಕಾಂಗ್ರೆಸ್ ಪಕ್ಷದ ಮಹಾನಗರ ಪಾಲಿಕೆ ಸದಸ್ಯರು ಉಪ ಚುನಾವಣೆಯಲ್ಲಿ ನನ್ನ ಬೆಂಬಲಕ್ಕೆ ಬರಲಿಲ್ಲ ಎಂದು ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ತಮ್ಮ ಬೆಂಬಲಿಗರ ಎದುರು ಕಣ್ಣೀರಿಟ್ಟಿದ್ದಾರೆ.
ನಾವು ಹಣಪಡೆದು ಪ್ರಚಾರ ಮಾಡುವುದಾಗಿ ಎಲ್ಲರೂ ಕೈ ಕೊಟ್ರು, ಮೊದಲು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿ ನಂತರ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಈಗ ಎಲ್ಲವನ್ನೂ ಕಳೆದುಕೊಂಡಿದ್ದೇನೆ ನಾನೇನ್ ಮಾಡ್ಲಿ..? ಎಂದು ನಿನ್ನೆ ರಾತ್ರಿ ತಮ್ಮ ಆಪ್ತರ ಮುಂದೆ ಕಣ್ಣೀರಾಕಿದ್ದಾರೆ.
ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಿಬಿಎಂಪಿ ಸದಸ್ಯರು ಕ್ಷೇತ್ರದ ಅನರ್ಹ ಶಾಸಕ ರೋಶನ್ ಬೇಗ್ ಅವರ ಬೆಂಬಲಿಗರಾಗಿದ್ದಾರೆ. ರೋಶನಗ ಬೇಗ್ ಅವರು ಬಿಜೆಪಿ ಬೆಂಬಲಿಸಲು ತಮ್ಮ ಅನುಯಾಯಿಗಳಿಗೆ ಇತ್ತಿಚೀಗೆ ಕರೆ ಕೊಟ್ಟಿದ್ದರು.

ಹೀಗಾಗಿ ನಿನ್ನೆ ರಾತ್ರಿ ಸೇರಿದ್ದ ಸಭೆಯಲ್ಲಿ ಅವರು ತಮ್ಮ ಕಾರ್ಯಕರ್ತರ ಬಳಿ ನೋವು ತೋಡಿಕೊಂಡರು, ಈ ವೇಳೆ ರಿಜ್ವಾನ್ ಅರ್ಷದ್ ಅವರಿಗೆ ಧೈರ್ಯ ತುಂಬಿದ ಅವರ ಬೆಂಬಲಿಗರು, ಹೆದರಬೇಡಿ, ಯಾರೆ ಕೈಕೊಟ್ಟರೂ ನಿಮ್ಮ ಬೆಂಬಲಿಕ್ಕೆ ನಾವಿದ್ದೇವೆ, ಈ ಉಪ ಚುನಾವಣೆಯಲ್ಲಿ ನೀವೇ ಹೆಚ್ಚಿನ ಅಂತರದಿಂದ ಗೆಲ್ಲೋದು ಎಂದು ಹೇಳಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸರವಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್, ಜೆಡಿಎಸ್ ಅಭ್ಯರ್ಥಿಯಾಗಿ ತನ್ವೀರ್ ಅಹ್ಮದ್ ಉಪ ಚುನಾವಣಾ ಆಖಾಡದಲ್ಲಿದ್ದಾರೆ, ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications