ಠಾಣೆಯ ವ್ಯಾಪ್ತಿ ಅರಿಯಲು ಪೊಲೀಸ್ ಸಹಾಯವಾಣಿ
ಬೆಂಗಳೂರು, ಜ. 19: ನಗರದಲ್ಲಿ ಹಲವು ಬಾರಿ ಅವಘಡ ಸಂಭವಿಸಿದಾಗ ಆ ಪ್ರದೇಶಕ್ಕೆ ಸಂಬಂಧಪಡುವ ಪೊಲೀಸ್ ಠಾಣೆ ಅರಿಯುವುದು ಕಷ್ಟವಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಮೊಬೈಲ್ ಕಳೆದುಕೊಂಡಾಗ ಅಥವಾ ಅಪಘಾತ ಸಂಭವಿಸಿದಾಗ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ಈ ಪ್ರದೇಶ ನಮ್ಮ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರು ಉತ್ತರಿಸಿದ ಘಟನೆಗಳು ಹಲವು ಬಾರಿ ವರದಿಯಾಗಿವೆ.
ಪೊಲೀಸ್ ಠಾಣೆಯ ಕುರಿತು ಗೊಂದಲ ಕಂಡುಬಂದಲ್ಲಿ ಜನರಿಗೆ ಈಗ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ '100'ಕ್ಕೆ ಕರೆ ಮಾಡುವುದೊಂದೇ ದಾರಿ. ಅವಘಡ ನಡೆದ ಸ್ಥಳದಿಂದ 100 ಸಂಖ್ಯೆಗೆ ಕರೆ ಮಾಡಿದರೆ ಪೊಲೀಸರೇ ಸ್ಥಳಕ್ಕೆ ಬರುತ್ತಾರೆ ಎಂದು ನಿಯಂತ್ರಣ ಕೊಠಡಿಯವರು ತಿಳಿಸಿದ್ದಾರೆ. [ಬೈಕ್ ವ್ಹೀಲಿಂಗ್ ವಿರುದ್ಧ ಪೊಲೀಸ್ ಜಾಗೃತಿ]
ಪ್ರದೇಶಗಳ ವಿವರ ಇಲ್ಲ : ಅವಘಡ ಸಂಭವಿಸಿದಾಗ ದೂರು ನೀಡಲು ತೆರಳಿದ್ದ ವ್ಯಕ್ತಿಯೋರ್ವರಿಗೆ ಪೊಲೀಸ್ ಠಾಣೆಯವರು ಆ ಪ್ರದೇಶ ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ತಿಳಿಸಿದ್ದಾರೆ. ಯಾವ ಠಾಣೆ ವ್ಯಾಪ್ತಿಗೆ ಬರುತ್ತೆ ಎಂಬುದೂ ಅವರಿಗೆ ತಿಳಿದಿಲ್ಲ. ಸಮೀಪದ ಮತ್ತೊಂದು ಪೊಲೀಸ್ ಠಾಣೆಯಲ್ಲೂ ಇದೇ ಅನುಭವವಾಗಿದೆ.

ಅವರು ತಮಗುಂಟಾದ ಸಮಸ್ಯೆಯನ್ನು 'ಒನ್ಇಂಡಿಯಾ ಕನ್ನಡ'ದ ಹತ್ತಿರ ತೋಡಿಕೊಂಡಿದ್ದರು. ಈ ಕುರಿತು ಅರಿಯಲು ನಮ್ಮ ಪ್ರತಿನಿಧಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ವಿಚಾರಿಸಿದಾಗ ತಮ್ಮಲ್ಲಿಯೂ ಈ ಕುರಿತು ವಿವರ ಇಲ್ಲ ಡಿಸಿಪಿ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ವೆಬ್ ಸೈಟ್‌ನಲ್ಲಿ 'find your police station' ಕ್ಲಿಕ್ ಮಾಡಿದರೆ, ಬೆಂಗಳೂರು ನಗರದಲ್ಲಿರುವ ಪೊಲೀಸ್ ಠಾಣೆಗಳ ಪಟ್ಟಿ ಸಿಗುತ್ತದೆ. ಆದರೆ, ಇಲ್ಲಿರುವುದು ಪೊಲೀಸ್ ಠಾಣೆ, ಇಮೇಲ್ ಐಡಿ ಹಾಗೂ ದೂರವಾಣಿ ಸಂಪರ್ಕ ಸಂಖ್ಯೆ ಮಾತ್ರ. ಯಾವ ಪ್ರದೇಶ ಯಾವ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದರ ಕುರಿತು ವಿವರ ಇಲ್ಲ.
ಗೂಗಲ್ ಅರ್ಥ್ ಅಥವಾ ವೆಬ್‌ಸೈಟ್‌ನಲ್ಲಿ ವಿವರ ಹಾಕಲಿ
ಜನರು ಎದುರಿಸಿದ ಸಮಸ್ಯೆಯ ಕುರಿತು ಡಿಸಿಪಿ ಸಾರ್ವಜನಿಕ ಸಂಪರ್ಕಾಧಿಕಾರಿ ಅವರಲ್ಲಿ 'ಒನ್ಇಂಡಿಯಾ ಕನ್ನಡ' ತಿಳಿಸಿದಾಗ, ಈ ಕುರಿತು ಗೂಗಲ್ ಅರ್ಥನಲ್ಲಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸುವ ಯೋಚನೆ ಇದೆ ಎಂದು ತಿಳಿಸಿದ್ದಾರೆ. [ಪಾರ್ಕಿಂಗ್ ಲಾಟ್ ನಲ್ಲಿ ವಾಹನ ನಿಲ್ಲಿಸಬೇಡಿ]
ಜನರು ತಾವು ವಾಸಿಸುವ ಪ್ರದೇಶವು ಯಾವ ಪೊಲೀಸ್ ಠಾಣೆ ವ್ಯಾಪ್ತಿಗೊಳಪಡುತ್ತದೆ ಎಂಬುದರ ಕುರಿತು ಮಾಹಿತಿಯನ್ನು ಸುಲಭವಾಗಿ ತಿಳಿಯಲು ಅನುವಾಗುವಂತಹ ಸೌಲಭ್ಯವನ್ನು ಇಲಾಖೆ ಆದಷ್ಟು ಬೇಗ ಕಲ್ಪಿಸಬೇಕು. ಮನೆಮನೆಯಲ್ಲೂ ಅಂತರ್ಜಾಲ ವ್ಯವಸ್ಥೆ ಲಭ್ಯವಿರುವ ಕಾರಣ ಈ ಗೂಗಲ್ ಅರ್ಥ್ ಅಥವಾ ವೆಬ್ ಸೈಟ್‌ನಲ್ಲಿ ಮಾಹಿತಿ ಅರಿಯಲು ಪೊಲೀಸ್ ಇಲಾಖೆ ಸೌಲಭ್ಯ ಕಲ್ಪಿಸಬೇಕು.












Click it and Unblock the Notifications