ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲಿಗೆ ಹೊಸ ಬೋಗಿ: ಪ್ರಯಾಣಿಕರ ಹರ್ಷ
ಬೆಂಗಳೂರು: 2026ರ ಹೊಸ ವರ್ಷದಿಂದ ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಿಗೆ ಸಂಪರ್ಕಿಸುವ ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲಿಗೆ ಆಧುನಿಕ ಮತ್ತು ಜರ್ಮನ್ ತಂತ್ರಜ್ಞಾನದ ವಿನ್ಯಾಸದಲ್ಲಿ ತಯಾರಿಸಲಾದ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಹೊಸ ಬೋಗಿ ಸಹಿತ ರೈಲು ಕಾರ್ಯಾಚರಣೆ ನಡೆಸಿದ್ದು, ರೈಲಿನ ಹೊಸ ಅವತಾರ ಇಷ್ಟ ಪಟ್ಟ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತೀಯ ರೈಲ್ವೆಯು ದೇಶದ ವಿವಿಧ ಮಾರ್ಗಗಳಲ್ಲಿ 2026ರಿಂದ ಹಂತ ಹಂತವಾಗಿ ಸೂಪರ್ ಫಾಸ್ಟ್ ರೈಲುಗಳ ಹಾಲಿ ಸಾಂಪ್ರದಾಯಿಕ ಬೋಗಿಗಳನ್ನು ಕ್ರಮೇಣ ಎಲ್‌ಎಚ್‌ಬಿ (Linke-Hofmann Busch) ಸುಧಾರಿತ ಬೋಗಿಗಳಿಗೆ ಬದಲಾಯಿಸಲಾಗುವುದು ಎಂದು ಈ ಹಿಂದೆ ಘೋಷಿಸಿತ್ತು. ಅದಕ್ಕಾಗಿ ಒಂದಷ್ಟು ಮಾರ್ಗದ ಸೂಪರ್ ಫಾಸ್ಟ್ ರೈಲುಗಳನ್ನು ಆಯ್ಕೆ ಮಾಡಿಕೊಂಡಿತ್ತು. ಅದರಲ್ಲಿ 16 ಬೋಗಿಗಳನ್ನು ಹೊಂದಿದ್ದ ಹುಬ್ಬಳ್ಳಿ-ಬೆಂಗಳೂರು ಮಾರ್ಗದ ಈ ರೈಲು ಒಂದು.

ಈ ವರ್ಷ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಹಳೆಯ ಬೋಗಿಗಳನ್ನು ಹೊಸ ಬೋಗಿಗಳಿಗೆ ಬದಲಾವಣೆಗೊಂಡ ಮೊದಲ ರೈಲು ಬೆಂಗಳೂರು-ಹುಬ್ಬಳ್ಳಿ ಮಾರ್ಗದ್ದಾಗಿದೆ. ಮತ್ತಷ್ಟು ಆರಾಮದಾಯಕ, ಸುರಕ್ಷಿತ ಸೇವೆ ಒದಗಿಸುವ ಬೋಗಿಗಳು ಇವಾಗಿವೆ. ಹೊಳೆಯುವ ಬೋಗಿಗಳನ್ನು ನೋಡಿದ ಪ್ರಯಾಣಿಕರು ಸಂತಸ ಹಂಚಿಕೊಂಡಿದ್ದಾರೆ. ಆದರೆ ಗುಟ್ಕಾ, ಪಾನ್ ಮಸಾಲ ಉಗಿಯುವವರ ಸಂಖ್ಯೆ ಕಡಿಮೆ ಏನು ಇಲ್ಲ. ಹೀಗಾಗಿ ಬೋಗಿಗಳ ಸ್ವಚ್ಛತೆಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಳವಳ ಸಹ ವ್ಯಕ್ತವಾಗಿದೆ. ಈ ಬಗ್ಗೆ ನೈಋತ್ಯ ರೈಲ್ವೆ ಸೂಕ್ತ ಕ್ರಮ ವಹಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ವಿಶೇಷವಾದ ಈ ಬೋಗಿಗಳು ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವ ಜೊತೆಗೆ ಅಪಘಾತದ ಸಂದರ್ಭದಲ್ಲಿ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. ಬೆಂಗಳೂರು-ಹುಬ್ಬಳ್ಳಿ ಮಾರ್ಗದ ರೈಲಿನ ಜೊತೆಗೆ ರಾಜ್ಯದ ಇತರ ಮಾರ್ಗದ ಸೂಪರ್‌ಫಾಸ್ಟ್ ರೈಲುಗಳಿಗೂ ಇದೇ ರೀತಿ ಬೋಗಿಗಳ ಬದಲಾವಣೆ ಹಂತ ಹಂತವಾಗಿ ಆಗಲಿದೆ.
ಎಲ್‌ಎಚ್‌ಬಿ ಕೋಚ್‌ಗಳ ವಿಶೇಷತೆಗಳೇನು?
1. ಅಲ್ಸ್ಟಾಮ್ ಜರ್ಮನ್ ತಂತ್ರಜ್ಞಾನದಿಂದ ಈ ಹೊಸ ಬೋಗಿಗಳನ್ನು ನಿರ್ಮಿಸಲಾಗಿದೆ.
2. ಸ್ಟೇನ್‌ಲೆಸ್ ಸ್ಟೀಲ್ ಬಾಡಿಗಳನ್ನು ಹೊಂದಿವೆ.
3. ಸುಧಾರಿತ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಇದರಲ್ಲಿದೆ.
4. ಪ್ರತಿ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ.
5. ಆಂಟಿ-ಕ್ಲೈಂಬಿಂಗ್ ಸಾಧನಗಳಂತಹ ವರ್ಧಿತ ಸುರಕ್ಷತಾ ಕಾರ್ಯವಿಧಾನ ಹೊಂದಿವೆ.
6. ಇತರ ಸುರಕ್ಷತಾ ವಿನ್ಯಾಸಗಳು ಇದರಲ್ಲಿವೆ.
ಹೊಸ ಬೋಗಿಗಳ ಉತ್ಪಾದನೆ ಹೆಚ್ಚಳ
ಭಾರತೀಯ ರೈಲ್ವೆ ಇಲಾಖೆ ಉದ್ದೇಶದಂತೆ ಹೊಸ ಬೋಗಿಗಳ ತಯಾರಿಕೆಯಲ್ಲಿ ಭಾರೀ ಪ್ರಗತಿ ಆಗಿದೆ. 2014 ರಿಂದ ಈವರೆಗೆ ಒಂದು ದಶಕದಲ್ಲಿ 42 ಸಾವಿರಕ್ಕೂ ಹೆಚ್ಚು ಬೋಗಿಗಳನ್ನು ತಯಾರಿಸಲಾಗಿದೆ. 2004 ರಿಂದ 2014ರವರೆಗೆ ಕೇವಲ 2300 ಬೋಗಿಗಳ ಉತ್ಪಾದನೆ ಆಗಿತ್ತು. ಹೊಸ ಬೋಗಿಗಳ ತಯಾರಿಕೆಯಲ್ಲಿ 18 ಪಟ್ಟು ಏರಿಕೆ ಆಗಿದೆ. ಈ ಬೋಗಿಗಳು ದೇಶದ ವಿವಿಧ ರೈಲುಗಳಿಗೆ ಅಳವಡಿಸುವ ಕೆಲಸ ಆಗುತ್ತಿದೆ.












Click it and Unblock the Notifications