BDA: ಬೆಂಗಳೂರು ನಗರದ ಪ್ರಮುಖ ರಸ್ತೆ ಯೋಜನೆಗೆ ಸಿಕ್ಕಿತು ಅನುದಾನ
ಬೆಂಗಳೂರು, ನವೆಂಬರ್ 06: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಮಹತ್ವದ ಯೋಜನೆಗೆ ಅನುದಾನ ಸಿಕ್ಕಿದೆ. ನಗರದ ಬಹು ನಿರೀಕ್ಷಿತ 73 ಕಿ. ಮೀ. ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ನಿರ್ಮಾಣಕ್ಕೆ ಸುಮಾರು 27,000 ಕೋಟಿ ರೂ.ಗಳನ್ನು ಒಂದೇ ಸಂಸ್ಥೆ ನೀಡಲಿದೆ. ಪಿಆರ್‌ಆರ್ ಅನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕಾರಣ ಮಾಡಿ, ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಅಗತ್ಯವಿರುವ ಶೇ 100ರಷ್ಟು ಅನುದಾನವನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೊ) ನೀಡಲಿದೆ. ಈ ಕುರಿತು ಲಿಖಿತವಾಗಿ ಸಹ ಹುಡ್ಕೊ ಭರವಸೆಯನ್ನು ಕೊಟ್ಟಿದೆ. ಆದ್ದರಿಂದ ಯೋಜನೆಗೆ ವೇಗ ಸಿಗಲಿದೆ.

ಈಗಾಗಲೇ ಬಿಡಿಎ ಬಿಬಿಸಿ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲು ಅಧಿಕಾರಿಗಳನ್ನು ನೇಮಕ ಮಾಡಿದೆ. ಯೋಜನೆ ವ್ಯಾಪ್ತಿಗೆ ಬರುವ ಭೂ ಮಾಲೀಕರಿಗೆ ಭೂ ಸ್ವಾಧೀನ ಕಾಯ್ದೆ, 1984ರ ಅಡಿ ನೋಟಿಸ್ ನೀಡಲಾಗುತ್ತಿದೆ. ಈಗ ಯೋಜನೆಗೆ ಹಣಕಾಸಿನ ನೆರವು ಸಹ ಸಿಕ್ಕಿದ್ದು, ಯೋಜನೆ ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದೆ.
ಕಛೇರಿಗಳು ಆರಂಭ: ಬಿಬಿಸಿ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲು 8 ಕೆಎಎಎಸ್ ಅಧಿಕಾರಿಗಳನ್ನು ಬಿಡಿಎ ನೇಮಕ ಮಾಡಿದೆ. ಒಂದು ಹೊಸ ಕಛೇರಿಯನ್ನು ಯಲಹಂಕದಲ್ಲಿ ತೆರೆಯಲಾಗಿದೆ. ಯೋಜನೆಗೆ 76 ಹಳ್ಳಿಗಳ ಸುಮಾರು 1,810 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಎಲ್. ಕೆ. ಅತೀಕ್ ಅವರನ್ನು ಬಿಬಿಸಿ ಯೋಜನೆ ಜಾರಿಯ ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ.
ಬಿಡಿಎ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸೋಮವಾರ ಬಿಡಿಎ ಕಚೇರಿಯಲ್ಲಿ ಅಧ್ಯಕ್ಷ ಎನ್. ಎ. ಹ್ಯಾರೀಸ್, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ ಅತೀಕ್, ಬಿಡಿಎ ಆಯುಕ್ತರಾದ ಎನ್. ಜಯರಾಮ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಬಿಬಿಸಿ ಯೋಜನೆಯ ಪ್ರಗತಿ, ನಗರದ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಗಳ ಕುರಿತು ಸಭೆಯನ್ನು ನಡೆಸಿದ್ದಾರೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ತುಮೂರು ರಸ್ತೆ-ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಇದು ದೊಡ್ಡಬಳ್ಳಾಪುರ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮೂಲಕ ಸಾಗುತ್ತದೆ. ಯೋಜನೆಗೆ ಸರ್ಕಾರದ ಸುಮಾರು 193 ಎಕರೆ ಜಾಗವನ್ನು ಬಳಕೆ ಮಾಡಲಾಗುತ್ತದೆ. ಇದನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಚುರುಕುಗೊಳಿಸಲು ಸೂಚನೆ ನೀಡಲಾಗಿದೆ. 2022ರಲ್ಲಿನ ಆದೇಶದಂತೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ಯೋಜನೆಗೆ ನೀಡಲಾಗುತ್ತದೆ.
ಯೋಜನೆ ವ್ಯಾಪ್ತಿಗೆ ಸೇರುವ ಭೂ ಮಾಲೀಕರಿಗೆ ಭೂ ಸ್ವಾಧೀನ ಕಾಯ್ದೆ, 1984ರ ಅಡಿ ನೋಟಿಸ್ ನೀಡಲಾಗುತ್ತದೆ. ಈ ಯೋಜನೆಗೆ ಭೂಮಿ ನೀಡುವ ರೈತರು ಈಗಿರುವ 2013ರ ನಿಯಮಗಳ ಅನ್ವಯ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಬಹುದು. ಹೊಸ ಭೂಮಿಯ ಪರಿಹಾರ ಹಂಚಿಕೆ ಮಾಡುವುದೇ ಯೋಜನೆಯ ಪ್ರಮುಖ ಸವಾಲು ಎಂದು ಪರಿಗಣಿಸಲಾಗಿದೆ.
ಸುಮಾರು 4 ಸಾವಿರ ಭೂ ಮಾಲೀಕರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಭೂ ಮಾಲೀಕರಿಗೆ ನೋಟಿಸ್ ನೀಡುವ ಬಿಡಿಎ ಭೂ ಸ್ವಾಧೀನ ಅಧಿಕಾರಿಗಳು, ತಮ್ಮ ಭೂ ಮಾಲೀಕತ್ವದ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ಕೊಡಲಿದ್ದಾರೆ. ಯೋಜನೆಗೆ ಭೂಮಿ ವಶಕ್ಕೆ ಪಡೆದುಕೊಳ್ಳಲು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಕೆ ಮಾಡಿ ಎಂದು ನೋಟಿಸ್‌ನಲ್ಲಿ ತಿಳಿಸಲಿದ್ದಾರೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಅನುದಾನ ನೀಡುವ ಕುರಿತು ಇರುವ ಪ್ರಕ್ರಿಯೆ ಪೂರ್ಣಗೊಳಿಸಲು ಹುಡ್ಕೋ ಜನರಲ್ ಮ್ಯಾನೇಜರ್ ಶೀಘ್ರವೇ ಬಿಡಿಎ ಕಛೇರಿಗೆ ಭೇಟಿ ನೀಡಲಿದ್ದಾರೆ. ಅನುದಾನ ಹಂಚಿಕೆ, ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ತನಕ ಬಿಬಿಸಿ ಯೋಜನೆಗೆ ಟೆಂಡರ್ ಕರೆಯದಿರಲು ಬಿಡಿಎ ತೀರ್ಮಾನಿಸಿದೆ.
ಕರ್ನಾಟಕ ಸರ್ಕಾರ ಈ ಹಿಂದೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಬಯಸಿತ್ತು. ಆದರೆ ಯಾರೂ ಸಹ ಯೋಜನೆ ಟೆಂಡರ್ ಪಡೆಯಲು ಮುಂದೆ ಬಂದಿಲ್ಲ. ಆದ್ದರಿಂದ ಸೆಪ್ಟೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಏಕಾಂಗಿಯಾಗಿ ಯೋಜನೆ ನಿರ್ಮಾಣ ಮಾಡಲು ತೀರ್ಮಾನಿಸಿದೆ.












Click it and Unblock the Notifications