ಪುತ್ರನ ಸಿನಿಮಾವೇ ಹುಟ್ಟು ಹಬ್ಬದ ಉಡುಗೊರೆ : ಕುಮಾರಸ್ವಾಮಿ
ಬೆಂಗಳೂರು, ಡಿಸೆಂಬರ್ 16 : ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ 57ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಅವರು ನಂತರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದರು.
ಬುಧವಾರ ಬೆಳಗ್ಗೆ ಬೆಂಗಳೂರಿನ ಯುಬಿ ಸಿಟಿ ಬಳಿ ಇರುವ ಫ್ಲ್ಯಾಟ್‌ನಲ್ಲಿ ಕುಮಾರಸ್ವಾಮಿ ಅವರು ಕಾರ್ಯಕರ್ತರ ಜೊತೆ ಕೇಕ್ ಕತ್ತರಿಸಿದರು. 'ಪ್ರತಿವರ್ಷವೂ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಜೊತೆ ಅವರ ಅಭಿಲಾಷೆಯಂತೆ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇನೆ' ಎಂದರು. [ಸಿದ್ದರಾಮಯ್ಯಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ ಮೋದಿ]

'ಈ ಬಾರಿಯ ಹುಟ್ಟುಹಬ್ಬದಂದು ಪುತ್ರ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾನೆ. ಸಂಜೆ ಮುಹೂರ್ತವಿದೆ. ಇದೇ ಈ ಬಾರಿಯ ಹುಟ್ಟುಹಬ್ಬದ ವಿಶೇಷವಾಗಿದೆ. ರಾಜಕೀಯ ಹೊರತು ಪಡಿಸಿ ಸಿನಿಮಾ ಕ್ಷೇತ್ರದಲ್ಲಿ ಮಗ ಜನರ ಮನೆಗೆಲ್ಲುತ್ತಾನೆ ಎಂಬ ವಿಶ್ವಾಸವಿದೆ' ಎಂದು ಹೇಳಿದರು. [ಮಗನಿಗೆ ಮರುನಾಮಕರಣ ಮಾಡಿದ ಕುಮಾರಸ್ವಾಮಿ]
ಒಟ್ಟಾಗಿ ಕೆಲಸ ಮಾಡುತ್ತೇವೆ : 'ಜೆಡಿಎಸ್ ಪಕ್ಷದಲ್ಲಿ ಕಳೆದ ಎರಡು ವರ್ಷಗಳಿಂದ ಹಲವಾರು ಗೊಂದಲಗಳಿವೆ. 2016ರ ಜನವರಿ 1ರಿಂದಲೇ ಎಲ್ಲಾ ಗೊಂದಲವನ್ನು ಬಗೆಹರಿಸಿಕೊಂಡು, ಎಲ್ಲಾ ನಾಯಕರನ್ನು ಒಗ್ಗೂಡಿಸಿ ಜನರ ಹಿತಕ್ಕಾಗಿ ಕೆಲಸ ಮಾಡುತ್ತೇವೆ' ಎಂದರು.
ಮಠಕ್ಕೆ ಭೇಟಿ : ಕೇಕ್ ಕತ್ತರಿಸಿದ ನಂತರ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ನಿರ್ಮಲಾನಾಂದ ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಸಿನಿಮಾದ ಮುಹೂರ್ತ : ಬುಧವಾರ ಸಂಜೆ 4.30ಕ್ಕೆ ಕುಮಾರಸ್ವಾಮಿ ಪತ್ರ ನಿಖಿಲ್ ಕುಮಾರ್ ಅವರ ಮೊದಲ ಚಿತ್ರ 'ಜಾಗ್ವಾರ್' ಮುಹೂರ್ತ ಸಮಾರಂಭವಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಹಿರಿಯ ನಟ ಅಂಬರೀಶ್, ರವಿಚಂದ್ರನ್ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. [ನಿಖಿಲ್ ಗೌಡ ಸಂದರ್ಶನ ಓದಿ]












Click it and Unblock the Notifications